UGCET 2026: ಮೂರನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ಲಿಂಕ್ ಓಪನ್; ಕೊನೆಯ ದಿನಾಂಕ ಯಾವಾಗ?
ಬೆಂಗಳೂರು: ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ-ಯುಜಿಗೆ (UGCET-2026) ಸಂಬಂಧಿಸಿದಂತೆ ಎಂಜಿನಿಯರಿಂಗ್ ಹಾಗೂ ಇತರ ಸಿಇಟಿ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಲಿಂಕ್ ಬಿಡುಗಡೆ ಮಾಡಿದ್ದ, ಆಯ್ಕೆ ದಾಖಲಿಸಲು ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ. ಕೊನೆಯ ದಿನಾಂಕ ಯಾವಾಗ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಈ ಕುರಿತು ಸೋಮವಾರ ಮಾಹಿತಿ ನೀಡಿದ್ದಾರೆ. ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಹಂಚಿಕೆಯಾಗದವರು/ಹಂಚಿಕೆ ನಂತರ ದಂಡ ಪಾವತಿಸಿ ಸೀಟು ರದ್ದು ಮಾಡಿಕೊಂಡವರು ಹೊಸದಾಗಿ ಆಪ್ಷನ್ಸ್ ದಾಖಲಿಸಲು ಸೆಪ್ಟಂಬರ್ 3ರಂದು ಸಂಜೆ 6 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದರು.

ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಹಾಗೂ ಅಪ್ ಗ್ರೆಡೇಷನ್ ಗೆ ಹೋಗಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸೆಪ್ಟಂಬರ್ 2ರಂದು ಬೆಳಿಗ್ಗೆ 11ರಿಂದ ಸೆಪ್ಟಂಬರ್ 3ರ ಸಂಜೆ 6 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ಒದಗಿಸಲಾಗಿದೆ. ಇನ್ನೂ ಮೂರನೇ ಸುತ್ತಿನಲ್ಲಿ ಭಾಗವಹಿಸುವವರು ಹೊಸದಾಗಿಯೇ ಆಪ್ಷನ್ಸ್ ದಾಖಲಿಸಬೇಕು. ಈ ಹಿಂದಿನ ಆಪ್ಷನ್ಸ್ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕಾಲೇಜು ಪ್ರವೇಶಿಸದಿದ್ದರೆ ಐದು ಪಟ್ಟು ದಂಡ
ಮೂರನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದರೆ ಕಾಲೇಜಿನಲ್ಲಿ ಪ್ರವೇಶ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಶುಲ್ಕದ ಐದು ಪಟ್ಟು ದಂಡ ಪಾವತಿಸಬೇಕಾಗುತ್ತದೆ. ಹೀಗಾಗಿ ಇಷ್ಟ ಇರುವ ಕಾಲೇಜು ಮತ್ತು ಕೋರ್ಸ್ ಗಳನ್ನೇ ಆಪ್ಷನ್ಸ್ ದಾಖಲಿಸುವಾಗ ಪರಿಗಣಿಸಲು ಕೋರಿದ್ದಾರೆ. ಎರಡನೇ ಸುತ್ತಿನ ಸೀಟು ಹಂಚಿಕೆ ನಂತರ ಯಾವುದೇ ಚಾಯ್ಸ್ ಆಯ್ಕೆ ಮಾಡದ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಎರಡನೇ ಸುತ್ತಿನಲ್ಲಿ ಚಾಯ್ಸ್-4 ಹಾಕಿರುವ ಅಭ್ಯರ್ಥಿಗಳು ಕೂಡ ಭಾಗವಹಿಸಲು ಆಗುವುದಿಲ್ಲ. ಆದರೆ ಅಂತಹವರು ವೈದ್ಯಕೀಯ ಕೋರ್ಸ್ ಗಳ ಆಪ್ಷನ್ಸ್ ಇದ್ದರೆ ಮಾತ್ರ ಎರಡನೇ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಬಹುದು.ಎರಡನೇ ಸುತ್ತಿನ ನಂತರ ಉಳಿದಿರುವ ಸೀಟುಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅವುಗಳನ್ನು ಗಮನಿಸುವಂತೆ ಪ್ರಕಟಣೆಯಲ್ಲಿ ಕೆಇಎ ತಿಳಿಸಿದೆ.
UGNEET 2026: ಪ್ರವೇಶಾತಿ, ಶುಲ್ಕ ಪಾವತಿ ದಿನಾಂಕಗಳು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು UGNEET 2026ಗೆ ಸಂಬಂಧಿಸಿದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಅಂತಿಮ ಫಲಿತಾಂಶವನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು.
ಹಂಚಿಕೆಯಾಗಿರುವ ಸೀಟು ಇಷ್ಟ ಆಗಿರುವವರು ಚಾಯ್ಸ್-1 ಆಯ್ಕೆ ಮಾಡಿಕೊಂಡು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸೆಪ್ಟಂಬರ್ 4 ಕೊನೆ ದಿನವಾಗಿದೆ. ಆಯ್ಕೆ ಸೆಪ್ಂಟಬರ್ 2 ಹಾಗೂ ಶುಲ್ಕ ಪಾವತಿಸಲು ಸೆಪ್ಟಂಬರ್ 3 ರವರೆಗೆ ಅವಕಾಶ ನೀಡಲಾಗಿದೆ.
ಸೀಟು ಅಪ್ ಗ್ರೆಡೇಷನ್ ಗೆ ಹೋಗುವವರು ಚಾಯ್ಸ್-2 ಆಯ್ಕೆ ಮಾಡಿಕೊಳ್ಳಬಹುದು. ಸಿಕ್ಕಿರುವ ಸೀಟು ಬೇಡವೇ ಬೇಡ ಎನ್ನುವವರು ಚಾಯ್ಸ್-3 ಆಯ್ಕೆ ಮಾಡಿಕೊಂಡು ಮುಂದಿನ ಸುತ್ತಿನಲ್ಲಿ ಭಾಗವಹಿಸಬಹುದು. ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಲು ಇಚ್ಛಿಸುವವರು ಚಾಯ್ಸ್- 4 ಆಯ್ಕೆ ಮಾಡಿಕೊಳ್ಳಬಹುದು ಎಂದು ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.


Click it and Unblock the Notifications
