Flight-Drone: ವಿಮಾನ- ಡ್ರೋನ್ ಸಂಬಂಧಿತ ತಯಾರಿಕಾ ಘಟಕ ಸ್ಥಾಪನೆಗೆ UK ಕಂಪನಿ ಒಲವು: ಎಂಬಿ ಪಾಟೀಲ
ಲಂಡನ್/ಬೆಂಗಳೂರು, ನವೆಂಬರ್ 26: ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಸೆಳೆಯುವ ಉದ್ದೇಶದಿಂದ ಮೂರು ದಿನಗಳ ಇಂಗ್ಲೆಂಡ್ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಅವರು ಗ್ರೀನ್-ಜೆಟ್ಸ್, ನಥಿಂಗ್, ಫಿಡೋ ಎಐ, ರೋಡ್ಸ್ ಗ್ರೂಪ್, ಎಂಬಿಡಿಎ ಮುಂತಾದ ದಿಗ್ಗಜ ಕಂಪನಿಗಳೊಂದಿಗೆ ಮಾತುಕತೆ ನಡೆಸಿದರು. ಡ್ರೋನ್, ವಿಮಾನಗಳಿಗೆ ಬೇಕಾದವುಗಳ ತಯಾರಿಕೆ ಘಟಕ ಇಲ್ಲಿ ತೆರೆಯಲು ಕಂಪನಿಗಳು ಒಲವು ವ್ಯಕ್ತಪಡಿಸಿವೆ ಎಂದು ಅವರು ಮಾಹಿತಿ ನೀಡಿದರು.
ಇಂಗ್ಲೇಂಡ್‌ನಲ್ಲಿನ ಫೋರ್ ಸೀಸನ್ ಹೋಟೆಲಿನಲ್ಲಿ ಎರಡನೇ ದಿನ ಮಂಗಳವಾರ ಸಚಿವರು ಮಾತುಕತೆ ನಡೆಸಿದರು. ಡ್ರೋನ್ ಮತ್ತು ಮುಂದಿನ ತಲೆಮಾರಿನ ವಿಮಾನಗಳಿಗೆ ಬೇಕಾಗುವ ಅಧಿಕ ಸಾಮರ್ಥ್ಯದ ಎಲೆಕ್ಟ್ರಿಕ್ ಜೆಟ್ ಮತ್ತು ಡಕ್ಟೆಡ್-ಫ್ಯಾನ್ ಪ್ರೊಪಲ್ಶನ್ ತಯಾರಿಕೆಗೆ ಹೆಸರಾಗಿರುವ ಗ್ರೀನ್ ಜೆಟ್ಸ್ ಕಂಪನಿಯು ಬೆಂಗಳೂರಿಗೆ ಸಮೀಪವಿರುವ ಜಾಗದಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸುಲು ಮನಸ್ಸು ಮಾಡಿದೆ. ಆಯಾ ಕಂಪನಿಗಳು ಕೇಳುವ ಅಗತ್ಯ ಸಂಪನ್ಮೂಲ, ಸಹಕಾರವನ್ನು ನೀಡಲು, ಅಗತ್ಯ ಭೂಮಿ ಒದಗಿಸುವುದಾಗಿ ಸಚಿವರು ಭರವಸೆ ನೀಡಿದ್ದಾಗಿ ತಿಳಿಸಿದರು.

AI ಸೇರಿ ವಿವಿಧ ಕಂಪನಿಗಳಿಂದ ನಗರದ ಪ್ಲಾಂಟ್..!
ಫಿಡೋ ಎಐ ಕಂಪನಿ ಕೂಡ ಕರ್ನಾಟಕದಲ್ಲಿ ತನ್ನದೊಂದು ತಯಾರಿಕಾ ಘಟಕ ಆರಂಭಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆದಿದೆ. ಈ ಬಗ್ಗೆ ಉನ್ನತಾಧಿಕಾರಿಗಳು ಮಾಹಿತ ನೀಡಿದ್ದಾರೆ. ವಿನ್ಯಾಸಕ್ಕೆ ಹೆಚ್ಚಿನ ಮಹತ್ತ್ವವಿರುವ ಸ್ಮಾರ್ಟ್ ಫೋನ್ ತಯಾರಿಸುವ ನಥಿಂಗ್ ಕಂಪನಿಯೊಂದಿಗಿನ ಚರ್ಚೆಯಲ್ಲಿ ರಾಜ್ಯದಲ್ಲಿ ಒಂದು ತಯಾರಿಕಾ ಸ್ಥಾವರ ಸ್ಥಾಪಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಇನ್ನೂ ಉನ್ನತ ಎಂಜಿನಿಯರಿಂಗ್ ವಲಯದಲ್ಲಿ ಹೆಸರು ಮಾಡಿರುವ ರೋಡ್ಸ್ ಗ್ರೂಪ್ ಜತೆಗಿನ ಮಾತುಕತೆಯಲ್ಲಿ, ಕಂಪನಿಯ ಉನ್ನತ ಮಟ್ಟದ ನಿಯೋಗವು ಆದಷ್ಟು ಬೇಗ ಕರ್ನಾಟಕಕ್ಕೆ ಭೇಟಿ ನೀಡಬೇಕೆಂದು ಆಹ್ವಾನಿಸಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
ಭಾರೀ ಹೂಡಿಕೆಗೆ ವಿದೇಶಿ ಕಂಪನಿಗಳ ಒಲವು
ಸಚಿವರೊಂದಿಗೆ ಗ್ರೀನ್ ಜೆಟ್ಸ್ ಸಿಇಒ ಅನ್ಮೋಲ್ ಮನೋಹರ್, ಫಿಡೋ ಎಐ ಸಹ ಸಂಸ್ಥಾಪಕಿ ವಿಕ್ಟೋರಿಯಾ ಎಡ್ವರ್ಡ್ಸ್, ನಥಿಂಗ್ ಕಂಪನಿಯ ಜಾಗತಿಕ ಕಾರ್ಯತಂತ್ರ ನಿರ್ದೇಶಕಿ ಟಮೀನಾ, ರೋಡ್ಸ್ ಗ್ರೂಪ್ ಸಿಇಒ ಮಾರ್ಕ್ ರಿಡ್ಜ್ವೇ ಮತ್ತು ಎಂಬಿಡಿಎ ಕಂಪನಿಯ ಭಾರತೀಯ ಪ್ರಾದೇಶಿಕ ವ್ಯವಹಾರಗಳ ಮುಖ್ಯಸ್ಥ ಟಾಮ್ ಫೆಲ್ ಪಾಲ್ಗೊಂಡಿದ್ದರು. ಅವರೆಲ್ಲ ಸಚಿವರಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಆಸಕ್ತಿ ಹೊಂದಿರುವ ಬಗ್ಗೆ ತಿಳಿಸಿದರು.
ಜಿಸಿಸಿ ಸೆಂಟರ್ ಸ್ಥಾಪನೆಗೆ
ಇನ್ನೂ ಮೊದಲ ದಿನ ಸೋಮವಾರ ಸಚಿವರು ಎಸ್.ಸಿ.ಐ ಸೆಮಿಕಂಡಕ್ಟರ್ ಕಂಪನಿ ಮಾತ್ರವಲ್ಲದೆ, ವಿಯರ್ ಗ್ರೂಪ್, ಲೇಟೋಸ್ ಡೇಟಾ ಸೆಂಟರ್, ಸ್ಯಾಮ್ಕೋ ಹೋಲ್ಡಿಂಗ್ಸ್, ಎ.ಆರ್.ಎಂ. ಸೆಮಿಕಂಡಕ್ಟರ್ಸ್ ಕಂಪನಿಗಳ ಮುಖ್ಯಸ್ಥರ ಜತೆ ಚರ್ಚಿಸಿದರು. ಈ ವೇಳೆ ಎಸ್.ಸಿ.ಐ ಸೆಮಿಕಂಡಕ್ಟರ್ಸ್ ಕಂಪನಿಯು ಕರ್ನಾಟಕದಲ್ಲಿ ತನ್ನ ಗ್ಲೋಬಲ್ ಕೇಪಬಿಲಿಟಿ ಸೆಂಟರ್ (ಜಿಸಿಸಿ) ಸ್ಥಾಪಿಸುವುದಾಗಿ ತಿಳಿಸಿದೆ. ಸರ್ಕಾರ ತನ್ನಿಂದಾಗುವ ಎಲ್ಲ ಸಹಕಾರ, ನೆರವು ನೀಡುವುದಾಗಿ ಸಚಿವರು ತಿಳಿಸಿದ್ದಾರೆ.












Click it and Unblock the Notifications