ಕರ್ನಾಟಕದ ಈ ಜಿಲ್ಲೆ ಅತ್ಯಧಿಕ ಹಾಲು ಉತ್ಪಾದನೆಯ 3ನೇ ಜಿಲ್ಲೆಯಾಗಲು ಮೊದಲ ಹೆಜ್ಜೆ
ರೈತರು, ಮಹಿಳೆಯರು ಮತ್ತು ಯುವಜನ ಪರವಾದ ಯೋಜನೆಯನ್ನು ಉದ್ಘಾಟಿಸಲಾಗಿದೆ. ಈಗಾಗಲೇ ಕೈಗೊಂಡ ಕೋಟಿ ವೃಕ್ಷ ಅಭಿಯಾನದಂತೆ ಸಾರ್ವಜನಿಕರು ಇದರಲ್ಲೂ ತೊಡಗಿಸಿ ಕೊಳ್ಳಬೇಕು. ಹೈನುಗಾರಿಕೆ ಮೂಲಕ ತೋಟಗಾರಿಕೆ, ಹೈನುಗಾರಿಕೆಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸಲು ಇದು ನೆರವಾಗಲಿದೆ. ಆರ್ಥಿಕ ಸಬಲೀಕರಣ ಆಗಲಿದೆ ಎಂದು ಬೃಹತ್ ಮತ್ತು ಮಧ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದರು.
ಶನಿವಾರ ಬಿ.ಎಲ್.ಡಿ.ಇ ಸಂಸ್ಥೆ, ಕೃಷಿಕಲ್ಪ ಫೌಂಡೇಶನ್ ಹಾಗೂ ತಿಪಟೂರಿನ ಅಕ್ಷಯಕಲ್ಪ ಫೌಂಡೇಶನ್ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸುಸ್ಥಿರ ಹೈನುಗಾರಿಕೆ ಉತ್ತೇಜಿಸಲು ಕ್ಷೀರ ಪೈಲಟ್ ಯೋಜನೆ ಚಾಲನೆ ನೀಡಲಾಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವಿನೂತನವಾಗಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಯೋಜನೆ ತಮ್ಮ ಜಿಲ್ಲೆಯಲ್ಲಿ ಆರಂಭವಾಗುತ್ತಿರುವುದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದರು.

ಪದ್ಮಶ್ರೀ ಪುರಸ್ಕೃತ ಉದ್ಯಮಿ ಪ್ರಶಾಂತ್ ಪ್ರಕಾಶ್ ವಿಶ್ವಾಸ ಅವರು, ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯು ದೇಶದಲ್ಲಿ ಅತೀ ಹೆಚ್ಚು ಹಾಲು ಉತ್ಪಾದಿಸುವ ಮೊದಲ ಮೂರು ಜಿಲ್ಲೆಗಳಲ್ಲಿ ಒಂದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 15-20 ವರ್ಷಗಳ ಕಾಲ ನವ್ಯೋದ್ಯಮಗಳಿಗೆ ಉತ್ತೇಜನ ನೀಡಿ ನಗರಾಭಿವೃದ್ಧಿಯತ್ತ ಗಮನಹರಿಸಿದ್ದೆ. ಸಚಿವ ಎಂ.ಬಿ. ಪಾಟೀಲರ ಸಹಯೋಗದಲ್ಲಿ ಈಗ ಗ್ರಾಮೀಣ ಭಾಗಗಳಲ್ಲೂ ಕೈಗಾರಿಕೆಗಳ ಆರಂಭಕ್ಕೆ ಆದ್ಯತೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲು ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಾಧಿಪತಿ ಬಸನಗೌಡ ಎಂ.ಪಾಟೀಲ ಈಗಾಗಲೇ 15 ಸಭೆ ಮಾಡಿದ್ದಾರೆ. ತಂತ್ರಜ್ಞಾನ ಬಳಸಿ ಹಾಲು ಉತ್ಪಾದನೆ ಹೆಚ್ಚಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಕೃಷಿಕಲ್ಪ ಫೌಂಡೇಶನ್ ಸಿಇಒ ಸಿ.ಎಂ.ಪಾಟೀಲ ಮಾತನಾಡಿ, ಬಸನಗೌಡ ಯತ್ನಾಳ್ ಪಾಟೀಲರು ಮೂರು ವರ್ಷಗಳಿಂದ ಈ ಯೋಜನೆ ಜಾರಿಗೆ ಪ್ರಯತ್ನಿಸುತ್ತಿದ್ದರು. ಇದಕ್ಕಾಗಿ ಜಿಲ್ಲೆಯ 16 ಹಳ್ಳಿಗಳಲ್ಲಿ ಸಮಗ್ರ ಅಧ್ಯಯನ ನಡೆಸಲಾಗಿದೆ. ಯೋಜನೆ ಜಾರಿಗೆ ಸೂಕ್ತವಾದ ಐದು ಗ್ರಾಮಗಳನ್ನು ಆಯ್ಕೆ ಮಾಡಿ ತಿಪಟೂರಿನ ಮಾದರಿಯಲ್ಲಿ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ.
