Vandebharat Express: ಅಕ್ಟೋಬರ್ ಅಂತ್ಯದ ವೇಳೆಗೆ ರಾಜ್ಯದ ಕರಾವಳಿ ಭಾಗಕ್ಕೆ ವಂದೇಭಾರತ್ ರೈಲು
ಯಶವಂತಪುರ - ಕಾಚಿಗುಡ (ಹೈದರಾಬಾದ್) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸೆಪ್ಟೆಂಬರ್ 24ರಿಂದ ಚಾಲನೆ ನೀಡಲಿದ್ದು, ರಾಜ್ಯದ ಮೂರನೇ ವಂದೇ ಭಾರತ್ ರೈಲು ಸಂಚರಿಸಲಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು ಬರಲಿದೆ. ಈ ಬಗ್ಗೆ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ ಅಂತ್ಯದ ವೇಳೆಗೆ ಮಂಗಳೂರಿನಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಚಾಲನೆಗೊಳ್ಳಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನಿಂದ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವುದಾಗಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ ಎಂದು ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶುಕ್ರವಾರ ನವದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಕುರಿತು ಭರವಸೆ ಸಿಕ್ಕಿದೆ ಎಂದು ಅವರು ಹೇಳಿದರು.
ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸಲು ಮನವಿ
ಬೆಂಗಳೂರು-ಕಣ್ಣೂರು ರೈಲನ್ನು ಕೊಚ್ಚಿವರೆಗೆ ವಿಸ್ತರಿಸಬೇಕೆಂಬ ಕೇರಳದ ಬೇಡಿಕೆಗೆ ಮಣಿಯದಂತೆ ಸಚಿವರಿಗೆ ಮನವಿ ಮಾಡಿರುವುದಾಗಿ ಹೇಳಿದ್ದು. ಸಲಹೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕಟೀಲ್ ಹೇಳಿದ್ದಾರೆ
ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಮಂಗಳೂರಿಗೆ ಮುಂಜಾನೆ ರೈಲು ಮತ್ತು ಮಂಗಳೂರಿನಿಂದ ಸುಬ್ರಹ್ಮಣ್ಯ ರಸ್ತೆಗೆ ಸಂಜೆ ರೈಲು ಓಡಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಬದಲು ಮಂಗಳೂರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ (ಎಸ್‌ಡಬ್ಲ್ಯುಆರ್) ಸೇರಿಸುವಂತೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಮನವಿ ಮಾಡಲಾಗಿದೆ ಎಂದು ಸಂಸದರು ಹೇಳಿದರು.
ಸೆಪ್ಟೆಂಬರ್ 24ರಂದು ಯಶವಂತಪುರ-ಹೈದರಾಬಾದ್ ರೈಲು
ಸೆಪ್ಟೆಂಬರ್ 24ರಂದು ಹೈದರಾಬಾದ್ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ದೇಶಾದ್ಯಂತ ಒಟ್ಟು 9 ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಈ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಯಶವಂತಪುರ ಮತ್ತು ಕಾಚಿಗುಡ (ಹೈದರಾಬಾದ್) ನಡುವೆ ಈ ರೈಲು ಸಂಚರಿಸಲಿದೆ. ಈಗಾಗಲೇ ಪ್ರಯೋಗಾತ್ಮಕ ಓಡಾಟವನ್ನು ಯಶಸ್ವಿಯಾಗಿ ಮುಗಿಸಿದೆ. 7 ಗಂಟೆ ಅವಧಿಯಲ್ಲಿ 610 ಕಿಮೀ ಅಂತರವನ್ನು ಕ್ರಮಿಸಲಿದೆ ಎಂದು ಹೇಳಿದೆ.












Click it and Unblock the Notifications