ವಿಧಾನಪರಿಷತ್ಗೆ ಮೂವರ ಹೆಸರು ಅಂತಿಮ! ವಿರೋಧದ ನಡುವೆ ಸೀತಾರಾಮ್ ಮಣೆ ಹಾಕಿದ ಹೈಕಮಾಂಡ್!
ಬೆಂಗಳೂರು, ಆಗಸ್ಟ್ 16: ತೆರವಾಗಿರುವ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಸುಧಾಮ್ ದಾಸ್ ಅವರಲ್ಲದೆ ಮಾಜಿ ಸಚಿವರಾದ ಉಮಾಶ್ರೀ ಮತ್ತು ಎಂ.ಆರ್.ಸೀತಾರಾಮ್ ಅವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.
ವಿಧಾನಪರಿಷತ್ಗೆ ನಟಿ, ಮಾಜಿ ಸಚಿವೆ ಉಮಾಶ್ರೀ ಎಂಆರ್ ಸೀತಾರಾಮ್ ಹಾಗೂ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಅವರ ಹೆಸರನ್ನೂ ಅಂತಿಮಗೊಳಿಸಿ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ. ಇನ್ನೂ ನಾಮನಿರ್ದೇಶನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲ ಥಾವರ್ ಚಂದ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು ಎಂದು ತಿಳಿದು ಬಂದಿದೆ.

ಈಗಾಗಲೇ ಕಾಂಗ್ರೆಸ್ ಪಾಳಯದಲ್ಲೆ ಕೆಲವು ನಾಯಕರ ವಿರೋಧದ ನಡುವೆಯೂ ಎಂಆರ್ ಸೀತಾರಾಮ್ ಹಾಗೂ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಅವರ ಹೆಸರನ್ನೂ ಅಂತಿಮಗೊಳಿಸಿದ್ದಾರೆ. ಅಲ್ಲದೇ ಕಲಾವಿದರ ಕೋಟಾದಡಿ ಮಾಜಿ ಸಚಿವೆ, ನಟಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ.ಆರ್.ಸೀತಾರಾಮ್ ಹಾಗೂ ಸಮಾಜಸೇವೆ ಹೆಸರಲ್ಲಿ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಅವರಿಗೆ ಸ್ಥಾನ ನೀಡಲಾಗಿದೆ.
ಕಲಾವಿದರ ಕೋಟಾದಡಿ ಮಾಜಿ ಸಚಿವೆ, ನಟಿ ಉಮಾಶ್ರೀ ಅವರಿಗೆ ನೀಡಿರುವುದನ್ನ ಹೊರತು ಪಡಿಸಿ, ಸೀತಾರಾಮ್, ಸುಧಾಮ್ ದಾಸ್ ಹೆಸರಿಗೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಸೀತಾರಾಮ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆಯಲ್ಲಿದೆ. ಅಲ್ಲದೇ ಐದು ತಿಂಗಳ ಹಿಂದಷ್ಟೇಕಾಂಗ್ರೆಸ್ ಪಕ್ಷಕ್ಕೆ ಸುಧಾಮ್ ದಾಸ್ ಅವರು ಸೇರ್ಪಡೆಯಾಗಿದ್ದು, ಈ ಇಬ್ಬರನ್ನ ಮೇಲ್ಮನೆಗೆ ಕಳಿಸುವ ಕುರಿತು ಹಿರಿಯ ಸಚಿವರಾದ ಡಾ.ಜಿ.ಪರಮೇಶ್ವರ್, ಹೆಚ್ಸಿ ಮಹದೇವಪ್ಪ, ಕೆಹೆಚ್ ಮುನಿಯಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಸೀತಾರಾಮ್, ಸುಧಾಮ್ ದಾಸ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿರುವ ಹಿನ್ನಲೆ ಪಕ್ಷದ ಕಾರ್ಯಕರ್ತರು ಹಾಗೂ ಹಿರಿಯ ಸಚಿವರು ಸಾಕಷ್ಟು ವಿರೋಧವನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೀತಾರಾಮ್ ಬದಲಿಗೆ ಮನೋಹರ್ ಅವರಿಗೆ ಪರಿಷತ್ ಸ್ಥಾನ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿದ್ದು, ಈ ಕುರಿತು ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಭುಗಿಲೆದಿದ್ದು, ಅಸಮಾಧಾನ ಶಮನಕ್ಕೆ ಕೈ ನಾಯಕರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications