DCM DK Shivakumar: ಇದು ಸಂಕಷ್ಟದ ವರ್ಷ; ನಾವು ದಿನನಿತ್ಯ ಪ್ರಾರ್ಥನೆ ಮಾಡುತ್ತಲೇ ಇದ್ದೇನೆ: ಡಿ ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 05: ನಮ್ಮ ರಾಜ್ಯದ ರೈತರ ಹಾಲಿ ಬೆಳೆಗಳನ್ನು ನಾವು ರಕ್ಷಣೆ ಮಾಡಿದ್ದೇವೆ. ಇದು ಸಮಾಧಾನದ ವಿಷಯ. ಈ ವರ್ಷ ಸಂಕಷ್ಟದ ವರ್ಷ. ನಾವು ದಿನನಿತ್ಯ ಪ್ರಾರ್ಥನೆ ಮಾಡುತ್ತಲೇ ಇದ್ದೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ರಾಜ್ಯದಲ್ಲಿ ಬರ ಘೋಷಣೆಯಾಗಿದ್ದು, ಮುಂದೆ ಯಾವುದೇ ಬೆಳೆ ಹಾಕಬಾರದು ಎಂದು ರೈತರಿಗೆ ಸೂಚಿಸಿದ್ದೇವೆ. ಮುಂದಿನ ತಿಂಗಳು ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ. ರೈತರ ಹಾಲಿ ಬೆಳಗಳ ರಕ್ಷಣೆ ಮಾಡಿದ್ದೇವೆ ಎಂದು ಹೇಳಿದರು.

ಕಾವೇರಿ ಭಾಗದ ಪ್ರದೇಶದಲ್ಲಿ ನಮಗೆ 106 ಟಿಎಂಸಿ ನೀರಿನ ಅಗತ್ಯವಿದ್ದು, ಸದ್ಯಕ್ಕೆ 56 ಟಿಎಂಸಿ ನೀರು ಇದೆ. ಎರಡು ದಿನಗಳ ಕಾಲ ಮಳೆ ಬಿದ್ದ ಕಾರಣ ಅ.1ರಂದು 13,000, 2ರಂದು 23,000, 3ರಂದು 20,000, 4ರಂದು 15,000, 5ರಂದು 10,000 ಕ್ಯೂಸೆಕ್ ನೀರು ಒಳಹರಿವು ಮೂಲಕ ಸಂಗ್ರಹವಾಗಿದೆ.
ರಾಜ್ಯದಲ್ಲಿ ನೀರಾವರಿ ವಿಚಾರವಾಗಿ ರಾಜಕೀಯ ಮಾಡುತ್ತಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮಾಡಲಿ ಬಿಡಿ. ಅವರು ಕೂಡ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಕೆಲಸ ಬೇಕಲ್ಲವೇ? ಅವರ ಧ್ವನಿ ನಿಲ್ಲಿಸಲು ಆಗುತ್ತದೆಯೇ? ನಮ್ಮ ಕೆಲಸ ನಾವು ಮಾಡೋಣ ಎಂದರು. ಇನ್ನೂ ನಿಮ್ಮಷ್ಟು ಮುಖ್ಯಮಂತ್ರಿಗಳು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದು ಕೇಳಿದಾಗ, ನೀರಾವರಿ ಸಚಿವನಾಗಿ ನಾನು ಇದ್ದೇನೆ. ನಾನು ಸಮರ್ಥನೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ತಮಿಳುನಾಡಿಗೆ ನೀರು ಹರಿಸುವ ಹಾಗೂ ಮೇಕೆದಾಟು ವಿಚಾರವಾಗಿ ಉತ್ತರಿಸಿದ ಅವರು, ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಬಿಡಲು ನಮ್ಮಲ್ಲಿ ನೀರಿಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೇವೆ. ಮೇಕೆದಾಟು ಯೋಜನೆ ಜಾರಿ ಪ್ರಸ್ತಾವನೆಯನ್ನು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನು ಸಿದ್ಧತೆ ಮಾಡುತ್ತಿದ್ದೇವೆ. ಹಂತಹಂತವಾಗಿ ನಾವು ಹೋಗಬೇಕು. ಕರ್ನಾಟಕ ಸರ್ಕಾರ ಎಲ್ಲರ ಅನುಭವ ಅಭಿಪ್ರಾಯ ಪಡೆದು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ ಎಂದು ಎಸ್.ಎಂ ಕೃಷ್ಣ ಅವರು ಹೇಳಿಲ್ಲವೇ? ಎಂದು ತಿಳಿಸಿದರು.

ಟನಲ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಅವರು ದುಡ್ಡು ಮಾಡುವ ಯೋಜನೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಅವರ ಜತೆ ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಜನ ನನಗೆ ಅಧಿಕಾರ, ಜವಾಬ್ದಾರಿ ನೀಡಿದ್ದು, ಅದರ ಮೇಲೆ ನಾನು ಕೆಲಸ ಮಾಡುತ್ತೇನೆ. ವಿರೋಧ ಪಕ್ಷದವರನ್ನು ಕೇಳಿ ಯೋಜನೆ ರೂಪಿಸಲು ಸಾಧ್ಯವೇ? ಕೋಳಿ ಕೇಳಿ ಮಸಾಲೆ ರೆಡಿ ಮಾಡುವುದಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನೆರವು ಕೇಳುತ್ತೀರಾ ಎಂದು ಪ್ರಶ್ನೆಗೆ ಉತ್ತರಿಸಿ, ಖಂಡಿತವಾಗಿ ಕೇಂದ್ರದ ನೆರವು ಕೇಳುತ್ತೇವೆ. ಈ ಪ್ರಸ್ತಾವನೆಗಳು ಸಲ್ಲಿಕೆಯಾದ ನಂತರ ನಾವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಈಗಾಗಲೇ ನಾನು ಮುಖ್ಯಮಂತ್ರಿಗಳು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ವಾಹನಗಳು ಆಗಮಿಸಿ ಸಂಚಾರ ದಟ್ಟಣೆಗೆ ಕಾರಣವಾಗಿದೆ. ತುಮಕೂರು ರಪಸ್ತೆ, ಕೆ.ಆರ್ ಪುರಂ ರಸ್ತೆ, ಮೈಸೂರು ರಸ್ತೆ ಮೂಲಕ ಸಂಚಾರ ದಟ್ಟಣೆ ಆಗಮಿಸುತ್ತಿದೆ. ಈ ವಿಚಾರವಾಗಿ ಅವರ ಜತೆ ಚರ್ಚೆ ಮಾಡಿದ್ದು, ಅವರೂ ಸಲಹೆ ನೀಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಮೋಹನ್ ದಾಸ್ ಪೈ ಅವರ ಸಮಿತಿ ಕೊಟ್ಟಿರುವ ವರದಿಯಲ್ಲಿನ ತೆರಿಗೆ ಶಿಫಾರಸ್ಸಿನ ಕುರಿತು ಮಾತನಾಡಿ, ಸದ್ಯ ಇರುವ ತೆರಿಗೆ ಪದ್ಧತಿಯಲ್ಲಿ ನಮಗೆ ತೃಪ್ತಿ ಇಲ್ಲ. ಈಗ ಕೇವಲ 3 ಸಾವಿರ ಕೋಟಿ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಹೀಗಾಗಿ ನಾವು ತೆರಿಗೆ ಸಂಗ್ರಹಕ್ಕೆ ಹೊಸ ಚಿಂತನೆ ಮಾಡುತ್ತಿದ್ದೇವೆ. ಸರ್ಕಾರಿ ಕಚೇರಿ ಸೇರಿ, ಕೇಂದ್ರ ಸರ್ಕಾರದ ಕಚೇರಿಗಳು ತೆರಿಗೆ ಪಾವತಿಸಬೇಕು ಎಂದು ಪತ್ರ ಬರೆದಿದ್ದೇನೆ. ಹೆಚ್ಎಎಲ್ ನವರು 93 ಕೋಟಿ ತೆರಿಗೆ ಪಾವತಿಸಿದ್ದಾರೆ.
ಕೆಇಬಿ, ಕೆಪಿಟಿಸಿಎಲ್ ನಂತಹ ರಾಜ್ಯ ಸರ್ಕಾರಿ ಕಚೇರಿಗಳೂ ಆಸ್ತಿ ತೆರಿಗೆ ಪಾವತಿಗೆ ಸೂಚಿಸಿದ್ದೇನೆ. ಮೊದಲು ಸರ್ಕಾರದವರಿಂದ ತೆರಿಗೆ ಸಂಗ್ರಹಿಸೋಣ. ಮೋಹನ್ ದಾಸ್ ಪೈ ಅವರ ಶಿಫಾರಸ್ಸಿನ ಬಗ್ಗೆ ನಾವು ಚರ್ಚೆ ಮಾಡಬೇಕಿದೆ. ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ 70 ಸಾವಿರ ಸಲಹೆಗಳು ಬಂದಿವೆ. ಇದೇ ತಿಂಗಳು 9ರಂದು ದೊಡ್ಡ ವಿಚಾರ ಸಂಕೀರ್ಣ ಹಮ್ಮಿಕೊಂಡಿದ್ದೇವೆ. ನಂತರ ಅದರ ಮೇಲೆ ನಾವು ಕೆಲಸ ಆರಂಭಿಸುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು ಸ್ಯಾಟಲೈಟ್ ನಗರ ನಿರ್ಮಾಣದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ, ಈಗ ಸದ್ಯಕ್ಕೆ ಬಿಡದಿಯಲ್ಲಿ ಆದ್ಯತೆ ಮೇರೆಗೆ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಈ ವಿಚಾರವಾಗಿ ಸ್ಥಳಈಯ ಶಆಸಕರು ಹಾಗೂ ಸಂಸದರ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.
ಸ್ವಯಂಘೋಷಿತ ತೆರಿಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೆ ಬೇರೆ ಆಯ್ಕೆ ಏನಿದೆ ಎಂದು ಕೇಳಿದಾಗ, ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದಕ್ಕಿಂತ ಪರಿಣಾಮಕಾರಿಯಾಗಿಲ್ಲ. ವಿಧಾನಸೌಧದಲ್ಲೇ 3 ಲಕ್ಷ ಇದ್ದರೆ 2 ಲಕ್ಷ ಎಂದು ಹೇಳಿಕೊಳ್ಳುತ್ತಾರೆ. ವಾಣಿಜ್ಯ ಉದ್ದೇಶಕ್ಕೆ ಕಟ್ಟಿರುವ ಕಟ್ಟಡಗಳಲ್ಲಿ ಕೇವಲ ವಾಸಪ್ರದೇಶದ ತೆರಿಗೆ ಪಾವತಿಸುತ್ತಿದ್ದು, ಮಾಣಿಜ್ಯ ಉದ್ದೇಶದ ತೆರಿಗೆ ಪಾವತಿಸುತ್ತಿಲ್ಲ. ಹೀಗಾಗಿ ಪ್ರತಿ ಮನೆಯ ಲೆಕ್ಕ ಹಾಕಬೇಕು ಎಂದು ಭಾವಿಸಿದ್ದೇವೆ. ಈ ವಿಚಾರವಾಗಿ ಅಧಿಕಾರಿಗಳ ಬದಲಾವಣೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.












Click it and Unblock the Notifications