Union Budget 2026: 'ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಎನ್‌ಡಿಎ ಸರ್ಕಾರದ ಭರ್ಜರಿ ಕೊಡುಗೆ'
ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026 ರ ಕೇಂದ್ರ ಬಜೆಟ್ ಮಂಡಿಸಿದ್ದು, ಎನ್‌ಡಿಎ ಸರ್ಕಾರದ ಬಜೆಟ್ ಕುರಿತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಿಖಿಲ್ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದು, ತೊಗರಿ ಕಣಜದ ರೈತರಿಗೆ 'ಪಲ್ಸಸ್ ಮಿಷನ್' ಮೂಲಕ ಎಂಎಸ್‌ಪಿ (MSP) ಖಾತರಿ ಮತ್ತು ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್‌ನಿಂದ ಈ ಭಾಗದ ಚಿತ್ರಣವೇ ಬದಲಾಗಲಿದೆ. ನವ ಭಾರತದ ನಿರ್ಮಾಣದಲ್ಲಿ ಕಲ್ಯಾಣ ಕರ್ನಾಟಕದ ಪಾಲು ದೊಡ್ಡದು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಎನ್‌ಡಿಎ ಸರ್ಕಾರದ ಭರ್ಜರಿ ಕೊಡುಗೆ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್‌ಗೆ ಟಿ.ಎ. ಶರವಣ ಮೆಚ್ಚುಗೆ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026ರ ಸಾಲಿನ ಬಜೆಟ್, 'ವಿಕಸಿತ ಭಾರತ'ದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಬಣ್ಣಿಸಿದ್ದಾರೆ.
ಈ ಬಜೆಟ್ ಅನ್ನು ಪ್ರಗತಿಪರ, ಅಭಿವೃದ್ಧಿಪರ ಮತ್ತು ದೂರದೃಷ್ಟಿಯ ಆಯವ್ಯಯ ಎಂದು ವಿಶ್ಲೇಷಿಸಿರುವ ಅವರು, "ಇದೊಂದು ಕೇವಲ ಅಂಕಿ-ಅಂಶಗಳ ಲೆಕ್ಕಾಚಾರವಲ್ಲ, ಬದಲಿಗೆ ಆಧುನಿಕ ತಂತ್ರಜ್ಞಾನ ಮತ್ತು ನವಭಾರತದ ಕನಸುಗಳನ್ನು ಬೆಸೆಯುವ ಸಮಗ್ರ ನೀಲನಕ್ಷೆ," ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕ ಶಿಸ್ತಿಗೆ ಮಾದರಿ
12.2 ಲಕ್ಷ ಕೋಟಿ ರೂ.ಗಳ ಬೃಹತ್ ಬಂಡವಾಳ ವೆಚ್ಚದ ಗುರಿ ಹೊಂದಿದ್ದರೂ, ವಿತ್ತೀಯ ಕೊರತೆಯನ್ನು ಕೇವಲ ಶೇ. 4.3ಕ್ಕೆ ಸೀಮಿತಗೊಳಿಸಿರುವುದು ಮತ್ತು ಶೇ. 7.4ರಷ್ಟು ಜಿಡಿಪಿ ಪ್ರಗತಿಯ ಗುರಿ ಹೊಂದಿರುವುದು ಭಾರತದ ಆರ್ಥಿಕತೆಯ ಸುಭದ್ರತೆಯನ್ನು ತೋರಿಸುತ್ತದೆ ಎಂದು ಶರವಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಧಾರಣಾ ಎಕ್ಸ್‌ಪ್ರೆಸ್
ಪ್ರಸಕ್ತ ಬಜೆಟ್ ಅನ್ನು 'ಸುಧಾರಣಾ ಎಕ್ಸ್‌ಪ್ರೆಸ್' ಎಂದು ಕರೆದಿರುವ ಅವರು, ಕರ್ನಾಟಕಕ್ಕೆ ಸಿಕ್ಕಿರುವ ಕೊಡುಗೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. "ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ನಡುವೆ ಸಂಪರ್ಕ ಕಲ್ಪಿಸುವ 2 ಹೊಸ ರೈಲುಗಳನ್ನು ಘೋಷಿಸಿರುವುದು ಸ್ವಾಗತಾರ್ಹ. ಇದರೊಂದಿಗೆ ವೈದ್ಯಕೀಯ ಪ್ರವಾಸೋದ್ಯಮಕ್ಕೆ ನೀಡಿರುವ ಆದ್ಯತೆ ಹಾಗೂ ಶಿಕ್ಷಣದಿಂದ ಉದ್ಯಮಶೀಲತೆಯತ್ತ ಯುವಜನರನ್ನು ಕೊಂಡೊಯ್ಯುವ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಸಣ್ಣ ಕೈಗಾರಿಕೆಗಳು (MSME), ಸೆಮಿಕಂಡಕ್ಟರ್ ವಲಯ ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಮನ್ನಣೆ ನೀಡುವ ಮೂಲಕ 'ಸ್ವಾವಲಂಬಿ ಭಾರತ' ನಿರ್ಮಾಣಕ್ಕೆ ಈ ಬಜೆಟ್ ಭದ್ರ ಬುನಾದಿ ಹಾಕಿದೆ ಎಂದು ಟಿ.ಎ. ಶರವಣ ಅವರು ಪ್ರಶಂಸಿಸಿದ್ದಾರೆ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications