ತುರ್ತಾಗಿ ಕೋವಿಡ್ ಲಸಿಕಾ ಪ್ರಮಾಣ ಪತ್ರ ಬೇಕಿದ್ದರೆ ಈ ನಂಬರಿಗೆ ವಾಟ್ಸ್‌ಆ್ಯಪ್ ಮಾಡಿ
ಬೆಂಗಳೂರು, ಜ.8: ನೀವು ಬಹುತೇಕ ಸರ್ಕಾರಿ ಕಚೇರಿಗಳು, ಮಾಲ್, ಹೋಟೆಲ್, ಪಬ್‌ಗೆ ಹೋದರೆ ನಿಮ್ಮನ್ನು ಬಾಗಿಲಲ್ಲೇ ಕೋವಿಡ್ ಲಸಿಕಾ ಪ್ರಮಾಣಪತ್ರ ಕೊಡಿ ಎಂದು ಕೇಳುತ್ತಾರೆ.
ಸದ್ಯ ಭಾರತದಲ್ಲಿ ನೆಲೆಸುವವರಿಗೆ ಮತ್ತು ವಿದೇಶಗಳಿಗೆ ಓಡಾಡುವವರಿಗೆ ಆಧಾರ್ ಕಾರ್ಡ್, ಎಪಿಕ್ ಕಾರ್ಡ್‌ನಷ್ಟೇ ಕೋವಿಡ್ ಲಸಿಕಾ ಪ್ರಮಾಣಪತ್ರವೂ ಪ್ರಮುಖ ದಾಖಲೆಯಾಗಿದೆ. ಇದು ಎಲ್ಲಿ ಅಗತ್ಯ ಬೀಳುತ್ತದೆ ಎಂದು ಹೇಳಲು ಬರುವುದಿಲ್ಲ. ಯಾವಾಗಲೂ ಜೊತೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ.
ಕೋವಿಡ್-19 ಲಸಿಕೆ ಒಂದನೇ ಡೋಸ್ ಅಥವಾ ಎರಡನೇ ಡೋಸ್ ಪಡೆದಾಗ ಕೂಡಲೇ ಈ ಪ್ರಮಾಣಪತ್ರವೂ ಲಭ್ಯವಾಗುತ್ತದೆ. ಕೋವಿನ್ ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಂಡು ಇಟ್ಟುಕೊಳ್ಳಬೇಕು. ಸದ್ಯ ಎರಡೂ ಡೋಸ್ ಪಡೆದವರಿಗೆ ಗ್ರೀನ್ ಕಾರ್ಡ್ ಕೊಡುವ ಬಗ್ಗೆ ಸರ್ಕಾರ ಮಾತನಾಡುತ್ತಿದೆ.

ಸುಲಭವಾಗಿ ಪ್ರಮಾಣ ಪತ್ರ ಲಭ್ಯ
ಕೋವಿಡ್ ಲಸಿಕಾ ಪ್ರಮಾಣ ಪತ್ರ ತುರ್ತು ಸಂದರ್ಭದಲ್ಲಿ ಬೇಕಾದಾಗ ಅದನ್ನು ಹುಡುಕಾಡುವಂತಾಗುತ್ತದೆ. ಮೊಬೈಲ್‌ನಲ್ಲಿ ಎಲ್ಲಿ ಸೇವ್ ಮಾಡಿಟ್ಟುಕೊಂಡಿದ್ದೇವೆ ಎಂದು ನೆನಪಿಗೆ ಬರದೆ ಆ ಕ್ಷಣಕ್ಕೆ ಒಂದು ಕ್ಷಣ ಗಾಬರಿ ಉಂಟು ಮಾಡುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ MyGov ಪೋರ್ಟಲ್ ಸಹಾಯವಾಣಿ ಸಂಖ್ಯೆಯೊಂದನ್ನು ಆರಂಭಿಸಿದೆ. ಈ ಸಂಖ್ಯೆಯನ್ನು ನಿಮ್ಮ ಯಾವುದೇ ರೀತಿಯ ಮೊಬೈಲ್‌ನಲ್ಲಿ ಸೇವೆ ಮಾಡಿಕೊಂಡು ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿದರೆ ಸಾಕು ಕ್ಷಣ ಮಾತ್ರದಲ್ಲಿ ನಿಮ್ಮ ಕೋವಿಡ್ ಲಸಿಕಾ ಪ್ರಮಾಣ ಪತ್ರ ಬರುತ್ತದೆ.

ಈ ನಂಬರ್‌ಗೆ ಮೆಸೆಜ್ ಕಳುಹಿಸಿ ಸಾಕು
MyGov ಪೋರ್ಟಲ್ ಸಹಾಯವಾಣಿ ಸಂಖ್ಯೆ 9013151515 ನಿಮ್ಮ ಮೊಬೈಲ್‌ನಲ್ಲಿ ಸೇವೆ ಮಾಡಿಕೊಳ್ಳಬೇಕು. ಬಳಿಕ ವಾಟ್ಸ್‌ಆ್ಯಪ್ ಮೂಲಕ "Certificate" ಎಂದು ಟೈಪ್ ಮಾಡಿ ಕಳುಹಿಸಬೇಕು. ಆ ಮೊಬೈಲ್ ಸಂಖ್ಯೆ ನೀವು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ನೀಡಿದ ಸಂಖ್ಯೆ ಆಗಿರಬೇಕು. ಅದೇ ನಂಬರಿಗೆ ಆರು ಸಂಖ್ಯೆಯ ಒನ್‌ಟೈಮ್ ಪಾಸ್‌ವರ್ಡ್ ಬರುತ್ತದೆ. ಆ ಸಂಖ್ಯೆಯನ್ನು ಅಲ್ಲಿಯೇ ನಮೂದಿಸಬೇಕು.

ನಿರ್ದಿಷ್ಟ ಸಂಖ್ಯೆ ನಮೂದಿಸುವುದು ಅಗತ್ಯ
ಮನೆಯಲ್ಲಿ ಒಬ್ಬರಿಗಿಂತ ಹೆಚ್ಚಿನ ಜನರು ಲಸಿಕೆ ಪಡೆದ ಸಂದರ್ಭದಲ್ಲಿ ಒಂದೇ ಮೊಬೈಲ್ ಸಂಖ್ಯೆ ಲಸಿಕೆ ಪಡೆಯಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ನಲ್ಲಿಯೇ ಸಂದೇಶವೊಂದು ಬರುತ್ತದೆ. ಆ ಸಂಖ್ಯೆ ಮೂಲಕ ಎಷ್ಟು ಜನ ಲಸಿಕೆ ಪಡೆದಿದ್ದಾರೆ ಎಂದು 1,2,3 ಎಂದು ಹೀಗೆ ಕ್ರಮವಾಗಿ ವಿವರ ಬರುತ್ತದೆ. ಅದರಲ್ಲಿ ಯಾರಿಗೆ ಪ್ರಮಾಣ ಪತ್ರದ ಅಗತ್ಯವಿರುತ್ತದೋ ಅವರ ಹೆಸರಿಗೆ ತಕ್ಕಂತೆ ಸಂಖ್ಯೆ ದಾಖಲಿಸಬೇಕು.

ಕೆಲವೇ ಕ್ಷಣಗಳಲ್ಲಿ ಪಿಡಿಎಫ್ ಲಭ್ಯ
ಹೀಗೆ ಅಗತ್ಯ ವಿವರಗಳನ್ನು ದಾಖಲಿಸಿದ 30 ಸೆಕೆಂಡ್‌ಗಳ ಒಳಗೆ ಕೋವಿಡ್ ಲಸಿಕಾ ಪ್ರಮಾಣ ಪತ್ರದ ಪಿಡಿಎಫ್ ಲಭ್ಯವಾಗುತ್ತದೆ. ಒಂದು ವೇಳೆ ಒಬ್ಬರಿಗಿಂತ ಹೆಚ್ಚಿನ ಜನರ ಪ್ರಮಾಣಪತ್ರದ ಅಗತ್ಯವಿದ್ದರೆ ಅಲ್ಲಿ Another certificate ಮೇಲೆ ಒತ್ತಬೇಕು. ಆಗ ಮತ್ತೊಂದು ಪಾಸ್‌ವರ್ಡ್ ಬರುತ್ತದೆ. ಅಗತ್ಯ ಇರುವವರ ಹೆಸರು ಎಷ್ಟನೇ ನಂಬರಿಗೆ ಇದೆಯೋ ಆ ನಂಬರ್ ದಾಖಲಿಸಿದರೆ, ಅವರ ಪ್ರಮಾಣಪತ್ರವೂ ಬರುತ್ತದೆ. ಒಂದು ವೇಳೆ ನೀವು ಒಂದು ಡೋಸ್ ಮಾತ್ರ ಲಸಿಕೆ ಪಡೆದಿದ್ದರೆ ಎರಡನೇ ಡೋಸ್‌ಗೆ ದಿನಾಂಕ ನಿಗದಿ ಮಾಡಿಕೊಳ್ಳಬಹುದು.
ಹೀಗೆ ಯಾವುದೇ ಸಂದರ್ಭದಲ್ಲಿ ಎಲ್ಲಿಯೂ ತಡಕಾಡದೆ ಲಸಿಕಾ ಪ್ರಮಾಣ ಪತ್ರವನ್ನು ಕ್ಷಣ ಮಾತ್ರದಲ್ಲಿ ಪಡೆಯಲು ಅನುವಾಗುವಂತಹ ಸೌಲಭ್ಯ ಒದಗಿಸಲಾಗಿದೆ.












Click it and Unblock the Notifications