DK Shivakumar:ಡಿ ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೊಡದಿದ್ದರೆ ಏನಾಗುತ್ತೆ? ಹೈಕಮಾಂಡ್ ಗೆ ಇರುವ ಆತಂಕವೇನು!?
ಬೆಂಗಳೂರು, ಮೇ 17: 2023 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಸಾಲು ಸಾಲು ಸಭೆಗಳು ನಡೆಯುತ್ತಿದೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ನಾಲ್ಕು ದಿನ ಕಳೆದರು ಇನ್ನೂ ಸಿಎಂ ಯಾರು ಎಂಬ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸುತ್ತಿದ್ದು, ಹೈಕಮಾಂಡ್ ನಾಯಕರಿಗೆ ತಲೆನೋವಾಗಿದೆ.
ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಈ ಇಬ್ಬರು ನಾಯಕರ ಜೊತೆಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರತ್ಯೇಕವಾಗಿ ಸಭೆ ನಡೆಸಿದರು. ಒಮ್ಮತದ ನಿರ್ಧಾರ ಮಾತ್ರ ಬಂದಿಲ್ಲ. ಇತ್ತ ರಾಹುಲ್ ಗಾಂಧಿ ಅವರು ಸಹ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಜೊತೆಗೆ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಬ್ಬರು ಪಟ್ಟು ಹಿಡಿದಿದ್ದು, ಹೈಕಮಾಂಡ್ ನಾಯಕರ ಚಿಂತೆಗೆ ಕಾರಣವಾಗಿದೆ.

ಇತ್ತ ಕಾಂಗ್ರೆಸ್ ನಲ್ಲಿ ಬಹುತೇಕ ಶಾಸಕರು ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಿ ಎಂದು ಲಿಖಿತ ರೂಪದಲ್ಲಿ ಮತ ಹಾಕಿದ್ದು, ಡಿ ಕೆ ಶಿವಕುಮಾರ್ ಪರ ಹೆಚ್ಚು ಶಾಸಕರು ಒಲವು ತೋರಿಲ್ಲ ಎಂದು ಹೇಳಲಾಗಿದೆ. ಇತ್ತ ಕಾಂಗ್ರೆಸ್ ದಿಗ್ವಿಜಯ ಸಾಧಿಸಲು ಈ ಇಬ್ಬರು ನಾಯಕರ ಪಾತ್ರ ಪಕ್ಷದಲ್ಲಿ ಹೆಚ್ಚಾಗಿದೆ. ಎಷ್ಟು ಸಂಧಾನ ನಡೆಸಿದರು ಇಬ್ಬರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಈ ಇಬ್ಬರಲ್ಲಿ ಯಾರಿಗೆ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದರೂ ಪಕ್ಷದ ಮೇಲೆ ಭಾರೀ ಪರಿಣಾಮ ಆಗುತ್ತದೆ ಎಂಬುದು ಹೈಕಮಾಂಡ್ ನಾಯಕರ ಚಿಂತೆಗೆ ಕಾರಣವಾಗಿದೆ.
ಬಹುಕೇತ ಸಿದ್ದರಾಮಯ್ಯ ಅವರನ್ನ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದ್ದು, ಸಿದ್ದರಾಮಯ್ಯ ಸಿಎಂ ಆದರೆ, ಕೆಪಿಸಿಪಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ನಡೆ ಏನು ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಅಲಂಕಾರಿಸಿದ ಬಳಿಕ ಪಕ್ಷ ಸಂಘಟನೆಯನ್ನು ಉತ್ತಮವಾಗಿ ನಿರ್ವಹಿಸಿರುವ ಡಿ ಕೆ ಶಿವಕುಮಾರ್ ಸಿಎಂ ಪಟ್ಟಕಾಗಿ ಪಟ್ಟು ಹಿಡಿದಿದು, ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಕೊಡದಿದ್ದರೆ ಮುಂದೆ ಏನಾಗಬಹುದು ಎಂಬ ಚರ್ಚೆಯೂ ಹೈಕಮಾಂಡ್ ಮಟ್ಟದಲ್ಲಿ ಜೋರಾಗಿ ನಡೆಯುತ್ತಿದೆ. ಪಕ್ಷಸಂಕಷ್ಟದ ಸಮಯದಲ್ಲಿದ್ದಾಗ ಕೆಳಮಟ್ಟದಿಂದಲೂ ಪಕ್ಷ ಸಂಘಟನೆಯನ್ನ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದೇನೆ, ನನಗೆ ಸಿಎಂ ಸ್ಥಾನ ಕೊಡಿ ಎಂಬುದು ಡಿ ಕೆ ಶಿವಕುಮಾರ್ ಅವರ ವಾದವಾಗಿದೆ. ಇತ್ತ ಡಿ ಕೆ ಶಿವಕುಮಾರ್ ಅವರ ವಾದವನ್ನ ಆಲಿಸಿರುವ ಹೈಕಮಾಂಡ್ ಗೆ ಮುಖ್ಯಮಂತ್ರಿ ಆಯ್ಕೆ ವಿಚಾರವೇ ಸವಾಲಾಗಿದೆ.

ಒಂದು ವೇಳೆ ಏನಾದರೂ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಕಾಂಗ್ರೆಸ್ ಪಕ್ಷದ ಮೇಲೆ ಖಂಡಿತ ಪರಿಣಾಮ ಬೀರುವ ಸಾಧ್ಯತೆ ಇದೆ. ಹಳೇ ಮೈಸೂರು ಭಾಗವೂ ಸೇರಿದಂತೆ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕೆ ಒಕ್ಕಲಿಗರ ಮತಗಳು ಜೆಡಿಎಸ್‌ನಿಂದ ಕಾಂಗ್ರೆಸ್ ಕಡೆ ವಾಲಿವೆ. ಈಗಾಗಲೇ ಒಕ್ಕಲಿಗ ಮಠಾಧೀಶರು ಕೂಡ ಬಹಿರಂಗವಾಗಿಯೇ ಡಿಕೆ ಶಿವಕುಮಾರ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಡಿ ಕೆ ಶಿವಕುಮಾರ್ ಅವರು ಅಧ್ಯಕ್ಷರಾದ ಬಳಿಕ ಹಳೇ ಮೈಸೂರು ಭಾಗದ ಕಡೆಗೆ ಹೆಚ್ಚಿನ ಒಲವು ತೋರಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಬರಲು ಒಕ್ಕಲಿಗ ಮತಗಳು ಪ್ರಮುಖ ಕಾರಣವಾಗಿವೆ. ಹೀಗಾಗಿ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡದಿದ್ದರೆ ಒಕ್ಕಲಿಗರ ಮತಗಳು ಕಾಂಗ್ರೆಸ್‌ನಿಂ ಮುಂದಿನ ದಿನಗಳಲ್ಲಿ ದೂರ ಆಗುವ ಸಾಧ್ಯತೆ ಇದೆ ಎಂಬುದು ಹೈಕಮಾಂಡ್ ನಾಯಕ ಆತಂಕಕ್ಕೂ ಕಾರಣವಾಗಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯನ್ನ ಎದುರಿಸಿ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಮಾಡಿದ್ದಾರೆ. ತಾವು ಮುಖ್ಯಮಂತ್ರಿ ಆಗಬೇಕೆಂದೇ ಕರ್ನಾಟಕ ಕಾಂಗ್ರೆಸ್ ಸಂಘಟನೆಗೆ ಭಾರೀ ವೇಗ ನೀಡಿದ ಡಿಕೆ ಶಿವಕುಮಾರ್ ಹೊಸ ಹೊಸ ತಂತ್ರಗಳ ಮೂಲಕ ಪಕ್ಷ ಸಂಘಟಿಸಿದ್ದಾರೆ. ಈಗ ಅವರಿಗೆ ಸಿಎಂ ಸ್ಥಾನ ನೀಡಿಲ್ಲ ಎಂದರೆ ಅವರು ತಟಸ್ಥರಾಗುವ ಸಾಧ್ಯತೆ ಇದೆ. ಇದು ಮುಂಬರುವ ಲೋಕಸಭಾ ಚುನಾವಣೆಯ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರಿಷ್ಠರು ಆತಂಕವನ್ನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇತ್ತ ಅಧ್ಯಕ್ಷ ಸ್ಥಾನವನ್ನ ವಹಿಸಿಕೊಂಡ ದಿನದಿಂದಲೂ ಇಲ್ಲಿಯವರೆಗೂ ಪಕ್ಷವನ್ನ ಸಜ್ಜುಗೊಳಿಸಿದ್ದಾರೆ. ಡಿಕೆ ಶಿವಕುಮಾರ್‌ಗೆ ಸಿಎಂ ಪಟ್ಟ ಸಿಗದಿದ್ದರೆ ಕಾರ್ಯಕರ್ತರಲ್ಲಿ ನಿರಾಸಕ್ತಿ ಉಂಟಾಗಬಹುದು. ಇನ್ನೂ ಪಕ್ಷದಲ್ಲಿ ಪಕ್ಷ ಸಂಘಟನೆ, ತ್ಯಾಗಕ್ಕೆ ಬೆಲೆ ಇಲ್ಲ ಎಂದು ಕಾರ್ಯಕರ್ತರೆಲ್ಲಾ ತಟಸ್ಥರು ಆಗುವ ಸಾಧ್ಯತೆ ಇದೆ.ಅಲ್ಲದೇ ಡಿ ಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ನ ಶಾಸಕರು ಪಕ್ಷ ಸಂಘಟನೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳಲ್ಲಿ ಆಸಕ್ತಿ ವಹಿಸದೇ ತಟಸ್ಥರಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಇನ್ನೂ ಪಕ್ಷ ಸಂಘಟನೆಯಲ್ಲಿ ಯುವ ಸಮುದಾಯವನ್ನ ಆಕರ್ಷಿಸಿರುವ ಡಿ ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಸಿಗಲಿದ್ದರೆ ಲೋಕಸಭಾ ಚುನಾವಣೆ ಮಾತ್ರವಲ್ಲದೇ, ಮುಂದೆ ಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಪ್ರಭಾವ ಬೀರಬಹುದು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications