9 ರೈಲು ಯೋಜನೆ ಮುಗಿಸಲು ಸೋಮಣ್ಣ ಗಡುವು: ಯೋಜನೆ ವಿವರ
ಬೆಂಗಳೂರು, ಜೂನ್ 18: ಕರ್ನಾಟಕದಲ್ಲಿ ಕುಂಟುತ್ತಾ ಸಾಗಿರುವ 1264 ಕಿ. ಮೀ. ಒಳಗೊಂಡ 9 ರೈಲು ಯೋಜನೆಗಳನ್ನು ಪೂರ್ಣಗೊಳಿಸಲು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಗಡುವು ನೀಡಿದ್ದಾರೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಬಗ್ಗೆಯೂ ಸಚಿವರು ಗಮನ ಹರಿಸಿದ್ದಾರೆ.
ತುಮಕೂರು ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೈಋತ್ಯ ವಲಯ ರೈಲ್ವೆ ಅಧಿಕಾರಿಗಳ ಸಭೆ ನಡೆಸಿ, ರಾಜ್ಯದ ರೈಲ್ವೆಯ ಸಮಸ್ಯೆಗಳ ಕುರಿತು ಚರ್ಚಿಸಿದರು. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಸಚಿವರು, "ಮೂರು ದಶಕಗಳಿಂದ ರಾಜ್ಯದಲ್ಲಿ ವಿಳಂಬವಾಗಿರುವ 9 ರೈಲ್ವೆ ಯೋಜನೆಗಳಿಗೆ ಚುರುಕು ನೀಡಿ, 2025-26ರ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ" ಎಂದು ಹೇಳಿದರು. ಯೋಜನೆ ವಿಳಂಬಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಸಚಿವರು ಅಧಿಕಾರಿಗಳಿಂದ ವಿವರವಾದ ಮಾಹಿತಿಯನ್ನು ಪಡೆದರು.
ಸಭೆಯಲ್ಲಿ ಚರ್ಚೆಯಾದ ಯೋಜನೆಗಳು: ವಿ. ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಮೊದಲ ಬಾರಿಗೆ ನೈಋತ್ಯ ರೈಲ್ವೆ ವಲಯದ ಯೋಜನೆಗಳ ಕುರಿತು ಸಭೆಯನ್ನು ನಡೆಸಿದರು. ಸಭೆಯಲ್ಲಿ 14 ವಿವಿಧ ಯೋಜನೆಗಳು, 9 ಹೊಸ ಯೋಜನೆಗಳು, 5 ಹಳಿ ದ್ವಿಪಥ ಕಾಮಗಾರಿ ಕುರಿತು ಚರ್ಚೆ ನಡೆಯಿತು.
ಹೊಸ ರೈಲು ಮಾರ್ಗ ಯೋಜನೆಗಳು 707 ಕಿ. ಮೀ. ಒಳಗೊಂಡಿದೆ. ದ್ವಿಪಥಗೊಳ್ಳಲಿರುವ ಮಾರ್ಗದ ಒಟ್ಟು ಉದ್ದ 289 ಕಿ. ಮೀ., ಹೊಸದಾಗಿ 502 ಕಿ. ಮೀ. ಮಾರ್ಗವನ್ನು ಯಶಸ್ವಿಯಾಗಿ ದ್ವಿಪಥಗೊಳಿಸಿ ಇಲಾಖೆ ಈಗಾಗಲೇ ಸಂಚಾರವನ್ನು ಪ್ರಾರಂಭಿಸಿದೆ.
9 ಹೊಸ ರೈಲು ಮಾರ್ಗಗಳಲ್ಲಿ ತುಮಕೂರು-ರಾಯದುರ್ಗ-ಕಲ್ಯಾಣದುರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ, ಗಿಣಿಗೇರಾ-ರಾಯಚೂರು, ಬಾಗಲಕೋಟೆ-ಕುಡಚಿ, ಗದಗ-ವಾಡಿ, ಕಡೂರು-ಚಿಕ್ಕಮಗಳೂರು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ಬೆಳಗಾವಿ-ಧಾರವಾಡ ವಯಾ ಕಿತ್ತೂರು ಮತ್ತು ಹಾಸನ-ಬೇಲೂರು ಮಾರ್ಗ ಸೇರಿವೆ.
ಸಚಿವ ವಿ. ಸೋಮಣ್ಣ ಹೊಟಗಿ-ಕೂಡಗಿ-ಗದಗ, ಯಶವಂತಪುರ-ಚನ್ನಸಂದ್ರ, ಬೈಯಪ್ಪನಹಳ್ಳಿ-ಹೊಸೂರು, ಬೆಂಗಳೂರು-ವೈಟ್‌ಫೀಲ್ಡ್, ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ವಾಸ್ಕೋ ಡಾ-ಗಾಮ ದ್ವಿಪಥಗೊಳಿಸುವ ಕಾಮಗಾರಿಯ ಕುರಿತು ಸಹ ಸಭೆಯಲ್ಲಿ ಚರ್ಚಿಸಿದರು.
ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಜಿಲ್ಲಾಡಳಿತ, ಕೆ-ರೈಡ್ ಸೇರಿದಂತೆ ವಿವಿಧ ಸ್ಥಳೀಯ ಆಡಳಿತದ ಜೊತೆ ಸಮನ್ವಯತೆ ಸಾಧಿಸಬೇಕು ಎಂದು ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ನಗರದಲ್ಲಿರುವ ರೈಲ್ವೆ ಕ್ರಾಸಿಂಗ್‌ಗಳಲ್ಲಿನ ಸುರಕ್ಷತೆಯ ಬಗ್ಗೆ ಗಮನಹರಿಸುವಂತೆಯೂ ಸಚಿವರು ನಿರ್ದೇಶನ ನೀಡಿದರು. ವಿವಿಧ ಯೋಜನೆಗಳ ಮಾಹಿತಿ ಪಡೆದ ಸಚಿವರು, ಅವುಗಳನ್ನು ಪೂರ್ಣಗೊಳಿಸಲು ತೊಡಕಾಗಿರುವ ಅಂಶಗಳ ಕುರಿತು ವಿವರಣೆ ಪಡೆದರು.
ಬೆಂಗಳೂರು ಸಬ್ ಅರ್ಬನ್ ರೈಲು: ವಿ. ಸೋಮಣ್ಣ ಸಭೆಯಲ್ಲಿ ಬೆಂಗಳೂರು ಉಪ ನಗರ ರೈಲು ಯೋಜನೆ (ಸಬ್ ಅರ್ಬನ್) ಕುರಿತು ಸಹ ಚರ್ಚೆ ನಡೆಸಿದರು. ಯೋಜನೆಯನ್ನು ಚುರುಕುಗೊಳಿಸಬೇಕು. ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್)ಗೆ 15-20 ದಿನಗಳಲ್ಲಿ ವ್ಯಸ್ಥಾಪಕ ನಿರ್ದೇಶಕರಾಗಿ ತಾಂತ್ರಿಕ ತಜ್ಞರನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.
ಕೆ-ರೈಡ್‌ಗೆ ವ್ಯಸ್ಥಾಪಕ ನಿರ್ದೇಶಕರಾಗಿ ತಾಂತ್ರಿಕ ತಜ್ಞರನ್ನು ನೇಮಕ ಮಾಡಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದರು. ಆದರೆ ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆ ವೇಗವಾಗಿ ಸಾಗಲು ಕೆ-ರೈಡ್‌ಗೆ ವ್ಯಸ್ಥಾಪಕ ನಿರ್ದೇಶಕರಾಗಿ ತಾಂತ್ರಿಕ ತಜ್ಞರನ್ನು ನೇಮಕ ಮಾಡಬೇಕು ಎಂಬುದು ಬೇಡಿಕೆಯಾಗಿತ್ತು. ಇದಕ್ಕೆ ಈಗ ವಿ. ಸೋಮಣ್ಣ ಒಪ್ಪಿಗೆ ನೀಡಿದ್ದಾರೆ.











Click it and Unblock the Notifications