ಈ ನಿಟ್ಟಿನಲ್ಲಿ ರೈತರಿಗೆ ತರಬೇತಿ ನೀಡಲಾಗಿದೆ. ಬಿ.ಎಲ್.ಡಿ.ಇ ಸಂಸ್ಥೆಯ ಇನಕ್ಯೂಬೆಶನ್ ಸೆಂಟರ್ ಸಹಯೋಗದಲ್ಲಿ ಸ್ಟಾರ್ಟಪ್ ಗಳಿಗೂ ಅವಕಾಶ ನೀಡಲಾಗುವುದು. ರೈತ ಉತ್ಪಾದಕ ಸಂಸ್ಥೆಗಳ ಆದಾಯ ಹೆಚ್ಚಳ, ಮಾರುಕಟ್ಟೆ ಸೃಷ್ಟಿ, ಕ್ಷೀರ ಮತ್ತು ಉದ್ಯಮಶೀಲತೆ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ಷಯಕಲ್ಪ ಫೌಂಡೇಶನ್ ಸಂಸ್ಥಾಪಕ ಶಶಿಕುಮಾರ್ ಅವರು ಮಾತನಾಡಿ, 40 ವರ್ಷಗಳಲ್ಲಿ ಮೂರನೇ ಎರಡರಷ್ಟು ಕೃಷಿಭೂಮಿ ಹಾಳಾಗಿದೆ. ಮುಂದಿನ 60 ವರ್ಷಗಳಲ್ಲಿ ಕೃಷಿಯೋಗ್ಯ ಭೂಮಿ ಸಂಪೂರ್ಣ ಮಾಯವಾಗಲಿದೆ. ಒಂದು ಶತಮಾನದ ಹಿಂದೆ ಇದ್ದ ಕೃಷಿ ಉತ್ಪಾದನೆ ಈಗ ಕಡಿಮೆಯಾಗಿದೆ. ಮಣ್ಣಿನ ಗುಣ ಕಾಪಾಡಿಕೊಂಡು ಕೃಷಿ ಉತ್ಪಾದನೆ ಹೆಚ್ಚಿಸಲು ಸಂಸ್ಥೆಯು ಈ ಯೋಜನೆಯಡಿ ಕೆಲಸ ಮಾಡಲಿದೆ. ಸ್ಥಳೀಯವಾಗಿ ಗೊಬ್ಬರ ತಯಾರಿಕೆ, ಹೈನುಗಾರಿಕೆ ಉಪವಸ್ತುಗಳನ್ನು ಉತ್ಪಾದಿಸಲು ತರಬೇತಿ, ಜಾನುವಾರುಗಳ ಆರೋಗ್ಯ ಸಂರಕ್ಷಣೆ, ವೈಜ್ಞಾನಿಕವಾಗಿ ಮೇವು ಉತ್ಪಾದನೆ, ಹಾಲು ಸಂಸ್ಕರಣೆಗೆ ಸೂಕ್ತ ತರಬೇತಿ ನೀಡಿ ಹಾಲು ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕೆ. ಆನಂದ್, ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಾಧಿಪತಿ ಬಸನಗೌಡ ಎಂ.ಪಾಟೀಲ, ವಿಜಯಪುರ ಮತ್ತು ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಈರನಗೌಡ ಕರಿಗೌಡ್ರ, ವಿಜಯಪುರ- ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ ಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಅಶೋಕ ಗೊಣಸಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೈತರೊಂದಿಗೆ ಕ್ಷೀರ ಯೋಜನೆ ಅನುಷ್ಠಾನ ಕುರಿತು ಚರ್ಚಿಸಿದರು.












Click it and Unblock the Notifications