ರಾಜ್ಯದಲ್ಲಿ ಯುಗಾದಿಯ ಸಿಹಿ, ಕಹಿ ಯಾರಿಗೆ? ಮತದಾರರಿಗೋ? ನಾಯಕರಿಗೋ?
ಬೆಂಗಳೂರು, ಮಾರ್ಚ್ 29: ರಾಜಕೀಯದಲ್ಲಿ ಬೇವು ಬೆಲ್ಲ ಇದ್ದದ್ದೇ ಆದರೆ ಪ್ರತಿಯೊಬ್ಬ ನಾಯಕರು ಕೂಡ ತಮಗೆ ಸಿಹಿ ಬೇಕೆಂದು ಬಯಸುತ್ತಾರೆ. ಆದರೆ ಬೇವು ಬೆಲ್ಲ ಸಮ್ಮಿಶ್ರಣದ ಯುಗಾದಿ ಈ ಬಾರಿ ಬಹುತೇಕರಿಗೆ ಕಹಿಯಾದಂತೆ ಗೋಚರಿಸುತ್ತಿದೆ. ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಾಯಕರಲ್ಲಿ ತಳಮಳಗಳು, ಗೊಂದಲಗಳು, ಸಂಕಷ್ಟಗಳು ಹೀಗೆ ಸಾಲು ಸಾಲು ಕಹಿ ಕಾಡಲಾರಂಭಿಸಿದೆ. ಇದರ ಜತೆಗೆ ಮತನೀಡಿ ನಾಯಕರನ್ನು ಆಯ್ಕೆ ಮಾಡಿದ ತಪ್ಪಿಗೆ ಮತದಾರರಿಗೂ ಬೆಲೆ ಏರಿಕೆಯ ಬಿಸಿ ಜೇಬನ್ನು ಸುಡಲಾರಂಭಿಸಿದ್ದು, ಯುಗಾದಿಯ ಸಿಹಿಯನ್ನು ಕಹಿ ನುಂಗಿ ಹಾಕಿದೆ.
ಈ ಬಾರಿ ಯುಗಾದಿಯ ಆರಂಭವೇ ಕೆಲವು ರಾಜಕಾರಣಿಗಳಿಗೆ ಸತ್ವ ಪರೀಕ್ಷೆಯನ್ನು ತಂದೊಡ್ಡಿದೆ. ಆಡಳಿತ ಪಕ್ಷದಲ್ಲಿ ಹನಿಟ್ರ್ಯಾಪ್ ಸುದ್ದಿ ಮಾಡುತ್ತಿದೆ. ಈ ಪ್ರಕರಣ ಕುರಿತಂತೆ ಮಾಡುತ್ತಿರುವ ಆರೋಪಗಳು, ಹೇಳಿಕೆಗಳು, ಎಲ್ಲವೂ ಆಡಳಿತ ಪಕ್ಷದಲ್ಲಿರುವ ನಾಯಕರ ಸುತ್ತಲೇ ಸುತ್ತಿದಂತೆ ಕಾಣುತ್ತಿದೆ. ಹೀಗಾಗಿ ಶತ್ರುಗಳು ವಿರೋಧ ಪಕ್ಷದಲ್ಲಿಲ್ಲ ನಮ್ಮಲ್ಲೇ ಇದ್ದಾರೆ ಎಂಬಂತಹ ನಡವಳಿಕೆಗಳು ಆಡಳಿತ ಮತ್ತು ವಿಪಕ್ಷ ಎರಡರಲ್ಲೂ ಎದ್ದು ಕಾಣಿಸುತ್ತಿವೆ. ರಾಜಕೀಯ ಆಟಗಳನ್ನು ನೋಡುತ್ತಾ ಬರುತ್ತಿರುವ ಮತದಾರರಿಗೆ ಅಯ್ಯೋ ಎಂತಹ ನಾಯಕರನ್ನು ಆಯ್ಕೆ ಮಾಡಿ ಕಳಿಸಿ ಬಿಟ್ಟೇವಪ್ಪಾ ಎಂಬ ಪಾಪ ಪ್ರಜ್ಞೆ ಕಾಡತೊಡಗಿದೆ.

ಇತ್ತೀಚೆಗಿನ ರಾಜಕೀಯ ಚಿಂತನೆಗಳು ಅಚ್ಚರಿ ಮೂಡಿಸುತ್ತಿವೆ. ಪ್ರತಿಯೊಬ್ಬ ನಾಯಕನೂ ತಾನು ಮುಂದಿನ ಅವಧಿಗೂ ಆಯ್ಕೆಯಾಗಿ ಬರಬೇಕು, ತನ್ನ ಜನಪ್ರಿಯತೆ ಉಳಿಸಿಕೊಳ್ಳಬೇಕಾದರೆ ಏನು ಮಾಡಬೇಕು? ಓಟ್ ಬ್ಯಾಂಕ್ ನ್ನು ಗಟ್ಟಿ ಮಾಡಿಕೊಳ್ಳುವುದು ಹೇಗೆ? ಹೀಗೆ ದಿನ ನಿತ್ಯವೂ ತನ್ನ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾರೆಯೇ ವಿನಃ ಯಾರೂ ಕೂಡ, ರಾಜ್ಯದ ಅಭಿವೃದ್ಧಿ ಬಗ್ಗೆಯಾಗಲೀ, ಜನ ಸಾಮಾನ್ಯರ ಬದುಕಿನ ಬಗ್ಗೆಯಾಗಲೀ ಚಿಂತೆ ಮಾಡುತ್ತಿಲ್ಲ. ಯಾವುದೇ ಸರ್ಕಾರ ಬಂದರೂ ಬೆಲೆ ಏರಿಕೆಯಂತು ಇದ್ದೇ ಇದೆ. ಅದು ಯಾವತ್ತೂ ತಪ್ಪುವುದಿಲ್ಲ.
ರಾಜ್ಯದ ಮೂರು ಪಕ್ಷಗಳಲ್ಲಿ ನೂರು ಸಮಸ್ಯೆ
ಸರ್ಕಾರಿ ನೌಕರರು, ಕಾರ್ಪೋರೇಟ್ ಉದ್ಯೋಗಿಗಳು ಹೇಗೋ ಜೀವನ ಮಾಡಿಕೊಂಡು ಹೋಗುತ್ತಾರೆ ಆದರೆ ದಿನಕೂಲಿಗಳು, ಸಣ್ಣಪುಟ್ಟ ಕೆಲಸ ಮಾಡಿ ಬದುಕುವವರ ಸ್ಥಿತಿ ಏನು? ಬೆಲೆ ಏರಿಕೆಯ ಹೊಡೆತದಲ್ಲಿ ಅವರು ಜೀವನ ನಡೆಸುವುದಾದರೂ ಹೇಗೆ? ಆಡಳಿತ ಪಕ್ಷದಲ್ಲಿರುವ ನಾಯಕರಿಗೆ ಸಿಎಂ ಸ್ಥಾನ, ಸಚಿವ ಸ್ಥಾನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಾದರೆ, ವಿಪಕ್ಷದಲ್ಲಿರುವವರಿಗೆ ನಾವು ಅಧಿಕಾರಕ್ಕೆ ಬರುವುದು ಯಾವಾಗ ಎಂಬ ಚಿಂತೆ. ಎಲ್ಲರಿಗೂ ಅವರ ರಾಜಕೀಯ ಭವಿಷ್ಯದ ಚಿಂತೆಯೇ ವಿನಃ ಪ್ರಜೆಗಳ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಸದ್ಯಕ್ಕೆ ರಾಜ್ಯದಲ್ಲಿ ಮೂರು ಪಕ್ಷಗಳಿದ್ದು, ಮೂರು ಪಕ್ಷಗಳಲ್ಲೂ ಮೂರು ತರಹದ ಸಮಸ್ಯೆಗಳು ಇದೀಗ ಗೋಚರಿಸಲಾರಂಭಿಸಿದೆ. ಆಡಳಿತ ಪಕ್ಷದಲ್ಲಿ ಕುರ್ಚಿ ಗಲಾಟೆ ಒಳಗೊಳಗೆ ನಡೆಯುತ್ತಿದ್ದು, ಇದರ ಪರಿಣಾಮ ಆಡಳಿತ ಹಳ್ಳ ಹಿಡಿಯುತ್ತಿದೆ. ಇನ್ನು ಆಡಳಿತ ಪಕ್ಷ ಹಳಿ ತಪ್ಪಿದಾಗ ಅದನ್ನು ಎಚ್ಚರಿಸಬೇಕಾದ ವಿಪಕ್ಷಗಳ ಸ್ಥಿತಿ ಊರು ಬಾಗಿಲಾಗಿದೆ. ಇರುವ ನಾಲ್ಕು ಮಂದಿಯೇ ಕಿತ್ತಾಡಿಕೊಂಡು ಉಚ್ಛಾಟನೆ ಶಿಕ್ಷೆ ಅನುಭವಿಸಿಕೊಂಡು ಒಬ್ಬರನೊಬ್ಬರು ಬೈಯ್ದುಕೊಂಡು ತಿರುಗಾಡುತ್ತಿದ್ದಾರೆ. ಹೀಗಾಗಿ ಅವರು ಈ ಕಾಲಕ್ಕೆ ಉದ್ಧಾರ ಆಗುವುದು ತುಸು ಕಷ್ಟವೇ..

