ಪೌರ ಕಾರ್ಮಿಕರಿಗೆ ವಾರದ ಒಂದು ದಿನ ಪೂರ್ಣ ರಜೆ, ಷರತ್ತುಗಳು
ಬೆಂಗಳೂರು, ಜುಲೈ 02: ಕರ್ನಾಟಕ ಸರ್ಕಾರ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೌರ ಕಾರ್ಮಿಕರಿಗೆ ವಾರದಲ್ಲಿ ಒಂದು ದಿನದ ಪೂರ್ಣ ರಜೆ ನೀಡುವಂತೆ ಆದೇಶ ಹೊರಡಿಸಿದೆ.
ಈ ಕುರಿತು ಟಿ. ಮಂಜುನಾಥ, ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯಿಂದ ಈ ಕುರಿತು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರವನ್ನು ಬರೆಯಲಾಗಿದೆ.

ಈ ಪತ್ರ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವಾರದಲ್ಲಿ ಪೂರ್ತಿ ಒಂದು ದಿನ ರಜೆ ಘೋಷಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 12/09/2022 ರಂದು ನಡೆದ ಸಭೆಯ ನಿರ್ಣಯ ಮತ್ತು ದಿನಾಂಕ 29/01/2024ರ ಪತ್ರವನ್ನು ಉಲ್ಲೇಖ ಮಾಡಲಾಗಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸಭೆಯ ನಿರ್ಣಯ ಹಾಗೂ ದಿನಾಂಕ 29/01/2024ರ ಪತ್ರದ ಕಡೆಗೆ ತಮ್ಮ ಗಮನ ಸೆಳೆಯಲಾಗಿದೆ. ಸದರಿ ಪತ್ರದಲ್ಲಿ ಕೋರಿರುವ ಕುರಿತು ಪರಿಶೀಲಿಸಲಾಗಿದೆ ಎಂದು ಆದೇಶ ಹೇಳಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪ್ರಸ್ತುತ ವಾರಕ್ಕೆ ಎರಡು ಬಾರಿ ಅರ್ಧ ದಿನ ರಜೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ, ಷರತ್ತುಗಳನ್ನು ಪೂರೈಸಿಕೊಂಡು, ವಾರದಲ್ಲಿ ಪೂರ್ತಿ ಒಂದು ದಿನ ರಜೆ ಘೋಷಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಷರತ್ತುಗಳು
* ದಿನನಿತ್ಯದ ಸ್ವಚ್ಛತಾ ಕೆಲಸ, ಕಾರ್ಯಗಳಿಗೆ ತೊಂದರೆಯಾಗದಂತೆ ಶೇ 85 ರಷ್ಟು ಹಾಜರಾತಿ ಖಚಿತಪಡಿಸಿಕೊಂಡು ಒಂದು ರಜೆ ನೀಡುವುದು.
* ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ಕೆ ಈಗಾಗಲೇ ನೇಮಿಸಿರುವ ಸಿಬ್ಬಂದಿಗೆ ವಾರದ ರಜೆ ನೀಡುವ ಸಂದರ್ಭದಲ್ಲಿ ಬೇರೊಬ್ಬ ನೌಕರರನ್ನು ಸದರಿ ಕಾರ್ಯಕ್ಕೆ ನಿಯೋಜಿಸುವ ಮೇರೆಗೆ ರಜೆಯ ಅವಶ್ಯಕತೆಯಿರುವ ಪೌರಕಾರ್ಮಿಕರಿಗೆ ವಾರದಲ್ಲಿ ಒಂದು ದಿನ ರಜೆ ನೀಡಲು ಅವಕಾಶ ಕಲ್ಪಿಸಬಹುದು.
* ವಾರದ ರಜೆಯನ್ನು ನೌಕರರು/ ಪೌರ ಕಾರ್ಮಿಕರ ಹಕ್ಕು ಎಂದು ಪರಿಗಣಿಸತಕ್ಕದ್ದಲ್ಲ ಹಾಗೂ ಒಂದು ವಾರದ ಒಂದು ರಜೆಯನ್ನು ಮುಂದಿನ ವಾರಕ್ಕೆ ಹಿಂಬಾಕಿ ಎಂದು ಪರಿಗಣಿಸಿ ಸತತವಾಗಿ ರಜೆ ಪಡೆಯಲು ಅವಕಾಶವಿರುವುದಿಲ್ಲ.
* ಪ್ರಕೃತಿ ವಿಕೋಪ, ಸ್ಥಳೀಯ ಜಾತ್ರೆ, ಸಭೆ ಸಮಾರಂಭಗಳ ವಿಶೇಷ ಸಂದರ್ಭಗಳಲ್ಲಿ ವಾರದ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಒತ್ತಾಯಿಸುವಂತಿಲ್ಲ ಹಾಗೂ ಈ ಸಂದರ್ಭದಲ್ಲಿ ವಾರದ ರಜೆ ನೀಡುವ ಅಧಿಕಾರ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿವೇಚನೆಗೆ ಒಳಪಟ್ಟಿರುತ್ತದೆ.
* ರಜೆಯ ಮೇಲೆ ತೆರಳಿದ ನೌಕರ/ ಪೌರ ಕಾರ್ಮಿಕರ ವ್ಯಾಪ್ತಿಗೆ ಸೇರಿದ ಪ್ರದೇಶದ (Area) ಸ್ವಚ್ಛತಾ ಕಾರ್ಯವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸಕ್ಕೆ ಹಾಜರಾಗಿರುವ ಇತರೆ ಸಿಬ್ಬಂದಿಯಿಂದ ಸ್ವಚ್ಛಗೊಳಿಸತಕ್ಕದ್ದು.
* ಸದರಿಯವರಿಗೆ ಮೇಲ್ಕಂಡ 1ರಿಂದ 5ರ ಕ್ರಮ ಸಂಖ್ಯೆಯಂತೆ ಷರತ್ತಿಗೊಳಪಟ್ಟು ವಾರದ ಒಂದು ದಿನದ ರಜೆಯ ಸೌಲಭ್ಯವನ್ನು ನೀಡುತ್ತಿರುವುದರಿಂದ, ಪಸ್ತುತ ಸದರಿ ನೌಕರರುಗಳಿಗೆ ಸರ್ಕಾರದ ಆದೇಶ ದಿನಾಂಕ 15/07/2014ರ ಆದೇಶದಂತೆ 21 ದಿನಗಳ ವಿಶೇಷ ರಜಾ ಮುಂದುವರೆಸಬಹುದು.
ಪ್ರಸ್ತುತ ಪೌರ ಕಾರ್ಮಿಕರಿಗೆ ವಾರಕ್ಕೆ ಎರಡು ಬಾರಿ ಅರ್ಧ ದಿನ ರಜೆ ನೀಡಲಾಗುತ್ತಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರೊಬ್ಬರು ಹೇಳುವ ಪ್ರಕಾರ ಬುಧವಾರ, ಭಾನುವಾರ 11 ಗಂಟೆವರೆಗೂ ಕೆಲಸ ಆಮೇಲೆ ರಜೆ ಅಂತಾ ಹೇಳಿದ್ದರು. ಹಾಗೆಯೇ ಮಾಡಲಾಗುತ್ತಿತ್ತು.
ವಾರದ ಒಂದು ದಿನ ಪೂರ್ಣ ರಜೆ ಇರದ ಕಾರಣ ಆರೋಗ್ಯ ಸರಿ ಇಲ್ಲ, ಬೆಳಗ್ಗೆ ಬಯೋ ಮೆಟ್ರಿಕ್ ಹಾಜರಾತಿ ಹಾಕಿಲ್ಲ. ಒಂದು ದಿನ ಪೂರ್ತಿ ಊರಿಗೆ ಹೋಗುವುದಕ್ಕೆ ಆಗುವುದಿಲ್ಲ, ಸಮಾರಂಭಗಳಿಗೆ ಹೋಗಲು ಆಗುವುದಿಲ್ಲ ಎಂದು ಪೌರ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದರು.
ವಾರದ ಒಂದು ದಿನ ಸಂಪೂರ್ಣ ರಜೆ ನೀಡಿದರೆ ಅನುಕೂಲವಾಗುತ್ತದೆ ಎಂದು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದರು. ಈ ಬೇಡಿಗೆ ಈಗ ಸರ್ಕಾರ ಒಪ್ಪಿದ್ದು, ವಾರದಲ್ಲಿ ಒಂದು ದಿನ ಸಂಪೂರ್ಣ ರಜೆಯನ್ನು ನೀಡಿ ಆದೇಶ ಹೊರಡಿಸಿದೆ.












Click it and Unblock the Notifications