ಉಡುಪಿ ಪ್ರವೇಶಿಸದಂತೆ ಪ್ರವೀಣ್ ತೊಗಾಡಿಯಾಗೆ ನಿಷೇಧ
ಉಡುಪಿ, ಮಾ.8 : ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಉಡುಪಿ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಹಿಂದೆ ಬೆಂಗಳೂರು ಪೊಲೀಸರು ತೊಗಾಡಿಯಾ ನಗರ ಪ್ರವೇಶಿಸದಂತೆ ನಿಷೇಧ ಹೇರಿದ್ದರು.
ಉಡುಪಿಯಲ್ಲಿ ಮಾರ್ಚ್ 9ರಂದು ಹಿಂದೂ ಸಮಾಜೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರವೀಣ್ ತೊಗಾಡಿಯಾ ಅವರಿಗೆ ಉಡುಪಿ ಜಿಲ್ಲಾ ಪ್ರವೇಶವನ್ನು ಮಾ. 7ರಿಂದ 13ರ ತನಕ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದ್ದಾರೆ. [ಮಾ. 11ರಂದು ಮೈಸೂರಲ್ಲಿ ತೊಗಾಡಿಯಾ ಭಾಷಣ]

ಶನಿವಾರ ಅವರು ಈ ಕುರಿತು ಮಾಹಿತಿ ನೀಡಿದ್ದು, ತೊಗಾಡಿಯಾ ಅವರ ವಿರುದ್ಧ ಐದು ರಾಜ್ಯಗಳಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ 19 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. [ತೊಗಾಡಿಯಾ ಮೇಲೆ ಮೂರು ಕೇಸು ದಾಖಲು]
ಬೆಂಗಳೂರಲ್ಲೂ ನಿಷೇಧ : ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಫೆ.5ರಿಂದ 10ರ ವರೆಗೆ ಪ್ರವೀಣ್ ತೊಗಾಡಿಯಾ ಅವರು ಬೆಂಗಳೂರು ನಗರಕ್ಕೆ ಪ್ರವೇಶಿಸುವಂತಿಲ್ಲ ಎಂದು ನಿಷೇಧ ಹೇರಿದ್ದರು. ಆದರೆ, ಫೆ.9ರಂದು ನಗರದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ತೊಗಾಡಿಯಾ ಅವರ ಭಾಷಣವನ್ನು ಪ್ರಸಾರ ಮಾಡಲಾಗಿತ್ತು. [ಮಂಗಳೂರು ಹಿಂದೂ ಸಮಾಜೋತ್ಸವದ ಚಿತ್ರಗಳು]
ನಾಲ್ಕು ಸಮಾವೇಶಗಳಿವೆ : ಮಾರ್ಚ್ ತಿಂಗಳಿನಲ್ಲಿ ತೊಗಾಡಿಯಾ ಅವರು ರಾಜ್ಯದಲ್ಲಿ ನಾಲ್ಕು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಉಡುಪಿಯಲ್ಲಿ ಮಾರ್ಚ್ 9ರಂದು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಮಾರ್ಚ್ 10 ರಂದು, ಮಾರ್ಚ್ 11ರಂದು ಮೈಸೂರಿನಲ್ಲಿ ಹಿಂದೂ ಸಮಾಜೋತ್ಸವ ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ, ಉಡುಪಿಯಲ್ಲಿ ಪ್ರವೇಶ ನಿಷೇಧಿಸಲಾಗಿದೆ. [ಮಂಗಳೂರು : ಸಾಧ್ವಿ ಬಾಲಿಕಾ ಸರಸ್ವತಿ ವಿರುದ್ಧ ದೂರು]












Click it and Unblock the Notifications