ಜಾತಿ ಗಣತಿ ವರದಿ ಜಾರಿಯಾದ್ರೆ ಸರ್ಕಾರ ಬೀಳಿಸ್ತೀವಿ: ಒಕ್ಕಲಿಗ ಸಂಘದಿಂದ ವಾರ್ನಿಂಗ್
ಜಾತಿಗಣತಿ ವರದಿ ಜಾರಿ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ತಲೆಬಿಸಿ ಶುರುವಾಗಿದೆ. ವಿವಿಧ ಸಮುದಾಯಗಳಿಂದ ಈ ವರದಿ ಜಾರಿಗೆ ವಿರೋಧ ವ್ಯಕ್ತವಾಗುತ್ತಿದೆ. ಡಿಸಿಎಂ ಹಾಗೂ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಅವರು ಒಕ್ಕಲಿಗರ ಸಭೆ ನಡೆಸಲು ಪ್ಲ್ಯಾನ್ ನಡೆಸುತ್ತಿದ್ದರೆ, ಮತ್ತೊಂದೆಡೆ ರಾಜ್ಯ ಒಕ್ಕಲಿಗರ ಸಂಘವು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಈ ಜಾತಿ ಗಣತಿ ವಿರೋಧಿಸಿ ರಾಜ್ಯದಾದ್ಯಂತ ಹೋರಾಟ ನಡೆಸಲು ರಾಜ್ಯ ಒಕ್ಕಲಿಗರ ಸಂಘ ನಿರ್ಧರಿಸಿದೆ. ಏಪ್ರಿಲ್ 17ರ ನಂತರ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.
ಅನ್ಯಾಯಕ್ಕೆ ಒಳಗಾಗಿರುವ ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು ಸೇರಿದಂತೆ ಇತರ ಸಮುದಾಯಗಳನ್ನು ಒಟ್ಟುಗೂಡಿಸಿ ರಾಜ್ಯವನ್ನೇ ಬಂದ್ ಮಾಡುವ ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಒಂದು ವೇಳೆ ಈ ಜಾತಿ ಗಣತಿ ವರದಿ ಜಾರಿಯಾದರೆ, ಸರ್ಕಾರ ಬೀಳಿಸುವ ಶಕ್ತಿ ನಮ್ಮ ಒಕ್ಕಲಿಗ ಸಮುದಾಯಕ್ಕಿದೆ. ನಮ್ಮ ಜನಾಂಗಕ್ಕೆ ಅನ್ಯಾಯವಾದರೆ, ಸಂಘದ ಎಲ್ಲ ನಿರ್ದೇಶಕರು ರಾಜೀನಾಮೆ ಕೊಟ್ಟು ಬೀದಿಗೆ ಇಳಿಯುತ್ತೇವೆ ಎಂದು ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಎಚ್ಚರಿಕೆ ನೀಡಿದ್ದಾರೆ. ಈ ಜಾತಿ ಗಣತಿ ವರದಿಯು ಅವೈಜ್ಞಾನಿಕವಾಗಿದೆ. ಇದು ಸಿಎಂ ಸಿದ್ದರಾಮಯ್ಯನವರಿಗಾಗಿ ತಯಾರಿಸಿದ ವರದಿಯಂತಿದೆ. ಹಾಗಾಗಿ ಯಾವ ಕಾರಣಕ್ಕೂ ಈ ವರದಿಯನ್ನು ನಮ್ಮ ಒಕ್ಕಲಿಗರ ಸಂಘ ಒಪ್ಪುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರವು ಕಾಂತರಾಜು ಆಯೋಗದ ವರದಿ ಜಾರಿ ಮಾಡಲು ಹೊರಟಿದೆ. ಇದರ ವಿರುದ್ಧ ಹೋರಾಟ ಮಾಡಲು ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ಕೂಡ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಹಂತದಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚಿಸಲಾಗಿದೆ. ಈ ಕಾಂತರಾಜು ವರದಿ ಸರಿಯಾಗಿಲ್ಲ. ಸುಮಾರು 10 ವರ್ಷಗಳ ಹಿಂದೆ ಸಮೀಕ್ಷೆ ಮಾಡಿದ ವರದಿಯನ್ನು ಈಗ ಜಾರಿ ಮಾಡಲು ಮುಂದಾಗಿದ್ದಾರೆ. ಈ ವರದಿಯಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆಯನ್ನು ಕೇವಲ 61 ಲಕ್ಷ ಎಂದು ತೋರಿಸಲಾಗಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಒಕ್ಕಲಿಗರು ಕೇವಲ 61 ಲಕ್ಷ ಮಂದಿ ಮಾತ್ರವೇ ಇರಲು ಸಾಧ್ಯವೇ ಇಲ್ಲ. ಪ್ರತಿ ತಾಲ್ಲೂಕಿನಲ್ಲೂ ಏನಿಲ್ಲವೆಂದರೂ ಸುಮಾರು 60 ಸಾವಿರದಿಂದ 1ಲಕ್ಷಕ್ಕೂ ಹೆಚ್ಚು ಮಂದಿ ಒಕ್ಕಲಿಗ ಸಮುದಾಯದವರಿದ್ದಾರೆ. ಆದರೆ ಈ ಜಾತಿ ಗಣತಿ ವರದಿಯಲ್ಲಿ ನಮ್ಮ ಜನಾಂಗವನ್ನ 6ನೇ ಸ್ಥಾನದಲ್ಲಿ ತೋರಿಸಲಾಗಿದೆ. ಒಟ್ಟಾರೆ ಇದು ಬೇರೆ ಸಮುದಾಯಕ್ಕೆ ಮೀಸಲಾತಿ ನೀಡುವ ಹುನ್ನಾರವಾಗಿದೆ. ಹೀಗಾಗಿ ನಾವು ಇದನ್ನು ವಿರೋಧಿಸುತ್ತೇವೆ. ಇಡೀ ಕರ್ನಾಟಕ ಬಂದ್ ಮಾಡುವ ಮೂಲಕ ಬೃಹತ್ ಹೋರಾಟ ಮಾಡಬೇಕಾಗುತ್ತದೆ. ಜಾತಿ ಗಣತಿ ವರದಿಯಲ್ಲಿ ಒಕ್ಕಲಿಗರೂ ಸೇರಿದಂತೆ ಸಾಕಷ್ಟು ಸಮುದಾಯಗಳಿಗೆ ಭಾರಿ ಅನ್ಯಾಯವಾಗಿದ್ದು, ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಅಗತ್ಯಬಿದ್ದರೆ ನಮ್ಮ ಸಂಘದಿಂದಲೇ ಜಾತಿ ಗಣತಿ ಮಾಡಿಸುತ್ತೇವೆ ಎಂದೂ ತಿರುಗೇಟು ನೀಡಿದ್ದಾರೆ. ಜಾತಿ ಗಣತಿ ವಿಚಾರವಾಗಿ ಒಕ್ಕಲಿಗ ಸಮುದಾಯವು ಡಿಕೆ ಶಿವಕುಮಾರ್ ಅವರ ವಿರುದ್ಧವೇ ತಿರುಗಿ ಬೀಳುವ ಸಾಧ್ಯತೆ ಇದೆ.












Click it and Unblock the Notifications