ಸ್ವಾರ್ಥದ ರಾಜಕೀಯದಿಂದ ಅಭಿವೃದ್ಧಿ ಮರೀಚಿಕೆ
ರಾಜ್ಯದಲ್ಲಿ ಆಡಳಿತ ಪಕ್ಷದ ನಾಯಕರು ಏರಿಗೆಳೆದರೆ, ವಿಪಕ್ಷದವರು ನೀರಿಗೆ ಎಳೆಯುತ್ತಿದ್ದಾರೆ. ಹೀಗಾಗಿ ರಾಜ್ಯದ ಪರಿಸ್ಥಿತಿ ಅಧೋಗತಿಗೆ ಹೋಗುತ್ತಿದೆ. ಅವರವರು ಅವರವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಒಗ್ಗಟ್ಟಾಗಿ ರಾಜ್ಯದ ಅಭಿವೃದ್ಧಿಗೆ, ಜನಹಿತಕ್ಕಾಗಿ ಶ್ರಮಿಸುವವರ ಕೊರತೆ ಎದುರಾಗಿದೆ. ಅದಕ್ಕಿಂತ ಹೆಚ್ಚಾಗಿ ಅಧಿಕಾರದ ಮದವೂ ಬಹಳಷ್ಟು ನಾಯಕರನ್ನು ಅಧಃಪತನಕ್ಕೆ ತಳ್ಳುತ್ತಿದೆ. ಹಣ, ಆಸ್ತಿಯನ್ನು ಕೂಡಿಡುವ ಸಲುವಾಗಿ ಸ್ವಾರ್ಥದ ರಾಜಕೀಯಕ್ಕೆ ಒತ್ತು ನೀಡುತ್ತಿರುವುದರಿಂದ ಕರ್ಮ ತಿರುಗಿ ಬರುತ್ತಿದೆ. ಅದರ ಪರಿಣಾಮಗಳು ಬೇರೆ, ಬೇರೆ ರೀತಿಯಲ್ಲಿ ಕಾಡಲಾರಂಭಿಸುತ್ತಿರುವುದು ಇವತ್ತು ನಮ್ಮ ಕಣ್ಣಿಗೆ ಗೋಚರಿಸುತ್ತಿದೆ.
ವಿಶ್ವಾವಸು ಸಂವತ್ಸರದ ಯುಗಾದಿ ಈ ಬಾರಿ ರಾಜಕೀಯದಲ್ಲಿ ಯಾವ ರೀತಿಯ ಫಲಕೊಡುತ್ತದೆಯೋ ಗೊತ್ತಿಲ್ಲ. ಈಗಾಗಲೇ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆ ಅದು ಸೃಷ್ಟಿಸಿರುವ ತಲ್ಲಣಗಳು ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಎಲ್ಲವೂ ಸರಿ ಹೋಗಿ ಮಳೆ, ಬೆಳೆಯಾಗಿ ರಾಜ್ಯ ಸುಭೀಕ್ಷೆ ಕಂಡರೆ ಅಷ್ಟೇ ಸಾಕು. ಈ ಬಾರಿಯ ಯುಗಾದಿಯಿಂದ ನಾವೆಲ್ಲರೂ ಒಳಿತನ್ನೇ ಬಯಸೋಣ. ನಮ್ಮನ್ನಾಳುವ ನಾಯಕರಿಗೆ ದೇವರು ಒಳ್ಳೆಯ ಬುದ್ದಿಕೊಟ್ಟು ರಾಜ್ಯವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯುವಮತಾಗಲಿ ಎನ್ನುವುದೇ ಜನರ ಪ್ರಾರ್ಥನೆಯಾಗಿದೆ.
-
Vijay: ಪ್ರಚಾರದ ವೇಳೆ ಹೂವಿನ ಚೆಂಡು ಎಸೆದ ಅಭಿಮಾನಿ; ಸೈಕಲ್ನಿಂದ ಇಳಿದು ಗಾಡಿ ಹತ್ತಿದ ದಳಪತಿ ವಿಜಯ್, ವಿಡಿಯೋ ವೈರಲ್ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
Upendra: ನಟ ಉಪೇಂದ್ರ ಅವರ "ಪ್ರಜಾಕೀಯ" ಪಕ್ಷದ ವೆಬ್ಸೈಟ್ ಲೋಕಾರ್ಪಣೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ರೂಲ್ಸ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications