ವಿಮ್ಸ್ ದುರಂತ: ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಎಂದ ಸಚಿವ ಸುಧಾಕರ್
ಬೆಂಗಳೂರು, ಸೆಪ್ಟೆಂಬರ್ 17: ಬಳ್ಳಾರಿ ವಿಮ್ಸ್ ಆಸ್ಪತ್ರೆ ದುರಂತಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಸಾವಿಗೀಡಾದ ಕೂಡಲೇ ಡಾ.ಸ್ಮಿತಾ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಸಮಿತಿಯವರು ನಿನ್ನೆ ಇಡೀ ದಿನ ಆಸ್ಪತ್ರೆಯಲ್ಲಿದ್ದು ಮಾಹಿತಿ ಪಡೆದಿದ್ದಾರೆ. ಇನ್ನೂ ಕೆಲ ಎಲೆಕ್ಟ್ರಿಕ್ ಎಂಜಿನಿಯರ್‌ಗಳನ್ನು ಅಲ್ಲಿಗೆ ಕರೆದೊಯ್ಯಬೇಕು ಎಂದು ಸಮಿತಿಯವರು ಹೇಳಿದ್ದು, ಅದಕ್ಕೂ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿ ಈ ಕುರಿತ ವರದಿ ಬರಲಿದೆ. ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಸರ್ಕಾರವು ನೂರಕ್ಕೆ ನೂರರಷ್ಟು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ವಿಮ್ಸ್ ನಲ್ಲಿ ನಡೆದಿರುವ ದುರ್ಘಟನೆಯಿಂದ ನಮಗೂ ನೋವಾಗಿದೆ. ಸಾವಿಗೀಡಾದ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಅದಾಗ್ಯೂ, ಸರ್ಕಾರದಿಂದ ತನಿಖೆಯನ್ನು ನಡೆಸಲಾಗುತ್ತಿದೆ. ತನಿಖಾ ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ನೊಂದವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ:
"ವಿಮ್ಸ್ ಆಸ್ಪತ್ರೆ ದುರಂತದಲ್ಲಿ ನೊಂದವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ನಾಳೆ ನಾನೇ ಬಳ್ಳಾರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಿದ್ದೇನೆ. ಸರ್ಕಾರ ಯಾವುದೇ ಅಂಶವನ್ನು ಮುಚ್ಚಿಡುವುದಿಲ್ಲ. ಪ್ರತಿಯೊಬ್ಬರ ಜೀವವೂ ಸರ್ಕಾರಕ್ಕೆ ಬಹಳ ಮುಖ್ಯ," ಎಂದು ಸಚಿವ ಸುಧಾಕರ್ ಹೇಳಿದರು.

ವಿಮ್ಸ್ ನಿರ್ದೇಶಕ ನೇಮಕದ ಬಗ್ಗೆ ತಿರುಗೇಟು:
ಯಾವುದೇ ಶಾಸಕರು ಹೇಳಿದ ತಕ್ಷಣ ಆಸ್ಪತ್ರೆಗೆ ನಿರ್ದೇಶಕರನ್ನು ನೇಮಿಸಲು ಸಾಧ್ಯವಿಲ್ಲ. ಹಾಗೆ ನಿರ್ದೇಶಕರನ್ನು ನೇಮಿಸಲು ಕೆಲ ನಿಯಮಗಳಿರುತ್ತವೆ. ಅರ್ಹರಾದವರನ್ನು ಮಾತ್ರ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ಕರುಣಾಕರ ರೆಡ್ಡಿ, ಸಚಿವ ಶ್ರೀರಾಮುಲು, ಸಚಿವ ಆನಂದ್ ಸಿಂಗ್ ಎಲ್ಲರೂ ಬಳ್ಳಾರಿಯಲ್ಲಿದ್ದಾರೆ. ಈ ಪ್ರಕ್ರಿಯೆ ಹೇಗೆ ನಡೆದಿದೆ ಎಂಬುದು ಅವರೆಲ್ಲರಿಗೂ ಗೊತ್ತಿದೆ. ಇದರಲ್ಲಿ ರಾಜಕಾರಣ ಮಾಡುವವರ ಘನತೆಯೇ ಕಡಿಮೆಯಾಗುತ್ತದೆ. ಇಂತಹ ವಿಚಾರದಲ್ಲಿ ಆರೋಪ ಮಾಡುವುದು ಬಹಳ ಸುಲಭ ಎಂದು ಸುಧಾಕರ್ ಹೇಳಿದರು.












Click it and Unblock the Notifications