ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ: ಸಿದ್ದರಾಮಯ್ಯ ಏನಂದ್ರು?
ಬೆಳಗಾವಿ, ಡಿಸೆಂಬರ್ 19 : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ ಸಭಾಪತಿಯವರಿಗೂ ಹಾಗೂ ಪೊಲೀಸ್ ಠಾಣೆಗೂ ದೂರು ಸಲ್ಲಿಸಿರುವ ಮಾಹಿತಿ ದೊರೆತಿದ್ದು, ಪೊಲೀಸರು ಈ ಕ್ರಿಮಿನಲ್ ಅಪರಾಧ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಸಿಟಿ ರವಿಯವರು ಅವಾಚ್ಯ ಪದ ಬಳಕೆಯನ್ನು ಅಲ್ಲಗಳೆದಿರುವ ಕುರಿತು ಇಂದು ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅವರು ಅವಾಚ್ಯ ಪದ ಬಳಸಿದ್ದಾರೆಂದು ಹಲವು ಸದಸ್ಯರು ಹೇಳುತ್ತಿದ್ದು, ತಾನು ವಿಧಾನಪರಿಷತ್ತಿನಲ್ಲಿ ಇರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂತಹ ಪದಪ್ರಯೋಗದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನನೊಂದಿದ್ದು, ಇಂತಹ ಪದಬಳಕೆ ಒಂದು ರೀತಿಯ ಲೈಂಗಿಕ ದೌರ್ಜನ್ಯವಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಂಬೇಡ್ಕರರಿಗೆ ಅಪಮಾನ ಮಾಡಿದ ವಿಷಯ ಪ್ರಸ್ತಾಪ: ಸಿ.ಟಿ.ರವಿ
ಕಾಂಗ್ರೆಸ್ಸಿಗರಾದ ನೀವು ಇವತ್ತು ನಾಟಕ ಆಡುತ್ತಿದ್ದೀರಿ; ಫ್ರಸ್ಟ್ರೇಡೆಡ್ (ಹತಾಶ) ಆಗಿದ್ದೀರಿ ಎಂದು ಸದನದಲ್ಲಿ ಹೇಳಿದ್ದೇನೆ. ಅವರು ಅವರವರ ಭಾವನೆಗೆ ತಕ್ಕಂತೆ ಭಾವಿಸಿದರೆ ನಾನು ಹೊಣೆಗಾರ ಅಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದರು.
ಯಾವುದು ಆನ್ ರೆಕಾರ್ಡ್ ಇದೆಯೋ ಅದನ್ನು ತೋರಿಸಲಿ; ಆಮೇಲೆ ಪ್ರತಿಕ್ರಿಯೆ ಕೊಡುತ್ತೇನೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸಭಾಪತಿಗಳು ಏನೂ ಕೇಳಿಲ್ಲ, ಇರೋದನ್ನು ಮಾತ್ರ ಆಗ ಹೇಳಬಲ್ಲೆ. ಇಲ್ಲದೆ ಇರುವುದನ್ನು ಕಲ್ಪಿಸಿದರೆ ಅವರವರ ಭಾವನೆಗೆ ತಕ್ಕಂತೆ ಮಾತನಾಡಿದರೆ ನಾನು ಹೇಗೆ ಉತ್ತರ ಕೊಡಲು ಸಾಧ್ಯ ಎಂದು ಕೇಳಿದರು.
ಯಾರು ಏನು ಮಾತನಾಡಿದರು ಎಂಬುದು ಆಡಿಯೋ, ವಿಡಿಯೋದಲ್ಲಿ ದಾಖಲಾಗಿ ಇರುತ್ತದೆ ಎಂದ ಅವರು, ಕಾಂಗ್ರೆಸ್ ಪಕ್ಷ ಡಾ. ಅಂಬೇಡ್ಕರರಿಗೆ ಮಾಡಿದ ಅಪಮಾನವನ್ನು ನಾನು ಪ್ರಸ್ತಾಪಿಸಿದ್ದೇನೆ. ಅವರಿಗೆ ಅನ್ಯಾಯ ಮಾಡಿದ್ದನ್ನು, ಅವರನ್ನು ಸೋಲಿಸಿದ್ದನ್ನು ಹೇಳಿದ್ದೇನೆ ಎಂದು ವಿವರಿಸಿದರು.
ಸತ್ತಾಗ ಅಪಮಾನ ಮಾಡಿದ ಕುರಿತು ಹೇಳಿದ್ದೇನೆ. ದೆಹಲಿಯಲ್ಲಿ ಆರು- ಮೂರಡಿ ಜಾಗ ಕೊಡದ ಕುರಿತು ಹೇಳಿದ್ದೇನೆ. ಸ್ಮಾರಕ ಕಟ್ಟದೇ ಇರುವುದರ ಬಗ್ಗೆ ಹೇಳಿದ್ದೇನೆ. ಭಾರತ ರತ್ನ ಕೊಡದೆ ಇರುವುದರ ಬಗೆಗೆ ಹೇಳಿದ್ದೇನೆ. ನವೆಂಬರ್ 26ರಂದು ಸಂವಿಧಾನದ ಬಗ್ಗೆ ಗೌರವ ತೋರದೆ ಇದ್ದದನ್ನು ತಿಳಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ ಅವರು ಸ್ಪಷ್ಟಪಡಿಸಿದರು.
ಈ ದೇಶದಲ್ಲಿ ಸಂವಿಧಾನ ಇದೆ; ವಿಧಾನಮಂಡಲದ ನಿಯಮಾವಳಿಗಳಿವೆ. ಸಂವಿಧಾನ, ನಿಯಮಾವಳಿ ಮೀರಿದರೆ, ಅವರು ಸಂವಿಧಾನ ವಿರೋಧಿ ಆಗಲು ಸಾಧ್ಯ ಎಂದು ನುಡಿದರು. ಸಭಾಪತಿಗಳು ಕರೆದರೆ ಭೇಟಿ ಮಾಡುತ್ತೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು. ವಿಧಾನಪರಿಷತ್ತಿನ ಸಭಾಂಗಣದಲ್ಲಿ ಎಂದು ಆರೋಪ ಮಾಡಿದ್ದಾರೆ; ಅಲ್ಲಿ ಆಡಿಯೋ, ವಿಡಿಯೋ ಇರುತ್ತದೋ ಇಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.












Click it and Unblock the Notifications