ಈ ಜಿಲ್ಲೆಗೆ ಹಾಕಿ ಕ್ರೀಡಾಂಗಣ, ವಿಶ್ವದರ್ಜೆಯ ಈಜುಕೊಳ: ಸಿಎಂ ಸಿದ್ದರಾಮಯ್ಯ
ತುಮಕೂರು: ಜಿಲ್ಲೆಯಲ್ಲಿ ಆಯೋಜಿಸಿದ್ದ 'ಕರ್ನಾಟಕ ಕ್ರೀಡಾಕೂಟ-2025-26' ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತುಮಕೂರು ಜಿಲ್ಲೆಯ ಕ್ರೀಡಾಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಘೋಷಿಸಿದರು. ಜಿಲ್ಲೆಯ ಯುವಜನತೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಿಶ್ವಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕ್ರೀಡೆ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸಮಯಪ್ರಜ್ಞೆ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದ ಸಿಎಂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದ್ದು, ಇದರ ರೂವಾರಿಯಾಗಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು. ಕ್ರೀಡೆಯಲ್ಲಿ ಗೆಲುವು-ಸೋಲು ಮುಖ್ಯವಲ್ಲ, ಕ್ರೀಡಾಸ್ಪೂರ್ತಿ ಮುಖ್ಯ ಎಂದು ತಿಳಿಸಿದ ಸಿಎಂ, ಪ್ರತಿಯೊಬ್ಬ ಕ್ರೀಡಾಪಟು ಈ ಮೌಲ್ಯವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು, ಕಠಿಣ ಪರಿಶ್ರಮ ಮತ್ತು ಉತ್ತಮ ತರಬೇತಿ ಗುರಿ ಸಾಧನೆಗೆ ಅಗತ್ಯ ಎಂದು ಅವರು ಒತ್ತಿ ಹೇಳಿದರು.

ನಾನು ಕೂಡ ಕಬಡ್ಡಿ ಪಟು
ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, ನಾನು ವಿದ್ಯಾರ್ಥಿ ದೆಸೆಯಲ್ಲಿ ಕಬಡ್ಡಿ ಪಟುವಾಗಿದ್ದೆ. ಜೊತೆಗೆ ಫುಟ್‌ಬಾಲ್ ಮತ್ತು ಕ್ರಿಕೆಟ್ ಮೇಲೂ ಆಸಕ್ತಿ ಇತ್ತು ಎಂದು ಹೇಳಿದರು. ಕೆಲಸದ ಒತ್ತಡದ ನಡುವೆಯೂ ಈಗಲೂ ಏಕದಿನ ಹಾಗೂ ಟಿ-20 ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತೇನೆ. ಅಂತರರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳನ್ನು ನೋಡುವುದನ್ನು ತಪ್ಪಿಸುವುದಿಲ್ಲ ಎಂದರು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಉದ್ಯೋಗಗಳಲ್ಲಿ ಮೀಸಲಾತಿ ನೀಡಿದ್ದೇವೆ
ಪೊಲೀಸ್ ಇಲಾಖೆಯಲ್ಲಿ ಪೇದೆ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರ ಹುದ್ದೆಯವರೆಗೆ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಜೊತೆಗೆ ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್, ಏಷಿಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾದ ಅಥವಾ ಭಾಗವಹಿಸಿದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು. ವಿವಿಧ ಇಲಾಖೆಗಳಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅಲ್ಲದೆ, ಒಲಂಪಿಕ್ಸ್‌ನಲ್ಲಿ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಕ್ರೀಡಾಪಟುಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ವಿವರಿಸಿದರು.
ತುಮಕೂರು ಜಿಲ್ಲೆಯಲ್ಲಿ ಹಾಕಿ ಕ್ರೀಡಾಂಗಣ ಹಾಗೂ ವಿಶ್ವದರ್ಜೆಯ ಈಜುಕೊಳ ನಿರ್ಮಾಣದ ಬೇಡಿಕೆ ಇದೆ ಎಂದು ಉಲ್ಲೇಖಿಸಿದ ಸಿಎಂ, ಕ್ರೀಡಾಭಿವೃದ್ಧಿಗೆ ಅಗತ್ಯವಿರುವಂತೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ತುಮಕೂರು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಹೊರಬಂದು, ವಿಶ್ವಮಟ್ಟದಲ್ಲಿ ರಾಜ್ಯ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಅವರು ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಶಾಸಕ ಕೆ.ಎನ್.ರಾಜಣ್ಣ, ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜು, ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಮತ್ತು ಜಿಲ್ಲೆಯ ಶಾಸಕರುಗಳು ಸೇರಿ ಹಲವು ಮಂದಿ ಪ್ರಮುಖರು, ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.












Click it and Unblock the Notifications