ವಕ್ಫ್ ಆಸ್ತಿ: ಅಧಿಕಾರಿಗಳಿಗೆ ಸ್ಪೆಷಲ್ ಟಾಸ್ಕ್ ಕೊಟ್ಟ ಸಚಿವ ಜಮೀರ್!
ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಡುವೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ಈ ಆದೇಶವನ್ನು ಇನ್ನು ಒಂದು ತಿಂಗಳಿನ ಒಳಗಾಗಿ ಪೂರೈಸಬೇಕು ಎಂದು ಸಹ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಕ್ಫ್ ಆಸ್ತಿ ಸಂರಕ್ಷಣೆಯ ಬಗ್ಗೆ ಹಾಗೂ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಮೀರ್ ಅವರು ಸೂಚನೆ ನೀಡುತ್ತಲ್ಲೇ ಇದ್ದಾರೆ. ಇದೀಗ ಹುಬ್ಬಳ್ಳಿ- ಧಾರವಾಡದ ಅಧಿಕಾರಿಗಳಿಗೆ ಮಹತ್ವದ ಜವಾಬ್ದಾರಿಯೊಂದನ್ನು ಅವರು ನೀಡಿದ್ದಾರೆ. ಹುಬ್ಬಳ್ಳಿ -ಧಾರವಾಡ ವ್ಯಾಪ್ತಿಯ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಮುಂದಿನ ಒಂದು ತಿಂಗಳಲ್ಲಿ ಖಾತೆ ಮಾಡಿಕೊಡಿ ಎಂದಿದ್ದಾರೆ. ಈ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ಕೇವಲ ಒಂದು ತಿಂಗಳು ಗಡುವು ನೀಡಿದ್ದಾರೆ.

ಧಾರವಾಡದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಕ್ಫ್ ಆಸ್ತಿಗಳ ವಿಚಾರದಲ್ಲಿ ಅಧಿಕಾರಿಗಳು ಗಂಭೀರವಾಗಿರಬೇಕು. ಒತ್ತುವರಿ ತಡೆದು ಸಂರಕ್ಷಣೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಹುಬ್ಬಳ್ಳಿ -ಧಾರವಾಡದಲ್ಲಿ ಬಾಕಿ ಇದ್ದ 190 ಆಸ್ತಿಗಳ ಪೈಕಿ 100 ಆಸ್ತಿಗಳ ಖಾತೆಗಳನ್ನು ಹಸ್ತಾಂತರ ಮಾಡಲಾಯಿತು. ಕಾರವಾರ ಜಿಲ್ಲೆಗೆ ಸಂಬಂಧಿಸಿದಂತೆ ವಕ್ಫ್ ಆಸ್ತಿಗಳ ವಿಚಾರದಲ್ಲಿ ಅರಣ್ಯ ಇಲಾಖೆ ತಗಾದೆ ಇದೆ. ಇದನ್ನು ಬಗೆಹರಿಸುವುದು ಬಾಕಿ ಇದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಮುಂದಿನ 15 ದಿನಗಳಲ್ಲಿ ಅರಣ್ಯ ಸಚಿವರೊಂದಿಗೆ ಈ ಕುರಿತು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಅಧಿಕಾರಿಗಳು ಸಹ ಆಸ್ತಿಗಳಿಗೆ ಖಾತೆ ವಿಚಾರದಲ್ಲಿ ಗಮನ ಹರಿಸಬೇಕು. ಈ ಸಂಬಂಧ ಮಹಾನಗರ ಪಾಲಿಕೆ, ಕಂದಾಯ, ಜಿಲ್ಲಾ ಪಂಚಾಯತ್ ಹಾಗೂ ನಗರಾಭಿವೃದ್ಧಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕು. ಈ ಇಲಾಖೆಗಳೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆ ಬಗೆಹರಿಸಿ ಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಮೀರ್ ಅವರು ಸೂಚನೆ ನೀಡಿದರು.
ವಕ್ಫ್ ಆಸ್ತಿ ಸಮರ್ಪಕವಾಗಿ ಬಳಸಿಕೊಳ್ಳಿ
ಇನ್ನು ವಕ್ಫ್ ಆಸ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆಯೂ ಮುಸ್ಲಿಂ ಸಮುದಾಯದವರಿಗೆ ಜಮೀರ್ ಅವರು ಸಲಹೆ ನೀಡಿದ್ದಾರೆ. ಜಮೀರ್ ಅವರು ವಕ್ಫ್ ಆಸ್ತಿಯನ್ನು ಉತ್ತಮವಾಗಿ ಬಳಸಿಕೊಂಡರೆ ಸಾಕು ಸಮುದಾಯದವರು ಸರ್ಕಾರದ ಮುಂದೆ ಅನುದಾನಕ್ಕಾಗಿ ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications