ಸಾಮಾಜಿಕ ಭದ್ರತಾ ಪಿಂಚಣಿಗಳು: ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ
ಬೆಂಗಳೂರು, ಮೇ 19: ರಾಜ್ಯ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿಗಳು (ದಿಶಾ) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 'ಕೇಂದ್ರ ಸರ್ಕಾರದಿಂದ ಬರಬೇಕಾದ ಪಿಂಚಣಿ ಹಣ ಕಳೆದ ಎರಡು ವರ್ಷಗಳಿಂದ ಬಂದಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯಕ್ಕೆ ಬರಬೇಕಾದ ಕೇಂದ್ರದ ಪಾಲಿನ ಅನುದಾನ ರೂ. 4,195 ಕೋಟಿ ಅನುದಾನವೂ ಬಂದಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಕಾಲದಲ್ಲಿ ಹಣ ಬಿಡುಗಡೆ ಆಗದಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹೇಗೆ?' ಎಂದು ಪ್ರಶ್ನೆ ಮಾಡಿದ್ದರು.
ಡೆಕ್ಕನ್ ಹೆರಾಲ್ಡ್ ಈ ಕುರಿತು ವರದಿಯೊಂದನ್ನು ಮಾಡಿದೆ. ಈ ವರದಿ ಕರ್ನಾಟಕವು ಕಳೆದ ಎರಡು ಹಣಕಾಸು ವರ್ಷದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ನೀಡಲು ರೂ. 11,831 ಕೋಟಿ ಖರ್ಚು ಮಾಡಿದೆ, ಆದರೆ ಕೇಂದ್ರ ಸರ್ಕಾರ ಇದರಲ್ಲಿ ಕೇವಲ 4 ಶೇಕಡಾ ಮಾತ್ರ ನೀಡಿದ್ದು, ರಾಜ್ಯ ಸರ್ಕಾರವೇ ಹೆಚ್ಚಿನ ಹೊಣೆ ಹೊತ್ತಿದೆ, ಇದು ರಾಜ್ಯದ ಬೊಕ್ಕಸಕ್ಕೆ ಕೂಡಾ ಹೊರೆಯಾಗುತ್ತಿದೆ ಎಂದು ಹೇಳಿದೆ.

2012ರ ಬಳಿಕ ಕೇಂದ್ರ ಸರ್ಕಾರ ಪರಿಷ್ಕರಣೆಯನ್ನೂ ಮಾಡದ ಕಾರಣ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ಪಿಂಚಣಿ ಯೋಜನೆಯಡಿ ತಿಂಗಳಿಗೆ ರೂ. 200-500 ಪಾವತಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರ ಇದನ್ನು ಪರಿಷ್ಕರಣೆ ಮಾಡಿದೆ. ರಾಜ್ಯ ಸರ್ಕಾರ ಈ ಮೂರು ಯೋಜನೆಯಡಿ ರೂ. 400-2000 ಪಾವತಿ ಮಾಡುತ್ತಿದೆ.
2023-24ರಲ್ಲಿ ಮತ್ತು 2024-25ರಲ್ಲಿ ಕೇಂದ್ರ ಸರ್ಕಾರ ಕೇವಲ ರೂ. 564.44 ಕೋಟಿ ರೂ.ಗಳನ್ನು ಕರ್ನಾಟಕಕ್ಕೆ ಪಿಂಚಣಿ ಯೋಜನೆಗಳಿಗಾಗಿ ನೀಡಿದೆ. ದಿಶಾ ಸಭೆಯಲ್ಲಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದರು.
ಪ್ರಸ್ತುತ ದಿನಗಳಲ್ಲಿ ಕೇಂದ್ರ ಸರ್ಕಾರ ಪಿಂಚಣಿಯಾಗಿ ಹೇಗೆ ಕೇವಲ ರೂ. 200 ನೀಡಲು ಸಾಧ್ಯ?. ರಾಜ್ಯ ಸರ್ಕಾರ ಪಿಂಚಣಿ ಪರಿಷ್ಕರಣೆ ಮಾಡಿದರೂ ಸಹ ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಿಲ್ಲ ಎಂದು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಹೇಳಿದ್ದಾರೆ. ರಾಜ್ಯ ಸರ್ಕಾರ ಮಾನದಂಡಗಳನ್ನು ಸರಳೀಕರಣಗೊಳಿಸುವ ಮೂಲಕ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಉದಾಹರಣೆಗೆ ಕೇಂದ್ರದ ಮಾನದಂಡಗಳ ಅನ್ವಯ ವ್ಯಕ್ತಿಯ ಅಂಗವಿಕಲತೆ 75 ಶೇಕಡಾ ಅಥವಾ ಹೆಚ್ಚು ಇರಬೇಕು ಎಂದು ಹೇಳುತ್ತದೆ. ಆದರೆ ರಾಜ್ಯ ಸರ್ಕಾರವು ಅಂಗವಿಕಲತೆ ಮಿತಿಯನ್ನು 40 ಶೇಕಡಾ ಮತ್ತು ಅದಕ್ಕಿಂತ ಹೆಚ್ಚು ಎಂದು ಇಳಿಕೆ ಮಾಡಿದೆ. ರಾಜ್ಯದಲ್ಲಿ ಕೇಂದ್ರದ ಪಿಂಚಣಿ ಯೋಜನೆಗಳು 14.14 ಲಕ್ಷ ಫಲಾನುಭವಿಗಳನ್ನು ಹೊಂದಿದೆ. ರಾಜ್ಯದ ಎಲ್ಲಾ ಪಿಂಚಣಿ ಯೋಜನೆಗಳ ಅಡಿಯಲ್ಲಿ ಒಟ್ಟು ಫಲಾನುಭವಿಗಳ ಸಂಖ್ಯೆ ಸಂಖ್ಯೆ 82.57 ಲಕ್ಷ ಆಗಿದೆ.
2014 ರಿಂದ 2024ರ ತನಕ ಕೇಂದ್ರ ಸರ್ಕಾರ ತನ್ನ ವಿವಿಧ ಪಿಂಚಣಿ ಯೋಜನೆಗಳ ಪಾಲನ್ನು ನೀಡಿಲ್ಲ. ಇದರಿಂದಾಗಿ ಕರ್ನಾಟಕ 25,926.93 ಕೋಟಿ ರೂ. ಕೊರತೆಯನ್ನು ಎದುರಿಸಿದೆ. ಕೇಂದ್ರ ಸರ್ಕಾರ ಕೇವಲ ಎರಡು ವರ್ಷ 2019-20 ಮತ್ತು 2023-24ರಲ್ಲಿ ಮಾತ್ರ ತಾನು ನೀಡಬೇಕಾದ ಅನುದಾನಕ್ಕಿಂತ ಹೆಚ್ಚಿನ ಪಾಲನ್ನು ನೀಡಿದೆ.
ಜಲ ಜೀವನ್ ಮಿಷನ್ (ಜೆಜೆಎಂ) ಅಡಿ ನಾವು ಹಣಕಾಸಿನ ಕೊರತೆ ಪೂರೈಸಲು ಮುಂದಾಗಿದ್ದೇವೆ. 2023-24 ಮತ್ತು 2024-25ರಲ್ಲಿ ಕೇಂದ್ರ ಸರ್ಕಾರವು ತನ್ನ ಹಂಚಿಕೆಯಡಿ ಕರ್ನಾಟಕಕ್ಕೆ ಜೆಜೆಎಂನಿಂದ ರೂ 10,890.48 ಕೋಟಿ ಪಾವತಿಸಿಲ್ಲ ಎಂದು ಅತೀಕ್ ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ, ದಿಶಾ ಸಮಿತಿ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಸಿದ್ದರಾಮಯ್ಯನವರು ಹೊಸಬನಂತೆ ವರ್ತಿಸಬಾರದು ಮತ್ತು ಕೇಂದ್ರವನ್ನು ದೋಷಿಸಬೇಡಿ ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ತನ್ನ ವ್ಯವಸ್ಥೆಯನ್ನು ಸರಿಪಡಿಸಬೇಕು. ನಿಧಿಯ ಹಣಗಳ ಬಳಕೆ ವಿಚಾರದಲ್ಲಿ ದೂರುಗಳಿವೆ. ಕಾಂಗ್ರೆಸ್ ಶಾಸಕರು ಕೂಡ ಅಭಿವೃದ್ಧಿ ನಿಧಿಗಳನ್ನು ಪಡೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಕೇಂದ್ರವನ್ನು ದೂರುವುದಕ್ಕೆ ಮುಂಚೆ, ರಾಜ್ಯವು ಬಳಕೆ ಪ್ರಮಾಣ ಪತ್ರಗಳನ್ನು ಒದಗಿಸಬೇಕು ಎಂಬುದನ್ನು ಖಚಿತಪಡಿಸಬೇಕು. ನಾನು ಕೇಂದ್ರ ಹಣಕಾಸು ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಲೆಹರ್ ಸಿಂಗ್ ಹೇಳಿದ್ದಾರೆ.












Click it and Unblock the Notifications