ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಣೆ ಮಾಡಿ: ಜಿ. ಪರಮೇಶ್ವರ್ ಹೇಳಿಕೆಗೆ ನೆಟ್ಟಿಗರ ಆಕ್ರೋಶ
ತುಮಕೂರು: ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ಕಲ್ಪತರು ನಾಡು ತುಮಕೂರು ಜಿಲ್ಲೆಯ ಹೆಸರನ್ನು 'ಬೆಂಗಳೂರು ಉತ್ತರ' ಎಂದು ಬದಲಾಯಿಸುವ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ತುಮಕೂರನ್ನು 'ಬೆಂಗಳೂರು ಉತ್ತರ' ಜಿಲ್ಲೆ ಎಂದು ಘೋಷಣೆ ಮಾಡುವಂತೆ ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದಾರೆ. ಆದರೆ ಸಚಿವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ತಮ್ಮ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದ ಸಚಿವ ಡಾ. ಜಿ. ಪರಮೇಶ್ವರ್, "ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಘೋಷಣೆ ಮಾಡಲಾಗಿದೆ. ಅದೇ ರೀತಿ ತುಮಕೂರನ್ನು ಬೆಂಗಳೂರು ಉತ್ತರ ಎಂದು ಮಾಡಬೇಕು. ವಿದೇಶದಲ್ಲಿರುವವರಿಗೆ, ಉದಾಹರಣೆಗೆ ನ್ಯೂಯಾರ್ಕ್‌ನಲ್ಲಿರುವವರಿಗೆ ತುಮಕೂರು ಎಲ್ಲಿದೆ ಎಂದು ಗೊತ್ತಾಗುವುದಿಲ್ಲ, ಆದರೆ ಬೆಂಗಳೂರು ಉತ್ತರ ಎಂದರೆ ಸುಲಭವಾಗಿ ಅರ್ಥವಾಗುತ್ತದೆ. ಬ್ರ್ಯಾಂಡ್ ಬೆಂಗಳೂರು ವಿಸ್ತರಣೆಯಡಿ ಈ ಹೆಜ್ಜೆ ಇಡುವುದು ಅಗತ್ಯವಿದೆ" ಎಂದು ಸಮರ್ಥಿಸಿಕೊಂಡಿದ್ದರು.

ನೆಟ್ಟಿಗರ ಆಕ್ರೋಶ
ಗೃಹ ಸಚಿವರ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಟುವಾಗಿ ಟೀಕಿಸಿದ್ದಾರೆ. ತುಮಕೂರಿನ ಅಸ್ತಿತ್ವ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಅಳಿಸಿಹಾಕುವ ಹುನ್ನಾರವಿದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, "ಕರ್ನಾಟಕ ರಾಜ್ಯವನ್ನೇ 'ಬೆಂಗಳೂರು ರಾಜ್ಯ' ಎಂದು ಘೋಷಣೆ ಮಾಡಿ. ಆಗಾದರೂ ರಾಜಕಾರಣಿಗಳಿಗೆ ಸಮಾಧಾನವಾಗಬಹುದು. ರಾಜ್ಯದ ಪ್ರತಿಯೊಂದು ಜಿಲ್ಲೆಗೂ ತನ್ನದೇ ಆದ ಅಸ್ತಿತ್ವ ಮತ್ತು ವೈಶಿಷ್ಟ್ಯ ಇದೆ. ಈ ಅಸ್ತಿತ್ವವನ್ನು ಅಳಿಸಿ ಹಾಕುವ ಹುನ್ನಾರ ನಡೆಯುತ್ತಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಆಗಲೇ ಮರುನಾಮಕರಣ ಮಾಡಲಾಗಿದೆ. ಕಲ್ಪತರು ನಾಡನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಮಾಡುವುದು ಎಷ್ಟು ಸೂಕ್ತ?" ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ನೆಟ್ಟಿಗರು ಕಿಡಿಕಾರಿದ್ದು, "ಇಡೀ ಕರ್ನಾಟಕವನ್ನು ಬೆಂಗಳೂರು ಅಂತ ಮಾಡಿದ್ರೆ ಈ ರಿಯಲ್ ಎಸ್ಟೇಟ್ ರಾಜಕಾರಣಿಗಳು ನಾಡನ್ನು ಏಳಿಗೆ ಮಾಡ್ತಾರೇನೋ! ಬೆಂಗಳೂರಿನಿಂದ ರಾಜಕಾರಣಿಗಳನ್ನು ಓಡಿಸುವವರೆಗೂ ನಾಡು ಏಳಿಗೆ ಆಗದು" ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹಾಗೆಯೇ, "ತುಮಕೂರಿಗೆ ಅದರದ್ದೇ ಆದ ಅಸ್ತಿತ್ವವಿದೆ. ನಗರಗಳು ಮತ್ತು ಜಿಲ್ಲೆಗಳಿಗೆ ಅವುಗಳದ್ದೇ ಆದ ಹೆಸರಿರಲಿ ಡಾ. ಜಿ. ಪರಮೇಶ್ವರ್ ಅವರೇ. ಎಲ್ಲಾ ದಿಕ್ಕುಗಳಿಗೂ 'ಬೆಂಗಳೂರು' ಎಂದು ಸೇರಿಸುವುದು ಕೇವಲ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಎಂಬುದು ನಮಗೆಲ್ಲರಿಗೂ ತಿಳಿದಿದೆ" ಎಂದು ಹಲವರು ಎಚ್ಚರಿಸಿದ್ದಾರೆ. ಒಟ್ಟಾರೆಯಾಗಿ, ಕೇವಲ ರಿಯಲ್ ಎಸ್ಟೇಟ್ ