ಹದಿನೈದು ವರ್ಷ ಅವಧಿ ಮುಗಿದ ವಾಹನಗಳ ಮರು ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ
ಬೆಂಗಳೂರು, ಏ.01: ಕೇಂದ್ರ ಸಾರಿಗೆ ಸಚಿವಾಲಾಯ ಹಳೆ ವಾಹನ ಮಾಲೀಕರಿಗೆ ಯುಗಾದಿಗೆ ಬಂಪರ್ ಗಿಫ್ಟ್ ಕೊಟ್ಟಿದೆ! ಹದಿನೈದು ವರ್ಷದ ಮೇಲ್ಪಟ್ಟ ವಾಹನ ನಿಮ್ಮ ಬಳಿ ಇದ್ರೆ ಅದನ್ನು ಇಟ್ಟುಕೊಳ್ಳಬೇಕಾ ಅಥವಾ ಗುಜರಿಗೆ ಹಾಕಬೇಕಾ ಒಮ್ಮೆ ಈಗಲೇ ಯೋಚಿಸಿ. ಕೇಂದ್ರ ಸರ್ಕಾರದ ಆದೇಶದಂತೆ ಹಳೆ ವಾಹನಗಳಿಗೆ ನೋಂದಣಿ ಶುಲ್ಕ ಇವತ್ತಿನಿಂದ ಎಂಟು ಪಟ್ಟು ಹೆಚ್ಚಾಗಲಿದೆ.
ಹದಿನೈದು ವರ್ಷ ಅವಧಿ ಮುಗಿದ ದ್ವಿಚಕ್ರ ವಾಹನ ಸೇರಿದಂತೆ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು ಎಂಟು ಪಟ್ಟು ಹೆಚ್ಚಿಸಿದ್ದು, ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಈ ಹಿಂದೆ ನಿಗದಿ ಮಾಡಿದ್ದ ನೋಂದಣಿ ನವೀಕರಣ ಶುಲ್ಕಕ್ಕೆ ಹೋಲಿಸಿದ್ರೆ ಎಂಟು ಪಟ್ಟು ಹೆಚ್ಚು ಶುಲ್ಕ ಸಾರಿಗೆ ಇಲಾಖೆಗೆ ಪಾವತಿಸಬೇಕು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ನೂತನ ನಿಯಮವನ್ನು ಜಾರಿಗೆ ತಂದಿದೆ. ಸತತ ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಇದೀಗ ಹಳೇ ವಾಹನಗಳ ನೋಂದಣಿ ನವೀಕರಣ ಶುಲ್ಕ ಹೆಚ್ಚಿಸಿ ಬಿಸಿ ಮುಟ್ಟಿಸಿದೆ. ಈ ನಿಯಮ ದೆಹಲಿಯಲ್ಲಿ ನೋಂದಣಿಯಾಗಿರುವ ಹದಿನೈದು ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನಗಳಿಗೆ ಹಾಗೂ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳಿಗೆ ಅನ್ವಯ ಆಗುವುದಿಲ್ಲ.
ಯಾವ ವಾಹನಕ್ಕೆ ಎಷ್ಟು?: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ನೂತನ ನಿಯಮದ ಪ್ರಕಾರ ನೋಂದಣಿಯಾಗಿ ಹದಿನೈದು ವರ್ಷ ಪೂರೈಸಿದ ವಾಹನದ ಮರು ನೋಂದಣಿ ಶುಲ್ಕ 5 ಸಾವಿರ ಆಗಲಿದೆ. ಈಗಿನ ಮರು ನೋಂದಣಿ ಶುಲ್ಕ ಕೇವಲ 600 ರೂ. ಇತ್ತು. ಅದೇ ರೀತಿ ದ್ವಿಚಕ್ರ ವಾಹನಗಳಿಗೆ ಈ ಹಿಂದೆ ಕೇವಲ 300 ರೂ. ಮರು ನೋಂದಣಿ ಶುಲ್ಕ ನಿಗದಿ ಮಾಡಲಾಗಿತ್ತು.

