ಒಕ್ಕಲಿಗ ಸಿಎಂ; ಅಚ್ಚರಿ ಮೂಡಿಸಿದ ಬಿಜೆಪಿ ನಾಯಕನ ಟ್ವೀಟ್!
ಬೆಂಗಳೂರು, ಮೇ 13; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸರ್ಕಾರ ರಚನೆ ಮಾಡಲು ಸಿದ್ಧವಗಿದೆ. ಆದರೆ ಮುಖ್ಯಮಂತ್ರಿ ಯಾರು? ಎಂಬುದು ಎಲ್ಲರ ಪ್ರಶ್ನೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 66, ಕಾಂಗ್ರೆಸ್ 135, ಜೆಡಿಎಸ್ 19 ಮತ್ತು ಇತರರು 4 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 113. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಥವ ಸಿದ್ದರಾಮಯ್ಯ ಎಂಬುದು ಕುತೂಹಲ.

ಮಾಜಿ ಸಚಿವ, ಬಿಜೆಪಿ ನಾಯಕ ಡಾ. ಕೆ. ಸುಧಾಕರ್ ಮಾಡಿರುವ ಟ್ವೀಟ್ ಒಂದು ಕುತೂಹಲಕ್ಕೆ ಕಾರಣವಾಗಿದೆ. ಒಕ್ಕಲಿಗರು ಸಿಎಂ ಆಗಬೇಕು ಎಂದು ಹೇಳುವ ಮೂಲಕ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕು ಎಂದು ಸುಧಾಕರ್ ಪರೋಕ್ಷವಾಗಿ ಹೇಳಿದ್ದಾರೆ.
ಸುಧಾಕರ್ ತಮ್ಮ ಟ್ವೀಟ್‌ನಲ್ಲಿ, "ಸನ್ಮಾನ್ಯ ಎಸ್. ಎಂ. ಕೃಷ್ಣ ಅವರ ನಂತರ ಒಕ್ಕಲಿಗ ಸಮುದಾಯದ ನಾಯಕರೊಬ್ಬರು ಸ್ಪಷ್ಟ ಬಹುಮತದೊಂದಿಗೆ ನಾಡಿನ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ವಿಶ್ವಾಸದಿಂದ ಈ ಬಾರಿ ಒಕ್ಕಲಿಗ ಸಮಾಜ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದು, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಶೇ 5 ಮತಗಳು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆಯಾಗಿರುವುದೇ ಇದಕ್ಕೆ ಸಾಕ್ಷಿ" ಎಂದು ತಿಳಿಸಿದ್ದಾರೆ.

"ಒಕ್ಕಲಿಗ ಸಮುದಾಯದ ಈ ನಿರೀಕ್ಷೆಯನ್ನು ಕಾಂಗ್ರೆಸ್ ಪಕ್ಷ ಹುಸಿಯಾಗಿಸುವುದಿಲ್ಲ. ನಾಡಿಗೆ ಅನ್ನ ನೀಡುವ ಅನ್ನದಾತರ ಸಮುದಾಯವಾದ ಒಕ್ಕಲಿಗ ಸಮಾಜ ಕಾಂಗ್ರೆಸ್ ಪಕ್ಷದ ಮೇಲಿಟ್ಟಿರುವ ಈ ನಂಬಿಕೆಗೆ ದ್ರೋಹ ಎಸಗುವುದಿಲ್ಲ ಎಂದು ಭಾವಿಸುತ್ತೇನೆ" ಎಂದು ಸುಧಾಕರ್ ಹೇಳುವ ಮೂಲಕ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಸಂಜೆ ಶಾಸಕಾಂಗ ಪಕ್ಷದ ಸಭೆ; ಭಾನುವಾರ ಸಂಜೆ 5.30ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕರ ಅಭಿಪ್ರಾಯವನ್ನು ಪಡೆದು ಯಾರು ಮುಖ್ಯಮಂತ್ರಿಯಾಗಬೇಕು? ಎಂದು ತೀರ್ಮಾನ ಕೈಗೊಳ್ಳಲಾಗುತ್ತದೆ. ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲು ಮೂವರು ವೀಕ್ಷಕರನ್ನು ನೇಮಕ ಮಾಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಮಧ್ಯಾಹ್ನ ದೆಹಲಿಗೆ ತೆರಳಿದ್ದಾರೆ. ವೀಕ್ಷಕರು ಅಭಿಪ್ರಾಯ ಸಂಗ್ರಹಣೆ ಮಾಡಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇಂದು ಸಂಜೆಯೇ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ? ಎಂಬುದು ಅಂತಿಮವಾಗಲಿದೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸಿದ್ದರಾಮಯ್ಯ ಬದಲು ತಮ್ಮನೇ ಸಿಎಂ ಮಾಡಬೇಕು ಎಂದು ಅವರು ಹೈಕಮಾಂಡ್ ನಾಯಕರ ಮುಂದೆಯೂ ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಒಪ್ಪಿಗೆ ಸಿಗಲಿದೆಯೇ?.
ಶಾಸಕರು ಸಿದ್ದರಾಮಯ್ಯ ಬಿಟ್ಟು ಡಿ. ಕೆ. ಶಿವಕುಮಾರ್ ಸಿಎಂ ಆಗಲು ಅಭಿಪ್ರಾಯ ನೀಡುತ್ತಾರೆಯೇ?. ಶಾಸಕರ ಸಭೆಯ ಬಳಿಕ ವೀಕ್ಷಕರು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಸಭೆಯ ಮಾಹಿತಿ ನೀಡುವ ನಿರೀಕ್ಷೆ ಇದೆ.
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು? ಎಂಬುದು ಸೋಮವಾರ ಅಂತಿಮವಾಗುವ ನಿರೀಕ್ಷೆ ಇದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ 5.30ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಗೂ ಮುನ್ನವೇ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ.












Click it and Unblock the Notifications