ರಾಜ್ಯ ಅನ್‌ಲಾಕ್ 2.0; ಜೂನ್ 21ರಿಂದ ಏನಿರುತ್ತೆ? ಏನಿರಲ್ಲ?
ಬೆಂಗಳೂರು, ಜೂನ್ 19: ರಾಜ್ಯದಲ್ಲಿ ಜೂನ್ 21ರಿಂದ ಎರಡನೇ ಹಂತದ ಅನ್‌ಲಾಕ್ ಆಗಲಿದ್ದು, ಕೊರೊನಾ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ. 5ಕ್ಕಿಂತ ಕಡಿಮೆ ಇರುವ ಹದಿನಾರು ಜಿಲ್ಲೆಗಳಿಗೆ ಸಿಎಂ ಯಡಿಯೂರಪ್ಪ ಅನ್‌ಲಾಕ್ ಘೋಷಣೆ ಮಾಡಿದ್ದಾರೆ.
ಲಾಕ್‌ಡೌನ್ ಸಡಿಲಿಕೆ ಮಾಡುವ ಸಂಬಂಧ ಶನಿವಾರ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದ ನಂತರ ಈ ಘೋಷಣೆ ಮಾಡಿದ್ದಾರೆ.
ಶೇ.5% ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿರುವ ಹದಿನಾರು ಜಿಲ್ಲೆಗಳಲ್ಲಿ, ಅಂದರೆ ಉತ್ತರ ಕನ್ನಡ ಜಿಲ್ಲೆ, ಬೆಳಗಾವಿ, ಮಂಡ್ಯ, ತುಮಕೂರು, ಬಾಗಲಕೋಟೆ, ಕಲಬುರಗಿ, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ, ಬೆಂಗಳೂರು, ಕೋಲಾರ, ರಾಯಚೂರು, ಹಾವೇರಿ, ರಾಮನಗರ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಅನ್‌ಲಾಕ್ ಘೋಷಣೆ ಮಾಡಲಾಗಿದೆ. ಉಳಿದ ಹದಿಮೂರು ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಯುವುದು. ಮೈಸೂರಿನಲ್ಲಿ ಲಾಕ್‌ಡೌನ್ ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.
ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಹಿಂದಿನ ಸಡಿಲಿಕೆಗಳು ಮಾತ್ರ ಅನ್ವಯವಾಗುತ್ತವೆ. ಶೇ. 10ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧಗಳು ಮುಂದುವರೆಸಲು ತೀರ್ಮಾನ ಮಾಡಲಾಗಿದೆ.
ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜೂನ್ 14ರಿಂದ ಲಾಕ್‌ಡೌನ್ ಅನ್ನು ಒಂದು ವಾರಗಳ ಕಾಲ ಮುಂದೂಡಲಾಗಿತ್ತು. ಕಳೆದ ಏಪ್ರಿಲ್ 27ರಿಂದ ಕರ್ನಾಟಕದಲ್ಲಿ ಜಾರಿ ಮಾಡಲಾಗಿದ್ದ ಕೋವಿಡ್ -19 ಲಾಕ್‌ಡೌನ್ ಅನ್ನು ಜೂನ್ 14ರ ನಂತರ ಅಲ್ಪ ಸಡಿಲಿಕೆ ಮಾಡಲಾಗಿತ್ತು. ಇದೀಗ ಜೂನ್ 21ರ ನಂತರ ಹಲವು ಸಡಿಲಿಕೆಗಳನ್ನು ಮಾಡಲಾಗಿದೆ.
ಅನ್‌ಲಾಕ್ ಆದ ಜಿಲ್ಲೆಗಳಲ್ಲಿ ಯಾವುದಕ್ಕೆಲ್ಲಾ ಅವಕಾಶ ನೀಡಲಾಗಿದೆ? ಯಾವುದಕ್ಕೆ ನಿರ್ಬಂಧ ಮುಂದುವರೆಯಲಿದೆ? ಮುಂದಿದೆ ವಿವರ...

ಅಂಗಡಿ ಮುಂಗಟ್ಟುಗಳಿಗೆ ಅವಕಾಶ
ಅನ್‌ಲಾಕ್‌ನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಬೆಳಿಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳು ಮಾತ್ರವಲ್ಲದೇ ಎಲ್ಲಾ ಬಗೆಯ ಅಂಗಡಿಗಳನ್ನೂ ತೆರೆಯಲು ಅವಕಾಶ ನೀಡಲಾಗಿದೆ.

ಬಸ್, ಮೆಟ್ರೋ ಓಡಾಟಕ್ಕೆ ಅನುಮತಿ
ಎರಡನೇ ಹಂತದ ಅನ್‌ಲಾಕ್‌ನಲ್ಲಿ ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಲಾಗಿದೆ. ಕೆಎಸ್ ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಿಗೆ ಅವಕಾಶ ನೀಡಲಾಗಿದೆ. ಮೆಟ್ರೋ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಬಸ್ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ ಮಾಡಬೇಕೆಂದು ಸೂಚಿಸಲಾಗಿದೆ.

ಹೋಟೆಲ್‌ಗಳಲ್ಲಿ ಕುಳಿತು ತಿನ್ನಲು ಅವಕಾಶ
ಹೋಟೆಲ್ ರೆಸ್ಟೊರೆಂಟ್‌ಗಳಲ್ಲಿ ಸಂಜೆ 5ರವರೆಗೂ ತೆರೆದಿರಲು ಅನುಮತಿ ನೀಡಲಾಗಿದೆ. ಈ ಬಾರಿ ಹೋಟೆಲ್‌ನಲ್ಲಿ ಕುಳಿತು ತಿನ್ನಲು ಅವಕಾಶ ನೀಡಲಾಗಿದೆ. ಆದರೆ ಎಸಿ ಚಾಲನೆ ಮಾಡದೇ ಹೋಟೆಲ್‌ಗಳನ್ನು ತೆರೆಯಬೇಕು ಎಂದು ಸೂಚಿಸಲಾಗಿದೆ. ಶೇ 50 ಸಾಮರ್ಥ್ಯದೊಂದಿಗೆ ಎಸಿ ಹಾಕದೇ ಹೋಟೆಲ್, ಕ್ಲಬ್ಸ್, ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5 ಗಂಟೆವರೆಗೆ ಅನುಮತಿ ನೀಡಲಾಗಿದೆ.
ಲಾಡ್ಜ್ ಗಳಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ.
ವೀಕೆಂಡ್, ನೈಟ್ ಕರ್ಫ್ಯೂ ಮುಂದುವರಿಕೆ
ರಾಜ್ಯದಲ್ಲಿ ಎಲ್ಲಾ ಕಡೆ ವೀಕೆಂಡ್, ನೈಟ್ ಕರ್ಫ್ಯೂ ಎಂದಿನಂತೆ ಮುಂದುವರೆಯುವುದು. ಸಂಜೆ 7ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಮುಂದುವರೆಸಲಾಗುವುದು ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 5ರವರೆಗೂ ವೀಕೆಂಡ್ ಕರ್ಫ್ಯೂ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.

ಸರ್ಕಾರಿ, ಖಾಸಗಿ ಕಚೇರಿಗಳಿಗೆ ಅವಕಾಶ
ಸರ್ಕಾರಿ, ಖಾಸಗಿ ಕಚೇರಿಗಳಿಗೆ ಶೇ 50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ.

ದೇವಸ್ಥಾನಗಳಿಗೆ ಅವಕಾಶ ಇಲ್ಲ
ಜುಲೈ 5ರವರೆಗೂ ದೇವಸ್ಥಾನಗಳಿಗೆ ನಿರ್ಬಂಧವನ್ನು ಮುಂದುವರೆಸಲಾಗಿದೆ. ಪ್ರಾರ್ಥನೆಗಳು, ದೇವಸ್ಥಾನಗಳಿಗೆ ಭಕ್ತ ನಿರ್ಬಂಧವನ್ನು ಮುಂದುವರೆಸಲಾಗಿದೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ

ಹೊರಾಂಗಣ ಕ್ರೀಡೆ, ಜಿಮ್‌ಗಳಿಗೆ ಅವಕಾಶ
ಹೊರಾಂಗಣ ಕ್ರೀಡೆಗಳಿಗೆ, ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ. ಜಿಮ್‌ಗಳಲ್ಲಿ ಶೇ 50ರಷ್ಟು ಸಾಮರ್ಥ್ಯದೊಂದಿಗೆ (ಎಸಿ ಇಲ್ಲದೇ ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗಿದೆ.

ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ
ಅನ್‌ಲಾಕ್ 2.0ರಲ್ಲಿ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಧಾರಾವಾಹಿ, ಸಿನಿಮಾ ಚಿತ್ರೀಕರಣ ನಡೆಸಲು ಅನುಮತಿ ನೀಡಲಾಗಿದೆ.












Click it and Unblock the Notifications