ಪರಿಷ್ಕೃತ ನಿಯಮದಿಂದ ಹದಿನೈದು ವರ್ಷ ಮೇಲ್ಪಟ್ಟ ದ್ವಿಚಕ್ರ ವಾಹನ ಮರು ನೋಂದಣಿ ಶುಲ್ಕ 1 ಸಾವಿರ ರೂ. ಆಗಲಿದೆ. ಇನ್ನು ವಿದೇಶಗಳಿಂದ ಅಮದು ಮಾಡಿಕೊಂಡಿರುವ ಐಷಾರಾಮಿ ಕಾರುಗಳ ಮರು ನೋಂದಣಿ ಶುಲ್ಕ ಹದಿನೈದು ಸಾವಿರ ರೂ. ಬದಲಿಗೆ 40 ಸಾವಿರಕ್ಕೆ ಹೆಚ್ಚಳವಾಗಿದೆ. ಸರಾಸರಿ ಲೆಕ್ಕ ಹಾಕಿದ್ರೆ ಈ ಹಿಂದಿನ ದರಕ್ಕಿಂತಲೂ ಎಂಟು ಪಟ್ಟು ಹೆಚ್ಚಳ ಮಾಡಲಾಗಿದೆ.

ಗುಜರಿ ಪಾಲಿಸಿ ಭಾಗವಾಗಿ ಈ ಸ್ಕೀಮ್ : ಅಪಘಾತಗಳ ನಿಯಂತ್ರಣ, ಆಟೋ ಮೊಬೈಲ್ ಕ್ಷೇತ್ರಕ್ಕೆ ಪ್ರೊತ್ಸಾಹ ಕೊಡುವ ಜತೆಗೆ ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಳೆದ ವರ್ಷ ಗುಜರಿ ಪಾಲಿಸಿ ಪರಿಚಯಿಸಿದೆ. ಅದರ ಪ್ರಕಾರ ಹದಿನೈದು ವರ್ಷ ಅವಧಿ ಮುಗಿದ ವಾಹನಗಳನ್ನು ಗುಜರಿಗೆ ಹಾಕಲು ಪ್ರತ್ಯೇಕ ನೀತಿಯನ್ನೇ ರೂಪಿಸಿದೆ. ಹಳೇ ವಾಹನ ಗುಜರಿಗೆ ಹಾಕುವ ಮೂಲಕ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡಲು ವಿಶೇಷ ರಿಯಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಅದರಂತೆ ಹಳೇ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇದೀಗ ಮರು ನೋಂದಣಿ ಶುಲ್ಕ ಎಂಟು ಪಟ್ಟು ಹೆಚ್ಚಿಸಿ ವಾಹನ ಮಾಲೀಕರಿಗೆ ಶಾಕ್ ಕೊಟ್ಟಿದೆ.

ಕೊರೊನಾದಿಂದ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇದರೊಂದಿಗೆ ಪೆಟ್ರೋಲ್ ಡೀಸೆಲ್ ಲೀಟರ್ ದರ ನೂರರ ಗಡಿ ದಾಟಿದೆ. ವಾಹನಗಳನ್ನು ನಿಬಾಯಿಸುವುದೇ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ವಿದ್ಯತ್ ಚಾಲಿತ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುವುದು ಮಿತವ್ಯಯಕಾರಿ ನಿಜ. ಆದರೆ, ಪೆಟ್ರೋಲ್ ಡೀಸಲ್ ವಾಹನಗಳ ಬೆಲೆಗೆ ಹೋಲಿಸಿದ್ರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಎರಡು ಪಟ್ಟು ಜಾಸ್ತಿ. ಹೀಗಾಗಿ ಇರುವ ಹಳೇ ವಾಹನಗಳನ್ನೇ ಇಟ್ಟುಕೊಳ್ಳೋಣ ಎಂದ್ರೆ ನೋಂದಣಿ ಶುಲ್ಕ ಪಾವತಿಸಲಾಗದ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರದ ಈ ಆದೇಶದಿಂದ ಜನ ಕಂಗಾಲಾಗಿದ್ದಾರೆ.












Click it and Unblock the Notifications