KIADB : ಈ ಜಮೀನಿನ ಭೂ ಮಾಲೀಕರಿಗೆ ಖಚಿತ ಉದ್ಯೋಗ: ಮಹತ್ವದ ಮಾಹಿತಿ ನೀಡಿದ ಎಂ.ಬಿ.ಪಾಟೀಲ್
ಬೆಂಗಳೂರು, ಮಾರ್ಚ್ 19: ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕುಗಳಲ್ಲಿ ಕೆಐಡಿಬಿ ಪ್ರದೇಶಕ್ಕೆ ವಶಪಡಿಸಿಕೊಳ್ಳಲಾದ ಜಮೀನಿನ ಭೂ ಮಾಲೀಕರು ಯಾರು ಪ್ರೋತ್ಸಹ ಧನ (Incentives) ಪಡೆದಿರುತ್ತಾರೋ ಅವರುಗಳಿಗೆ ಉದ್ಯೋಗ ಒದಗಿಸುವುದಾಗಿ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದರು.
ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಂ.ಎಲ್.ಅನಿಲ್‍ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಯಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆ.ಜಿ.ಎಫ್ ತಾಲೂಕುಗಳಲ್ಲಿ ಬಿಜಿಎಂಎಲ್ ವ್ಯಾಪ್ತಿಯಲ್ಲಿ 12,335.51 ಎಕರೆ ಹಾಗೂ ಬಿಇಎಂಎಲ್ ವ್ಯಾಪ್ತಿಯಲ್ಲಿ 1846 ಎಕರೆ ಜಮೀನಿರುತ್ತದೆ. ಬಿಜಿಎಂಎಲ್ ಹಾಗೂ ಬಿಇಎಂಎಲ್ ಸಂಸ್ಥೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ತಿಳಿಸಿದರು.

ಬಿಇಎಂಎಲ್ ಗೆ ನೀಡಿದ 1846 ಎಕರೆ ಜಮೀನಿನಲ್ಲಿ ಸಂಸ್ಥೆಯು ತನ್ನ ಉದ್ದೇಶಿತ ಕಾರ್ಯ ಚಟುವಟಿಕೆಗಳಿಗಾಗಿ ಉಪಯೋಗಿಸಿಕೊಂಡು ಸಂಸ್ಥೆಗೆ ಅವಶ್ಯವಿಲ್ಲದ 967.20 ಜಮೀನನ್ನು ಹೆಚ್ಚುವರಿ ಜಮೀನೆಂದು ನಿರ್ಧರಿಸಿ ಸರ್ಕಾರವು ಹಿಂತೆಗೆದುಕೊಂಡಿದೆ. ಬಿಜಿಎಂಎಲ್‍ನಿಂದ ಯಾವುದೇ ಜಮೀನನ್ನು ಹಿಂತೆಗೆದುಕೊಂಡಿರುವುದಿಲ್ಲ. ಬಿಇಎಂಎಲ್ ನಿಂದ ಹಿಂತೆಗೆದುಕೊಡ ಜಮೀನಿನ ಪೈಕಿ 658.20 ಎಕರೆ ಜಮೀನನ್ನು ಕೆಐಡಿಬಿಗೆ ಮಂಜೂರು ಮಾಡಲಾಗಿದೆ. ಕೆಐಡಿಬಿ ಯಿಂದ ಇಲ್ಲಿಯವರೆಗೆ ಯಾವುದೇ ಕಂಪನಿಗೆ ಹಂಚಿಕೆ ಮಾಡಿರುವುದಿಲ್ಲ. ಹಂಚಿಕೆ ದರ ನಿಗದಿ ಸಂಬಂಧ ಮಂಡಳಿಯ ಸಭೆಯಲ್ಲಿ ನಿರ್ಣಯಿಸಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ: ಸಿದ್ದರಾಮಯ್ಯ
ನುಡಿದಂತೆ ನಡೆಯುವ ಮೂಲಕ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ ಅಧಿವೇಶನದಲ್ಲಿ ತಿಳಿಸಿದರು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ವಂದಾರ್ಪಣೆ ಸಲ್ಲಿಸುವ ಪ್ರಸ್ತಾವದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳಿಗೆ ಸರಿದಾರಿ ತೋರಲು ಟೀಕೆಗಳು ಇರಬೇಕು.ಸತ್ಯವನ್ನು ಮರೆಮಾಚಿ ಟೀಕೆ ಮಾಡಬಾರದು. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ. ವಿರೋಧ ಪಕ್ಷಗಳು ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಬೇಕು ಹಾಗೂ ದಾಖಲಾತಿಗಳನ್ನು ಸದನದ ಮುಂದಿಡಬೇಕು. ಅದೇ ಸರಿಯಾದ ಮಾರ್ಗ ಎಂದರು.
ನಮ್ಮ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರೆಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಜಾರಿಗೆ ತರುವ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದ್ದೇವೆ. ಶಕ್ತಿ ಯೋಜನೆಯಡಿ 409 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ಇದು ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ ಶಕ್ತಿ ನೀಡಿದೆ. 1.26 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಡಿ 170 ರೂ.ಗಳನ್ನು ನೇರ ನಗದು ಪಾವತಿ (ಡಿಬಿಟಿ) ಮಾಡಲಾಗಿದೆ. ಒಟ್ಟಾರೆಯಾಗಿ 4 ಕೋಟಿಗೂ ಹೆಚ್ಚು ಜನ ಗ್ಯಾರಂಟಿಗಳಿಂದ ಲಾಭ ಪಡೆದಿದ್ದಾರೆ.
ನಾವು ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬಂದು ರಾಜ್ಯಕ್ಕೆ ತೆರಿಗೆಯೂ ಹೆಚ್ಚುತ್ತಿದೆ. 2024-25 ರ ಬಜೆಟ್ ನಲ್ಲಿ 52009 ಕೋಟಿಗಳನ್ನು ಗ್ಯಾರಂಟಿಗಳಿಗೆ ಇರಿಸಲಾಗಿದ್ದು, ಅದರಲ್ಲಿ 41560 ಕೋಟಿ ವೆಚ್ಚ ಮಾಡಲಾಗಿದೆ. ಈ ಬಾರಿಯ ಬಜೆಟ್ ಗಾತ್ರ 4,09,549 ಕೋಟಿಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿರಲು Fiscal responsibility Act ದಂತೆ ಇರುವ ಮಾನದಂಡಗಳನ್ನು ಪೂರೈಸಿರಬೇಕು. ನಾವು ಪೂರೈಸಿದ್ದೇವೆ. ಆರ್ಥಿಕ ಹೊಣಗಾರಿಕೆ ಅಧಿನಿಯಮದ ಮಾನದಂಡದಂತೆ, ಸಾಲದ ಮೊತ್ತ GSDP ಯ ಶೇ.25 ರಷ್ಟಿರಬೇಕು, ರಾಜ್ಯ ಶೇ.24.91 ರಷ್ಟರ ಮಿತಿಯಲ್ಲಿದೆ ಎಂದರು.












Click it and Unblock the Notifications