ವೃಕ್ಷರಕ್ಷ-ವಿಶ್ವರಕ್ಷ : ಉಡುಪಿಯಲ್ಲಿ ಬೃಹತ್ ಜಾಗೃತ ಸಮಾವೇಶ
ಉಡುಪಿ, ಮಾರ್ಚ್ 08 : ವೃಕ್ಷರಕ್ಷ-ವಿಶ್ವರಕ್ಷ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾರ್ಚ್ 13ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.'ಉಸಿರಾಡುವವರೆಲ್ಲಾ ಹಸಿರು ಬೆಳೆಸಲು ಬನ್ನಿ' ಎಂಬ ಘೋಷವಾಕ್ಯದಡಿ ಯೋಜನೆ ಜಾರಿಗೆ ತರಲಾಗುತ್ತಿದೆ.
ಉಡುಪಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು ಈ ಕುರಿತು ಮಾಹಿತಿ ನೀಡಿದರು. 'ಜಿಲ್ಲಾ ವ್ಯಾಪ್ತಿಯ ಸಂಘ ಸಂಸ್ಥೆಯ ಸದಸ್ಯರು, ದೇವಸ್ಥಾನದ ಮುಖ್ಯಸ್ಥರು, ಯುವಕ-ಯುವತಿ ಮಂಡಲದ ಸದಸ್ಯರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಸ್ಯರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಸೇರಿ ಎಲ್ಲ ಗ್ರಾಮ ಪಂಚಾಯತಿ ಪ್ರತಿನಿಧಿಗಳನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿದೆ' ಎಂದರು. [ದಾರಿ ಬದಿ ಗಿಡಗಳ ಆರೈಕೆಯಲ್ಲಿ ಮೈಸೂರಿನ 'ಅಪ್ನದೇಶ್']

ಮಾರ್ಚ್ 13ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯ ತನಕ ನಡೆಯಲಿರುವ ಸಮಾವೇಶದಲ್ಲಿ 3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಪರಿಸರ ತಜ್ಞರು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಮಂಡಿಸಲಿದ್ದಾರೆ. ನಾಗರೀಕರ ಸಲಹೆ ಮತ್ತು ಸೂಚನೆ ಪಡೆಯಲು ಸಂವಾದ ಕಾರ್ಯಕ್ರಮ ನಡೆಸಲಾಗುತ್ತದೆ. [ಮೃತ ಪ್ರಾಣಿಗಳ ಆತ್ಮಕ್ಕೆ ಮುಕ್ತಿ ಕಾಣಿಸುವ ಬಂಧುವೇ ಉದಯಗಟ್ಟಿ]
ಸಮಾವೇಶದಲ್ಲಿ ಅರಣ್ಯ ಸಚಿವ ರಮಾನಾಥ ರೈ, ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಡಾ. ಶಾಮನೂರು ಶಿವಶಂಕರ್, ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್ ಭಾಗವಹಿಸಲಿದ್ದಾರೆ. ನಾಡೋಜ ಸಾಲು ಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಗುತ್ತದೆ. [ವಸತಿಶಾಲೆ ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ನಮ್ಮದೊಂದು ಸಲಾಂ!]
ಹಸಿರು ಬೆಳೆಸಲು ಬನ್ನಿ : 'ಉಸಿರಾಡುವವರೆಲ್ಲಾ ಹಸಿರು ಬೆಳೆಸಲು ಬನ್ನಿ' ಎಂಬ ಘೋಷವಾಕ್ಯದಡಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಯೋಜನೆಗೆ ಅಗತ್ಯವಿರುವ ಹಣ್ಣಿನ, ಔಷಧೀಯ ಹಾಗೂ ಹೂವಿನ ಸಸಿಗೆ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಖಾಸಗಿ ನರ್ಸರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಯೋಜನೆಯಡಿ ಎರಡು ವರ್ಷದಲ್ಲಿ 1 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ.
ವೃಕ್ಷೋತ್ಸವ : ಸಮಾವೇಶದ ಅಂಗವಾಗಿ ಮಾರ್ಚ್ 12ರಂದು ಬೆಳಗ್ಗೆ 8.30ಕ್ಕೆ ರಥಬೀದಿಯಲ್ಲಿ ವೃಕ್ಷರಾಜ ಅಶ್ವತ್ಥವನ್ನು ನವರತ್ನ ರಥದಲ್ಲಿಟ್ಟು ವೃಕ್ಷೋತ್ಸವ ನಡೆಸಲಾಗುತ್ತದೆ.












Click it and Unblock the Notifications