Indian Railways: ಉತ್ತರ ಕರ್ನಾಟಕದ 2 ರೈಲು ಯೋಜನೆಗಳ ಅಪ್ಡೇಟ್ ಕೊಟ್ಟ ಸಚಿವರು
ಬೆಂಗಳೂರು, ಸೆಪ್ಟಂಬರ್ 06: ಉತ್ತರ ಕರ್ನಾಟಕ ಭಾಗದ ಮಹತ್ವದ ರೈಲ್ವೆ ಯೋಜನೆಗಳಲ್ಲಿ ಒಂದಾದ 257 ಕಿಲೋಮೀಟರ್ ಉದ್ದದ ಗದಗ- ವಾಡಿ ಮಧ್ಯದ ಮಾರ್ಗವನ್ನು 2026ರ ಮಾರ್ಚ್ ಒಳಗೆ ಮುಗಿಸುವ ಗಡುವು ಹಾಕಿಕೊಳ್ಳಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ತಿಳಿಸಿದರು.
ಬುಧವಾರ ಉತ್ತರ ಕರ್ನಾಟಕದ ಎರಡು ಮುಖ್ಯ ರೈಲ್ವೆ ಯೋಜನೆಗಳಾದ ಬಾಗಲಕೋಟೆ-ಕುಡಚಿ ಹಾಗೂ ಗದಗ-ವಾಡಿ ನಡುವಿನ ಮಾರ್ಗಗಳ ಪ್ರಗತಿಯನ್ನು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಪರಿಶೀಲನೆ ಪ್ರತ್ಯೇಕ ಸಭೆ ನಡೆಸಿದರು. ಈ ಮೂಲಕ ಮಹತ್ವದ ಮಾಹಿತಿಗಳನ್ನು ನೀಡಿದರು.

ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಗಳ ತಲಾ ಶೇಕಡಾ 50ರಷ್ಟು ವೆಚ್ಚ ಹಂಚಿಕೆಯಲ್ಲಿ ಒಟ್ಟು ರೂ. 1,922 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ನಡೆಸಲಾಗುತ್ತಿದೆ. ಈ ಕಾಮಗಾರಿಗೆ 4,002 ಎಕರೆ ಭೂಮಿ ಅಗತ್ಯವಿದೆ. ಈಗಾಗಲೇ 3,945 ಎಕರೆ ಭೂಮಿಯನ್ನು ಕಾಮಗಾರಿಗಾಗಿ ಬಿಟ್ಟು ಕೊಡಲಾಗಿದೆ. ಮಿಕ್ಕ 57 ಎಕರೆ ಭೂಮಿಯನ್ನು ಇನ್ನೊಂದು ತಿಂಗಳೊಳಗೆ ನೀಡಲಾಗುವುದು ಎಂದರು.
ಗದಗನಿಂದ ತಳಕಲ್ ವರೆಗೆ ಈಗಾಗಲೇ ರೈಲ್ವೆ ಹಳಿ ಇದ್ದು, ತಳಕಲ್ ನಿಂದ ಕುಷ್ಟಗಿವರೆಗಿನ 57 ಕಿ.ಮೀ. ಪೈಕಿ ಹನುಮಪುರದವರೆಗೆ ಕೆಲಸ ಪೂರ್ಣಗೊಂಡಿದೆ. ಕುಷ್ಟಗಿವರೆಗಿನ ಮಾರ್ಗ ಮಾರ್ಚ್ 24ರೊಳಗೆ ಮುಗಿಯಲಿದೆ.ಅದಾದ ಮೇಲೆ ಇಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ. ಇನ್ನೊಂದು ಭಾಗದಲ್ಲಿ ವಾಡಿ ಕಡೆಯಿಂದ ಶೋರಾಪುರದವರೆಗೆ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು.
ಗುಣಮಟ್ಟಕ್ಕೆ ಒತ್ತು ನೀಡಲು ಶಾಸಕರ ಮನವಿ
ಗದಗನಿಂದ ವಾಡಿವರೆಗೆ ರೈಲು ಮಾರ್ಗ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆಧ್ಯತೆ ನೀಡುವಂತೆ ಕೊಡುವಂತೆ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಸಚಿವರಿಗೆ ಮನವಿ ಮಾಡಿದರು. ಆಗ ಸಚಿವ ಪಾಟೀಲರು ಸಭೆಯಲ್ಲಿದ್ದ ರೈಲ್ವೆ ಅಧಿಕಾರಿಗಳಿಗೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗಮನಹರಿಸಲು ಸೂಚಿಸಿದರು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ತಂಡಗಳನ್ನು ಕಳುಹಿಸಿ ಗುಣಮಟ್ಟ ಖಾತ್ರಿ ಮಾಡಿಕೊಳ್ಳುವಂತೆ ಸೂಚಿಸಿದರು.

ಒಟ್ಟಾರೆ, ಈ ರೈಲ್ವೆ ಮಾರ್ಗದ ಕಾಮಗಾರಿ 2026ರ ಮಾರ್ಚ್ ಅವಧಿಯನ್ನು ಮೀರುವಂತಿಲ್ಲ. ಈ ಕಾಲಮಿತಿ ಮೀರಿ ಪುನಃ ಕಾಮಗಾರಿ ವೆಚ್ಚ ಹೆಚ್ಚಳವಾಗದಂತೆ ಗಮನ ವಹಿಸಬೇಕು.
142 ಕೋಟಿ ಕಿ.ಮೀ. ಕಾಮಗಾರಿ
ಬಾಗಲಕೋಟೆಯಿಂದ ಕುಡಚಿವರೆಗೆ 142 ಕೋಟಿ ಕಿ.ಮೀ. ಉದ್ದದ ರೂ 1,530 ಕೋಟಿ ವೆಚ್ಚದ ಕಾಮಗಾರಿಗೆ ನಡೆಯುತ್ತಿದ್ದು, ಇದು ಇನ್ನೊಂದು ಪ್ರಮುಖ ಯೋಜನೆ ಆಗಿದೆ. ಈ ಯೋಜನೆಗೆ ಅಗತ್ಯವಾಗಿದ್ದ 2,496 ಎಕರೆ ಭೂಮಿಯ ಪೈಕಿ 2,476 ಎಕರೆ ಈಗಾಗಲೇ ರೈಲ್ವೆ ಇಲಾಖೆ ನೀಡಿದ್ದೇವೆ. ಉಳಿದ 20 ಎಕರೆ ಭೂಮಿಯನ್ನು ಸದ್ಯದಲ್ಲೇ ಬಿಟ್ಟು ಕೊಡಲಾಗುವುದು. 2025ರ ಡಿಸೆಂಬರ್ ಒಳಗೆ ಈ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾವನ್ನು ಸಚಿವರ ವ್ಯಕ್ತಪಡಿಸಿದರು.
ಈ ಯೋಜನೆಯನ್ನು ಸಾಧ್ಯವಾದರೆ 2025ರ ಏಪ್ರಿಲ್ ಒಳಗೆ ಅಂದರೆ ಆರು ತಿಂಗಳು ಮುಂಚಿತವಾಗಿ ಮುಗಿಸಲು ತಿಳಿಸಿದರು.
ಬಾಗಲಕೋಟೆ- ಖಚ್ಚಿದೋಣಿ- ಲೋಕಾಪುರದವರೆಗಿನ 60 ಕಿ.ಮೀ. ರೈಲ್ವೆ ಕಾಮಗಾರಿ 2024ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ.
ಈ ಭಾಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಮತ್ತೊಂದು ಕಡೆ ಕುಡಚಿ ಭಾಗದಿಂದ ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗಳ ಆರಂಭಕ್ಕೆ ಚಾಲನೆ ಕೊಡಬೇಕಿದೆ. ಕುಡಚಿಯಿಂದ ಜಗದಾಳ್ ವರೆಗಿನ ಕೆಲಸ ಶುರುವಾಗಲಿದೆ ಎಂದು ತಿಳಿಸಿದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್, ರೈಲ್ವೆ ಅಧಿಕಾರಿಗಳು, ಮೂಲಸೌಕರ್ಯ ಇಲಾಖೆ ಎಸಿಎಸ್ ಗೌರವ ಗುಪ್ತ, ಹಾಜರಿದ್ದರು. ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications