Tumkur-Davanagere Train: ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿ ಅಪ್‌ಡೇಟ್ ಕೊಟ್ಟ ಸಚಿವ ಸೋಮಣ್ಣ
ದಶಕಗಳ ಹಿಂದೆ ಆರಂಭವಾಗಿರುವ ತುಮಕೂರು - ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ಈಗ ವೇಗ ಸಿಕ್ಕಿದೆ. ಶಿರಾ, ಹಿರಿಯೂರು, ಚಿತ್ರದುರ್ಗ ಜನರ ಹಲವು ದಶಕಗಳ ಕನಸು ನನಸಾಗುವುದು ಖಚಿತವಾಗಿದ್ದು ಇದಕ್ಕಾಗಿ ಇನ್ನಷ್ಟು ದಿನ ಕಾಯಬೇಕಾಗುತ್ತದೆ. 2027ರ ಆರಂಭದಲ್ಲೇ ಕಾಮಗಾರಿ ಮುಗಿಯುತ್ತದೆ ಎಂದು ಹೇಳಲಾಗಿತ್ತಾದರೂ ಈಗ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ದಾವಣಗೆರೆ - ತುಮಕೂರು ನೇರ ರೈಲು ಮಾರ್ಗ ಕಾಮಗಾರಿ ಅಪ್‌ಡೇಟ್ ನೀಡಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲಿದೆ ಎಂದು ಹೇಳಿದ್ದಾರೆ.

ಮಂಗಳವಾರ ನವದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ತುಮಕೂರು- ಚಿತ್ರದುರ್ಗ- ದಾವಣಗೆರೆ ರೈಲು ಮಾರ್ಗದ ತಿಮ್ಮರಾಜನಹಳ್ಳಿ-ತಾವರೆಕೆರೆ ವಿಭಾಗಕ್ಕೆ ರೈಲ್ವೆ ಮಂಡಳಿಯ ಅನುಮೋದನೆ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ನಮ್ಮ ಮನವಿಗೆ ಅಮಿತ್ ಶಾ ಕೂಡ ಸಕಾರಾತ್ಮವಾಗಿ ಸ್ಪಂದಿಸಿದ್ದು ಎಲ್ಲಾ ರೀತಿಯ ಬೆಂಬಲ ನೀಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದ ಅವರು, ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡಿದ್ದಕ್ಕಾಗಿ ಅಮಿತ್ ಶಾ ಅವರಿಗೆ ಕರ್ನಾಟಕದ ಜನರ ಪರವಾಗಿ, ವಿಶೇಷವಾಗಿ ತುಮಕೂರಿನ ಜನರ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.
ವೇಗ ಪಡೆದ ಕಾಮಗಾರಿ
ತುಮಕೂರು - ಚಿತ್ರದುರ್ಗ - ದಾವಣಗೆರೆ ರೈಲು ಮಾರ್ಗಕ್ಕೆ 2140 ಕೋಟಿ ರೂಪಾಯಿ ಮತ್ತು ತುಮಕೂರು - ರಾಯದುರ್ಗ ಮಾರ್ಗದ ಕಾಮಗಾರಿ 2500 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಹೊಸ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ಕರ್ನಾಟಕದ ಇತರ ಪ್ರದೇಶಗಳ ಜೊತೆ ತುಮಕೂರಿನ ಸಂಪರ್ಕ ಸುಧಾರಿಸಲು ಈ ಎರಡೂ ಯೋಜನೆಗಳು ಮುಖ್ಯವಾಗಿವೆ. ಎರಡೂ ಮಾರ್ಗಗಳ ಕಾಮಗಾರಿ ಆದಷ್ಟು ಬೇಗನೆ ಮುಗಿಯುವಂತೆ ಸತತವಾಗಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ವಿ ಸೋಮಣ್ಣ ತಿಳಿಸಿದರು.
ತುಮಕೂರು - ಚಿತ್ರದುರ್ಗ - ದಾವಣಗೆರೆ ಹೊಸ ಮಾರ್ಗದ ಮುಗಿದ ಬಳಿಕ ಎರಡೂ ನಗರಗಳ ನಡುವಿನ ಅಂತರ ಕಡಿಮೆಯಾಗಲಿದ್ದು ಪ್ರಯಾಣದ ಸಮಯ ಕೂಡ ಉಳಿತಾಯವಾಗಲಿದೆ. ಹೊಸ ಮಾರ್ಗದಿಂದ ಎರಡೂ ನಗರಗಳ ನಡುವಿನ ಅಂತರ 65 ಕಿ.ಮೀ ರಷ್ಟು ಕಡಿಮೆಯಾಗಲಿದೆ.
ತುಮಕೂರು - ರಾಯದುರ್ಗ ಯೋಜನೆ ಮುಗಿದ ಬಳಿಕ ತುಮಕೂರು - ಬಳ್ಳಾರಿ ನಡುವಿನ ಅಂತರ 130 ಕಿ.ಮೀ ಕಡಿಮೆಯಾಗಲಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ರೈಲ್ವೆ ಸಂಪರ್ಕ ಮತ್ತಷ್ಟು ಸುಧಾರಣೆಯಾಗಲಿದೆ. ಎರಡೂ ಯೋಜನೆಗಳಿಗೆ ತ್ವರಿತ ಭೂಸ್ವಾಧೀನ ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
2026ರ ಆರಂಭದಲ್ಲೇ ಮುಗಿಯುತ್ತದೆ ಎಂದು ನಿರೀಕ್ಷೆ ಮಾಡಲಾಗಿದ್ದ ಕಾಮಗಾರಿ ಈಗ ಮತ್ತಷ್ಟು ತಡವಾಗಲಿದೆ. 2027ರ ಮಾರ್ಚ್ ವೇಳೆಗೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications