2023ರಲ್ಲಿ ಬಿಜೆಪಿ ಗೆಲುವಿಗಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ ಸಿಎಂ ಬೊಮ್ಮಾಯಿ
ವಿಜಯನಗರ, ಏಪ್ರಿಲ್ 16: ಕರ್ನಾಟಕದಲ್ಲಿ ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಅವರು, ಒಗ್ಗಟ್ಟಿನ ಮಂತ್ರ ಜಪಿಸಿದರು. ಒಗ್ಗಟ್ಟಿನಿಂದ ಶ್ರಮಿಸಿ, ವಿಜಯಯಾತ್ರೆ ಕೈಗೊಳ್ಳೋಣ. ಇದು ಕರ್ನಾಟಕದ ಬಡವರ ವಿಜಯವಾಗುತ್ತದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣವಾಗುತ್ತದೆ ಎಂದರು.
ನಮ್ಮ ನಾಯಕರಾದ ನರೇಂದ್ರ ಮೋದಿ, ಅಮಿತ್ ಷಾ, ಜೆ.ಪಿ. ನಡ್ಡಾ ಅವರ ಕೈಯನ್ನು ಎಲ್ಲಾ ದೃಷ್ಟಿಯಿಂದಲೂ ಬಲಪಡಿಸಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರ್ನಾಟಕದಿಂದ ಒಂದು ಟ್ರಿಲಿಯನ್ ಡಾಲರ್ ಕೊಡುಗೆಯನ್ನು ನೀಡುವಂತೆ ಮಾಡೋಣ. ದಾರಿ ತಪ್ಪಿಸುವ ವಿರೋಧ ಪಕ್ಷಕ್ಕೆ ಸೊಪ್ಪು ಹಾಕದೆ, ಸ್ಪಷ್ಟವಾಗಿರುವ ನಮ್ಮ ಗುರಿ, ದಾರಿ ಸಂಕಲ್ಪ ಮತ್ತು ಬಲಿಷ್ಠವಾದ ಸಂಘಟನೆ ಮೇಲೆ ವಿಶ್ವಾಸವಿಟ್ಟು ಮುನ್ನಡೆಯೋಣ. ವಿಜಯ ಪತಾಕೆ ಹಾರಿಸಿಸೋಣ ಎಂದು ಕರೆ ನೀಡಿದರು.

ಕಾಂಗ್ರೆಸ್ ನಾಯಕರ ಹಗರಣಗಳು ಜೀವಂತ:
2023ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುತ್ತದೆ. ಜನರ ಮುಂದೆ ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ. ಅವರ ಕಾಲದ ಹಗರಣಗಳು ಇನ್ನೂ ಜೀವಂತವಾಗಿವೆ. ಯಾವ ಇಲಾಖೆಯಲ್ಲಿ ನೋಡಿದರೂ ಅಲ್ಲಿ ಹಗರಣ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಬಗ್ಗೆ ಮಾತಾಡುತ್ತಾರೆ. ಅಲ್ಲಿ ಅವರು ಮಾಡಿದ ಹಗರಣಗಳು ಕಡಿಮೆ ಇವೆಯೇ. ದಿಂಬು ಹಾಸಿಗೆಯನ್ನೂ ಬಿಡಲಿಲ್ಲ. ಅವರ ಕಾಲದಲ್ಲಿ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ಇರಲಿಲ್ಲ. ಸ್ಟೀಲ್ ಸೇತುವೆಯನ್ನು ನಿರ್ಮಿಸಲು ಹೊರಟರು. ಎಲ್ಲಾ ವ್ಯವಹಾರಗಳನ್ನು ಮಾಡಿ, ಅದು ಬಹಿರಂಗವಾದಾಗ ಅದನ್ನು ಕೈಬಿಡುವ ನಾಟಕ ಮಾಡಿದರು ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಸತ್ಯ ಎದುರಿಸಲು ಸಿದ್ಧರಾಗುವಂತೆ ವಿಪಕ್ಷಗಳಿಗೆ ಸೂಚನೆ
ವಿರೋಧ ಪಕ್ಷದ ಸತ್ಯ ಹರಿಶ್ಚಂದ್ರನ ದಾಖಲೆಗಳನ್ನು ಜನರ ಮುಂದಿಡಬೇಕಾಗುತ್ತದೆ. ನಾವು ಇದನ್ನು ನೈತಿಕತೆಯಿಂದ ಜನರ ಮುಂದೆ ತೆಗೆದುಕೊಂಡು ಹೋಗಬೇಕು. ಬಹಳ ಶುದ್ಧಹಸ್ತರು ಎಂಬಂತೆ ಮಾತನಾಡುತ್ತಿದ್ದಾರೆ. ಇದನ್ನು ಧೈರ್ಯವಾಗಿ ಎದುರಿಸಿ. ಜನರ ಬಳಿ ಸತ್ಯವನ್ನು ಹೇಳಬೇಕಾಗುತ್ತದೆ. ಎಲ್ಲಾ ಪ್ರಕರಣಗಳಲ್ಲಿ ಸತ್ಯ ಹೊರಗೆ ಬರಲಿದೆ. ವಿರೋಧ ಪಕ್ಷದವರು ಸತ್ಯವನ್ನು ಎದುರಿಸುವ ಕಾಲ ಬರುತ್ತದೆ, ಸಿದ್ಧರಾಗಿರಿ ಎಂದು ವಿರೋಧ ಪಕ್ಷದವರಿಗೆ ಹೇಳಿದ್ದೇನೆ. ಸತ್ಯದ ವಿಚಾರವನ್ನು ಕನ್ನಡಿಯಂತೆ ಇಟ್ಟಾಗ ನಿಮ್ಮ ಮುಖವಾಡ ಕರ್ನಾಟಕದ ಜನರ ಎದುರಿಗೆ ಕಳಚಿ ಬೀಳಲಿದೆ. ಅವರ ಕಪಾಟಿನಲ್ಲಿ ಭ್ರಷ್ಟಾಚಾರದ ಅಸ್ಥಿ ಪಂಜರಗಳಿವೆ ಎಂದರು.

ವಿಧಾನಸಭೆ ಚುನಾವಣೆಗೆ ಅಭಿವೃದ್ಧಿಯ ಅಜೆಂಡಾ:
2023ರ ವಿಧಾನಸಭೆ ಚುನಾವಣೆಯಲ್ಲಿ ನಾವು ಅಭಿವೃದ್ಧಿಯ ಅಜೆಂಡಾ ಮುಂದಿಟ್ಟುಕೊಂಡು ಹೋಗುತ್ತೇವೆ. ಪ್ರತಿ ಗ್ರಾಮ, ಬಡವರು, ದೀನದಲಿತರಿಗೆ ಮಾಡಿರುವ ಕಾರ್ಯಕ್ರಮ, ಮಹಿಳೆಯರು, ಯುವಕರಿಗೆ ನೀಡಿರುವ ಬೆಂಬಲವನ್ನು ತೆಗೆದುಕೊಂಡು ಜನರ ಮುಂದೆ ಹೋಗುತ್ತೇವೆ. ನಾವು ಮಾಡಿರುವ ಕೆಲಸಗಳು ಮಾಡುತ್ತಿರುವ ಕಾರ್ಯಕ್ರಮಗಳು, ಸಾರ್ವಜನಿಕ ಜೀವನದಲ್ಲಿ ಬಿಜೆಪಿ ನಡೆದುಕೊಂಡ ರೀತಿಯೇ ನಮ್ಮ ಶಕ್ತಿ. ಬಿಜೆಪಿಯು ಸಕಾರಾತ್ಮಕ ರಾಜಕಾರಣವನ್ನು ಮಾಡುತ್ತದೆ. ಸಕಾರಾತ್ಮಕ ಆಡಳಿತವನ್ನು ಬಿಜೆಪಿ ಸರ್ಕಾರ ಕೊಡುತ್ತಿದೆ. ಇವೆಲ್ಲವನ್ನು ಜನರ ಮುಂದಿಟ್ಟು, ಜನರ ವಿಶ್ವಾಸವನ್ನು ಪಡೆದು ಪುನ: ಕರ್ನಾಟಕದಲ್ಲಿ ಕಮಲವನ್ನು ಅರಳಿಸಿ ವಿಧಾನಸೌಧದ 3ನೇ ಮಹಡಿಯಲ್ಲಿ ಬಿಜೆಪಿಯ ಸರ್ಕಾರ ಸ್ಥಾಪನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ತತ್ವಸಿದ್ಧಾಂತಗಳ ಮೇಲೆ ಬಿಜೆಪಿ ರಾಜಕಾರಣ:
ಬಿಜೆಪಿಯು ದೇಶದಲ್ಲಿ ಜನಮಾಸನಗಳಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿರುವ ರಾಜಕೀಯ ಪಕ್ಷವಾಗಿದೆ. ಇದರ ವಿಚಾರಧಾರೆಗಳು ಜನರಿಗೆ ಮನಮುಟ್ಟುವ ರೀತಿಯಲ್ಲಿ ನಮ್ಮ ಕಾರ್ಯಕರ್ತರು ಮುಟ್ಟಿಸಿದ್ದಾರೆ. ಪ್ರಾರಂಭದಲ್ಲಿ ಬಿಜೆಪಿಯ ಬಗ್ಗೆ ಪ್ರಚಾರಕ್ಕಿಂತ ಅಪಪ್ರಚಾರ ಹೆಚ್ಚಾಗಿತ್ತು. ಕ್ರಮೇಣ ಆಡಳಿತದಲ್ಲಿರುವ ಪಕ್ಷಗಳ ಆಶ್ವಾಸನೆಗಳು, ಜನರನ್ನು ಮತಬ್ಯಾಂಕ್ ಗಳನ್ನಾಗಿ ಮಾಡುವ ರಾಜಕಾರಣ, ಸಮಾಜ ಒಡೆಯುವ ರಾಜಕಾರಣ, ದೇಶವನ್ನು ಶಿಥಿಲಗೊಳಿಸುವ ರಾಜಕಾರಣ, ಭಾರತದ ಉದ್ದಗಲಕ್ಕೂ ಗೊತ್ತಾಗಿದೆ. ಇನ್ನಾದರೂ ಈ ದೇಶವನ್ನು ಜನರನ್ನು ರಕ್ಷಣೆ ಮಾಡಲು ಸುಬಭದ್ರವಾದ ಪ್ರಜಾಪ್ರಭುತ್ವದ ವ್ಯವಸ್ಥೆ ನೆಲೆಗೊಳ್ಳಲು, ತತ್ವಸಿದ್ಧಾಂತಗಳ ಮೇಲೆ ರಾಜಕಾರಣವಾಗಬೇಕಾದರೆ, ದೀನದಲಿತರ ಉದ್ದಾರವಾಗಬೇಕಾದರೆ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಮನದಟ್ಟಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.












Click it and Unblock the Notifications