Bengaluru 2nd Airport: 2ನೇ ಏರ್‌ಪೋರ್ಟ್‌ಗೆ 'ಕೈ'ಪಾಳಯದಲ್ಲೇ ಪೈಪೋಟಿ: ಕೇಂದ್ರ ಸಚಿವರ ಭೇಟಿಗೆ ಮುಂದಾದ ಸಿದ್ದರಾಮಯ್ಯ ಆಪ್ತ
ಬೆಂಗಳೂರು, ಏಪ್ರಿಲ್ 10: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ವೇಗ ಸಿಕ್ಕಿದೆ. ಈಗಾಗಲೇ ಏರ್‌ಪೋರ್ಟ್ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ ಮೂರು ಸ್ಥಳಗಳನ್ನು ಗುರುತಿಸಿದೆ. ಈಗ ಆ ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಏರ್‌ಪೋರ್ಟ್ ಯಾವ ಭಾಗದಲ್ಲಿ ನಿರ್ಮಾಣವಾಗಲಿದೆ ಎಂಬುದು ಫೈನಲ್ ಆಗಲಿದೆ.
ಕನಕಪುರ ರಸ್ತೆಯ ಎರಡು ಹಾಗೂ ಕುಣಿಗಲ್ ರಸ್ತೆಯ ಒಂದು ಸ್ಥಳದ ಪರಿಶೀಲನೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದಾರೆ. ಆದರೆ, ಏರ್‌ಪೋರ್ಟ್ ನಿರ್ಮಾಣಕ್ಕೆ ಏನೆಲ್ಲಾ ಅಂಶಗಳನ್ನು ಎಎಐ ಪರಿಶೀಲಿಸುತ್ತಿದೆ ಎಂಬುದು ಜನರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಎರಡನೇ ವಿಮಾನ ನಿಲ್ದಾಣ ನಮ್ಮ ಭಾಗದಲ್ಲೇ ಆಗಬೇಕು ಎಂದು ಕಾಂಗ್ರೆಸ್ ನಾಯಕರಲ್ಲಿಯೇ ತೀವ್ರ ಪೈಪೋಟಿ ಶುರುವಾಗಿದೆ.

ಈ ಕುರಿತು ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ದೆಹಲಿಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಮಾತನಾಡಿ, ಶಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡುತ್ತೇವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 4,000 ಎಕರೆಯಲ್ಲಿ ನಿರ್ಮಾಣ ಆಗಿದೆ. ದೇಶದ ನಂಬರ್ ಒನ್ ವಿಮಾನ ನಿಲ್ದಾಣ ಬೆಂಗಳೂರು ವಿಮಾನ ನಿಲ್ದಾಣವಾಗಿದ್ದು, 5 ಕೋಟಿ ಜನ ಇಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬೆಂಗಳೂರಿಗೆ ಇರುವ ಮಾನ್ಯತೆ ಕಾರಣಕ್ಕೆ ಇಲ್ಲಿಗೆ ಹೆಚ್ಚಿನ ಜನ ಬರುತ್ತಾರೆ. 150 ಕಿ.ಮೀ ಅಂತರದಲ್ಲಿ ಇನ್ನೊಂದು ವಿಮಾನ ನಿಲ್ದಾಣ ಮಾಡಬೇಕು ಅಂತಿದೆ ಎಂದು ತಿಳಿಸಿದರು.
ಶಿರಾದಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಇವೆ. ಬೆಂಗಳೂರು, ಶಿರಾ ನಡುವೆ 1 ಗಂಟೆಯ ಪ್ರಯಾಣ. ಈ ಎಲ್ಲಾ ಕಾರಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಕೇಂದ್ರ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡುತ್ತೇವೆ. ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡುತ್ತೇವೆ. ಏರ್‌ಪೋರ್ಟ್ ಅಥಾರಿಟಿ ಅವರು ಇಷ್ಟು ಬೇಗ ಬರುತ್ತಾರೆ ಎಂದು ನಮಗೂ ಗೊತ್ತಿರಲಿಲ್ಲ. ಆದರೂ ಈಗಲೂ ಅವಕಾಶ ಇದೆ, ಶಿರಾದಲ್ಲಿ ಆಗುತ್ತಾ ಎಂಬುದನ್ನ ಪರಿಶೀಲಿಸಬಹುದು. ಏರ್‌ಪೋರ್ಟ್ 2032ಕ್ಕೆ ಆಗುತ್ತದೆ. ಇನ್ನೂ 8 ವರ್ಷ ಬೇಕು. ಶಿರಾದಲ್ಲಿ ಏರ್‌ಪೋರ್ಟ್ ಆದರೆ ಉತ್ತರ ಕರ್ನಾಟಕ ಸೇರಿದಂತೆ ಎಲ್ಲಾ ಭಾಗಕ್ಕೆ ಸಹಾಯವಾಗಲಿದೆ ಎಂದು ದೆಹಲಿಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಪ್ರಸ್ತಾವಿತ ಎರಡನೇ ವಿಮಾನ ನಿಲ್ದಾಣಕ್ಕಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮೂರು ಶಾರ್ಟ್‌ಲಿಸ್ಟ್ ಮಾಡಿದ ಸ್ಥಳಗಳನ್ನು ಪರಿಶೀಲಿಸುತ್ತಿದ್ದರೂ, ಬೆಂಗಳೂರಿನಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ತುಮಕೂರು ಜಿಲ್ಲೆಯ ಶಿರಾದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಬೆಂಬಲ ಹೆಚ್ಚುತ್ತಿದೆ. ಈ ಕುರಿತು ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಈ ಬೇಡಿಕೆಗೆ ಧ್ವನಿ ನೀಡಿದ್ದಾರೆ.
ಪಕ್ಷಾತೀತವಾಗಿ ಹಲವಾರು ಶಾಸಕರು, ಪ್ರಸ್ತಾವಿತ ವಿಮಾನ ನಿಲ್ದಾಣಕ್ಕೆ ಶಿರಾವನ್ನು ಸ್ಥಳವಾಗಿ ಆಯ್ಕೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಿಗೆ ಸಲ್ಲಿಸಿದ ಮನವಿಗೆ ಸಹಿ ಹಾಕಿದ್ದಾರೆ. ಈ ಅಭಿಯಾನದ ನೇತೃತ್ವವನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಶಾಸಕ ಟಿ.ಬಿ.ಜಯಚಂದ್ರ ವಹಿಸುತ್ತಿದ್ದಾರೆ.












Click it and Unblock the Notifications