ವೀರಶೈವ ಮಹಾಸಭಾ ರಾಜಕೀಯಕ್ಕೆ ಬಳಕೆ: ಶಾಮನೂರು ಮತ್ತಿತರರಿಗೆ ನೋಟಿಸ್
ಬೆಂಗಳೂರು, ಡಿಸೆಂಬರ್ 18; ಅಖಿಲ ಭಾರತ ವೀರಶೈವ ಮಹಾಸಭಾವನ್ನು ಅಧ್ಯಕ್ಷರು ಮತ್ತಿತರ ಪದಾಧಿಕಾರಿಗಳು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಮಹಸಾಭಾದ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬೆಂಗಳೂರಿನ ವಾಸಿ ಎಸ್. ಎನ್. ಕೆಂಪಣ್ಣ ಸೇರಿದಂತೆ ಐವರು ಸಲ್ಲಿಸಿರುವ ಅರ್ಜಿಯನ್ನು 9ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಮುಮ್ತಾಜ್ ವಿಚಾರಣೆ ನಡೆಸಿದರು.
ಪ್ರತಿವಾದಿಗಳಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ ಅವರಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು 2023ರ ಫೆಬ್ರುವರಿ 17ಕ್ಕೆ ಮುಂದೂಡಿದರು.

ಲಿಂಗಾಯತ ಪದ ಸೇರ್ಪಡೆಗೆ ವಿರೋಧ: ಅರ್ಜಿದಾರರ ಪರ ವಕೀಲರು, ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ ಮಹಾಸಭಾದ ತಮ್ಮ ಸ್ಥಾನಗಳನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಅವರನ್ನು ಪದಚ್ಯುತಗೊಳಿಸಬೇಕು ಎಂದು ಕೋರಿದರು.
ಅಲ್ಲದೆ, ಮಹಾಸಭಾದಲ್ಲಿ ಲಿಂಗಾಯತ ಪದ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ತಡೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಲಾಗಿದೆ.
ಅರ್ಜಿಯಲ್ಲಿನಿದೆ? ; ಅಖಿಲ ಭಾರತ ವೀರಶೈವ ಮಹಾಸಭಾ 2020ರಲ್ಲಿ ತನ್ನ ಬೈಲಾ ತಿದ್ದುಪಡಿ ಮಾಡಿಕೊಳ್ಳುವ ಮೂಲಕ ಲಿಂಗಾಯತ ಪದವನ್ನು ವೀರಶೈವದ ಜೊತೆ ಸೇರ್ಪಡೆ ಮಾಡಿಕೊಂಡಿದೆ. ಇದು ವೀರಶೈವರು ಮತ್ತು ಲಿಂಗಾಯತರನ್ನು ಪ್ರತ್ಯೇಕ ಎಂದು ಗುರುತಿಸಿದಂತಾಗುತ್ತದೆ.
ಆದ್ದರಿಂದ, ಈ ಪದ ಬಳಕೆ ಸಲ್ಲದು. ಮೊದಲಿನಂತೆ ಅಖಿಲ ಭಾರತ ವೀರಶೈವ ಮಹಾಸಭಾ ಎಂದಷ್ಟೇ ಚಾಲ್ತಿಯಲ್ಲಿರಬೇಕು. ಅಖಿಲ ಭಾರತ ವೀರಶೈವ ಮಹಾಸಭಾದ ಹೆಸರನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಂದು ಬಳಸದಂತೆ ತಡೆ ನೀಡಬೇಕು ಎಂದು ದಾವೆದಾರರು ಕೋರಿದ್ದಾರೆ.
ಪುತ್ರನ ಪ್ರತಿಷ್ಠಾಪನೆಗೆ ಯುತ್ನ: ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಿರುವ ಮಹಾಸಭಾದ ಅಧಿವೇಶನದಲ್ಲಿ ಶಿವಶಂಕರಪ್ಪ ತಮ್ಮ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ ಅವರನ್ನು ತಮ್ಮ ನಂತರ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲಿದ್ದಾರೆ. ಮಹಾಸಭಾದ ಪದಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಹೊರತಾಗಿರಬೇಕು. ಹಾಗಾಗಿ, ಈ ಸಂಬಂಧ ಘನ ನ್ಯಾಯಾಲಯ ಸೂಕ್ತ ಆದೇಶ ನೀಡಬೇಕೆಂದು ಕೋರಿದ್ದಾರೆ.












Click it and Unblock the Notifications