Breaking; ಬೆಂಗಳೂರಿಗೆ ಕೇಂದ್ರ ಚುನಾವಣಾ ಆಯೋಗ ತಂಡ ಆಗಮನ
ಬೆಂಗಳೂರು, ನವೆಂಬರ್ 22; ಬೆಂಗಳೂರು ನಗರದಲ್ಲಿ ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಚುನಾವಣಾ ಆಯೋಗದ ತಂಡ ನಗರಕ್ಕೆ ಆಗಮಿಸಿದೆ.
ಮಂಗಳವಾರ ನವದೆಹಲಿಯಿಂದ ಕೇಂದ್ರ ಚುನಾವಣಾ ಆಯೋಗದ ತಂಡ ರಾಜ್ಯಕ್ಕೆ ಆಗಮಿಸಿದೆ. ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ತಂಡ ಸಭೆ ನಡೆಸಲಿದ್ದು, ಆರೋಪದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದೆ.
ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ತಂಡ ಬೆಂಗಳೂರು ನಗರಕ್ಕೆ ಆಗಮಿಸಿದೆ.

ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಹಲಸೂರು ಗೇಟ್ ಠಾಣೆ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ. ವೈಯಕ್ತಿಕ ಮಾಹಿತಿ ಕಳವು, ದುರ್ಬಳಕೆ ಆರೋಪದ ಮೇಲೆ ಚಿಲುಮೆ ಸಂಸ್ಥೆಯ ಸಂಸ್ಥಾಪಕ ರವಿ ಕುಮಾರ್ ಬಂಧಿಸಲಾಗಿದೆ.
ರವಿ ಕುಮಾರ್‌ರನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ಅವರನ್ನು 12 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕೆ. ಎಂ. ಲೋಕೇಶ್ ಮತ್ತು ದಿವ್ಯಾ ಮತ್ತು ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬಿಬಿಎಂಪಿ ಸಹ ಮತದಾರರ ಪಟ್ಟಿ ಮಾಹಿತಿ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಚಿಲುಮೆ ಸಂಸ್ಥೆ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡಿದ್ದ ಇಬ್ಬರು ಕಂದಾಯ ಅಧಿಕಾರಿ ಹಾಗೂ ಒಬ್ಬರು ಉಪ ಕಂದಾಯ ಅಧಿಕಾರಿ ಸೇರಿದಂತೆ ಮೂವರನ್ನು ಬಿಬಿಎಂಪಿ ಆಯುಕ್ತರು ಅಮಾನತು ಮಾಡಿದ್ದಾರೆ.












Click it and Unblock the Notifications