UGNEET 2026 ಅಭ್ಯರ್ಥಿಗಳಿಗೆ ಬಂಪರ್ ಸುದ್ದಿ: 150 ಮೆಡಿಕಲ್ ಸೀಟು ಹೆಚ್ಚಳ, ಸೆ.9ರವರೆಗೆ ಅವಕಾಶ: KEA
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಯುಜಿ 2026 (UGNEET) ಅಭ್ಯರ್ಥಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆಯ ಎರಡನೇ ಸುತ್ತಿಗೆ ಹೆಚ್ಚುವರಿಯಾಗಿ 150 ವೈದ್ಯಕೀಯ ಸೀಟು ಲಭ್ಯವಾಗಿದ್ದು, ಆಸಕ್ತರು ಸೆ.9ರವರೆಗೆ ಆಪ್ಷನ್ಸ್ ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ( KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಸೋಮವಾರ ತಿಳಿಸಿದ್ದಾರೆ.
ಬಾಗಲಕೋಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ 100 ಸೀಟು ಹಾಗೂ ಫಾರೂಕಿಯ ವೈದ್ಯಕೀಯ ಕಾಲೇಜಿಗೆ ಹೆಚ್ಚುವರಿಯಾಗಿ 50 ಸೀಟು ಲಭ್ಯವಾಗಿವೆ. ಬಾಗಲಕೋಟೆಯದು ಹೊಸ ಕಾಲೇಜಾಗಿರುವ ಕಾರಣ ಆ ಕಾಲೇಜಿಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಎರಡನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಲಾಗಿನ್ ಆಗಿ ಒಪ್ಪಿಗೆ ಸೂಚಿಸಬೇಕು. ಆಪ್ಷನ್ಸ್ ಅದಲು- ಬದಲು ಮಾಡಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ. ಇನ್ನೂ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಚಾಯ್ಸ್-2 ಮತ್ತು ಚಾಯ್ಸ್-3 ಆಯ್ಕೆ ಮಾಡಿರುವವರು ಹಾಗೂ ಸೀಟು ಹಂಚಿಕೆಯಾಗದಿರುವವರು ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ ನೀಡುವ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ಗೆ https://cetonline.karnataka.gov.in/kea/ ಗೆ ಭೇಟಿ ನೀಡಬಹುದು.
ಇಂದಿನಿಂದ ಆಪ್ಷನ್ ದಾಖಲಾತಿಗೆ ಅವಕಾಶ
UGNEETಗೆ ಸಂಬಂಧಿಸಿದಂತೆ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯು ಇಂದು ಸೋಮವಾರ ಸೆಪ್ಟೆಂಬರ್ 7ರಿಂದ ಪ್ರಾರಂಭವಾಗಿದೆ. ಮೊದಲನೇ ಸುತ್ತಿನಲ್ಲಿ ಚಾಯ್ಸ್-2 ಮತ್ತು ಚಾಯ್ಸ್- 3 ಆಯ್ಕೆ ಮಾಡಿದವರು, ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆ ಆಗದೇ ಇರುವ ಮತ್ತು ಯುಜಿಸಿಇಟಿ ಎರಡನೇ ಸುತ್ತಿನ ನಂತರ ಚಾಯ್ಸ್-4 ಹಾಕಿ ಹೊರಗುಳಿದವರು (ವೈದ್ಯಕೀಯ ಮತ್ತು ದಂತ ವೈದ್ಯಕೀಯ ಆಪ್ಷನ್ಸ್ ಇರುವವರು) ಈ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇವರು ಸೆಪ್ಟೆಂಬರ್ 9ರಂದು ಮಧ್ಯಾಹ್ನ 2ಗಂಟೆವರೆಗೆ ಪೋರ್ಟಲ್ ನಲ್ಲಿ ಲಾಗಿನ್ ಆಗಿ ಆಪ್ಷನ್ಸ್ ಸಲ್ಲಿಸಲು ಅವಕಾಶ ಇದೆ. ಇದರ ಬಳಿಕ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್ಸೈಟ್ ವೀಕ್ಷಿಸುವಂತೆ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.
UGCET ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ
ಪದವಿ ಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ 2026ಗೆ (UGCET) ಸಂಬಂಧಿಸಿದಂತೆ ಎಂಜನಿಯರಿಂಗ್, ಪಶು ವೈದ್ಯಕೀಯ ಸೇರಿದಂತೆ ಇತರ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಇಂದು ಸೋಮವಾರ (ಸೆಪ್ಟೆಂಬರ್ 7) ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದರು.
ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆಪ್ಟಂಬರ್ 10ರೊಳಗೆ ನಿಗದಿತ ಶುಲ್ಕ ಪಾವತಿಸಿ (ಪಾವತಿಸದೇ ಇದ್ದಲ್ಲಿ) ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡು ಸೆಪ್ಟೆಂಬರ್ 11ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ರವೇಶ ಪಡೆಯಬೇಕು.
ಕಾಲೇಜು ಪ್ರವೇಶಿಸದೇ ಸೀಟು ರದ್ದತಿ ಕೋರಿ ಸಲ್ಲಿಸುವ ಮನವಿಗಳನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸುವುದಿಲ್ಲ. ಕಾಲೇಜಿಗೆ ಪ್ರವೇಶ ಪಡೆಯದೆ ಇರುವ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications
