ದೇಶದಲ್ಲೇ ಅತಿ ಹೆಚ್ಚು ಅನುದಾನವನ್ನು ನಾವು ರೈತರಿಗೆ ನೀಡಿದ್ದೇವೆ: ಎಚ್‌ಡಿಕೆ
ಬೆಂಗಳೂರು, ಫೆಬ್ರವರಿ 08: ಮೂರು ಗಂಟೆ ಐದು ನಿಮಿಷ ಸುದೀರ್ಘವಾದ ಬಜೆಟ್ ಭಾಷಣ ಮಾಡಿದ ಕುಮಾರಸ್ವಾಮಿ ಅವರು, ಬಜೆಟ್ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಈ ಬಜೆಟ್ ಅಭಿವೃದ್ಧಿ ಪರ ಮತ್ತು ರೈತ ಸ್ನೇಹಿ ಬಜೆಟ್ ಎಂದರು.
ರಾಜ್ಯದ ವಿತ್ತಿಯ ಕೊರತೆಯು 2.75 ಶೇಕಡ ಇಳಿಕೆ ಆಗಿರುವ ಬಗ್ಗೆ ಒತ್ತು ನೀಡಿ ಹೇಳಿದ ಕುಮಾರಸ್ವಾಮಿ, ಅದಕ್ಕೆ ಸಂಬಂಧಿಸಿದ ಅಂಕಿ-ಅಂಶವನ್ನು ಮಾಧ್ಯಮದವರ ಮುಂದಿಟ್ಟರು.
ಕಳೆದ ಕೆಲವ ವರ್ಷಕ್ಕೆ ಹೋಲಿಸಿದರೆ ರಾಜಸ್ವ ಹೆಚ್ಚಳ ಆಗಿದೆ ಎಂದ ಕುಮಾರಸ್ವಾಮಿ ಅದಕ್ಕೆ ಸಂಬಂಧಿಸಿದ ಅಂಕಿ-ಅಂಶ ಓದಿ ಹೇಳಿದರು. ಜೊತೆಗೆ ಜಿಎಸ್‌ಟಿ ಪರಿಹಾರವನ್ನು 2025 ರ ವರೆಗೆ ಮುಂದುವರೆಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿರುವುದಾಗಿಯೂ ಅವರು ಹೇಳಿದರು.

ಮೋದಿ ಅವರು ನಿನ್ನೆ ಸಂಸತ್‌ನಲ್ಲಿ ಕರ್ನಾಟಕದ ಸಾಲಮನ್ನಾ ಯೋಜನೆಯನ್ನು ಗೇಲಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರಿಗೆ ಕರ್ನಾಟಕದ ಬಗ್ಗೆ ಮಾಹಿತಿ ಇಲ್ಲ, ದೇಶದಲ್ಲೆ ಅತಿ ಹೆಚ್ಚು ಹಣವನ್ನು ನಾವು ಕೃಷಿಗೆ ಹಾಗೂ ರೈತರಿಗೆ ಮೀಸಲಿಟ್ಟಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ಈಗಾಗಲೇ 40 ಲಕ್ಷಕ್ಕೂ ಹೆಚ್ಚು ರೈತರ ಸಾಲದ ಮಾಹಿತಿ, ಸಾಲದ ದಾಖಲಾತಿಗಳನ್ನು ಕ್ರೂಢೀಕರಿಸಲಾಗಿದೆ. ಈಗಾಗಲೇ 4 ಲಕ್ಷ ರೈತರು ಸಾಲಮನ್ನಾ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಮೋದಿ ಅವರು ಮಾಹಿತಿ ಕೊರತೆಯಿಂದ ಕೇವಲ 5000 ಸಾವಿರ ರೈತರ ಸಾಲಮನ್ನಾ ಆಗಿದೆ ಎನ್ನುತ್ತಿದ್ದಾರೆ ಎಂದು ಹೇಳಿದರು.
ಈ ಬಾರಿ ಬಜೆಟ್‌ನಲ್ಲಿ 12650 ಕೋಟಿ ಅನುದಾನವನ್ನು ಸಾಲಮನ್ನಾ ಯೋಜನೆಗಾಗಿ ಕಾಯ್ದಿರಿಸಿದ್ದೇವೆ. ಅದರಲ್ಲಿ ಸುಮಾರು 6000 ಕೋಟಿಗೂ ಹೆಚ್ಚು ಹಣ ಈಗಾಗಲೇ ರೈತರ ಸಾಲದ ಜಮಾ ಮಾಡಿ ಆಗಿದೆ ಎಂದು ಸಿಎಂ ಹೇಳಿದರು.
ಹಾಲು ಉತ್ಪಾದಕರಿಗೆ 2500 ಕೋಟಿ, 17000 ಕೋಟಿ ನೀರಾವರಿಗೆ ನೀಡಿದ್ದೇವೆ. ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.












Click it and Unblock the Notifications