HD Kumaraswamy: ಅಮೆರಿಕಾ ಮಧ್ಯಪ್ರವೇಶದಿಂದ "ಕದನ ವಿರಾಮ" ಎನ್ನುವುದು ತಪ್ಪು: ಎಚ್.ಡಿ ಕುಮಾರಸ್ವಾಮಿ
ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಸದ್ಯ ನಿಂತಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ ಉದ್ವಿಗ್ನತೆ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಕದನ ವಿರಾಮ ಘೋಷಣೆಯಾಗಿದೆ. ಆದರೆ, ಈ ಕದನ ವಿರಾಮದ ಕ್ರೆಡಿಟ್ ಅನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಂಡಿರುವುದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಇದೇ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ರಿಯಾಕ್ಟ್ ಮಾಡಿದ್ದಾರೆ. ಕೇಂದ್ರ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆ ಬಿಜೆಪಿ ನಾಯಕರಿಗೂ ಅಚ್ಚರಿ ಮೂಡಿಸಿದೆ. ಇಷ್ಟಕ್ಕೂ ಈ ವಿಚಾರವಾಗಿ ಎಚ್.ಡಿ ಕುಮಾರಸ್ವಾಮಿ ಅವರು ಏನಂತ ರಿಯಾಕ್ಟ್ ಮಾಡಿದ್ದಾರೆ ಎನ್ನುವ ವಿವರ ಇಲ್ಲಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ ಉದ್ವಿಗ್ನತೆ ಇದೀಗ ಬಹುತೇಕ ತಣ್ಣಗಾಗಿದೆ. ಆದರೆ, ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ಕದನ ವಿರಾಮ ಘೋಷಿಸಿಕೊಂಡ ಮೇಲೆ ಭಾರತದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ರಾಜಕೀಯ ವಾಕ್ಸಮರ ಜೋರಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಮಾಡಿರುವ ಭಾಷಣವು ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾನು ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳಿಗೂ ಕದನ ವಿರಾಮ ಘೋಷಣೆ ಮಾಡುವಂತೆ ಹೇಳಿದ್ದೆ. ಒಂದೊಮ್ಮೆ ನೀವಿಬ್ಬರೂ ಕದನ ವಿರಾಮವನ್ನು ಘೋಷಣೆ ಮಾಡದಿದ್ದರೆ ನಿಮ್ಮೊಂದಿಗೆ ವ್ಯಾಪಾರವನ್ನು ನಿಲ್ಲಿಸಲಿದ್ದೇವೆ ಎಂದು ಟ್ರಂಪ್ ಹೇಳಿರುವುದು ಭಾರತೀಯ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ. ಇದೀಗ ಈ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಈ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಗೆ ಅಮೆರಿಕಾ ಮಧ್ಯಸ್ಥಿಕೆಯಿಂದಲೇ ನಡೆಯಿತು ಎನ್ನುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಸೇನಾಪಡೆ ಶಕ್ತಿಯ ಮುಂದೆ ಪಾಕಿಸ್ತಾನವು ಮಂಡಿಯೂರಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ್ದ ದಾಳಿಯು ಅತ್ಯಂತ ಕ್ರೂರವಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದಲ್ಲಿ ಉಗ್ರರ ಅಡಗುತಾಣಗಳನ್ನು ಹೊಡೆದುರುಳಿಸಿದೆ.
ಪಾಕಿಸ್ತಾನವು ಕಳೆದ ಹಲವು ದಶಕಗಳಿಂದಲೂ ಉಗ್ರರನ್ನು ಪೋಷಣೆ ಮಾಡಿಕೊಂಡು ಬರುತ್ತಿದೆ. ಭಾರತದ ಮೇಲೆಯೂ ದಾಳಿ ಮಾಡಿದೆ. ಈ ರೀತಿ ಪಾಕ್ ಬಂದಾಗಲೆಲ್ಲವೂ ಭಾರತವು ಸರಿಯಾಗಿ ತಿರುಗೇಟು ನೀಡಿದೆ. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಚಾರದಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನವು ಪ್ರಧಾನಿ ನರೇಂದ್ರ ಮೋದಿ ಅವರ ಧೃಢ ನಾಯಕತ್ವ ಹಾಗೂ ಭಾರತೀಯ ಸೇನೆಯ ಶಕ್ತಿಯ ಮುಂದೆ ಸೋತಿದೆ. ಭಾರತವು ಈ ವಿಚಾರದಲ್ಲಿ ಎಲ್ಲಾ ಕಡೆಗಳಿಂದಲೂ ವಿಜಯ ಸಾಧಿಸಿದೆ. ಪಾಕಿಸ್ತಾನಕ್ಕೆ ಪ್ರತಿ ಹಂತದಲ್ಲೂ ನಡುಕವನ್ನುಂಟು ಮಾಡಿದೆ. ಹೀಗಾಗಿ, ಅಮೆರಿಕದ ಮಧ್ಯಪ್ರವೇಶದಿಂದ ಕದನ ವಿರಾಮ ಅಂತ ಹೇಳುವುದು ಸರಿಯಲ್ಲ. ಭಾರತವು ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ಮಾಡುವುದನ್ನು ಎಂದೂ ಒಪ್ಪಿಲ್ಲ. ಅದಕ್ಕೆ ನಾವು ಅವಕಾಶವನ್ನು ಮಾಡಿಕೊಟ್ಟಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications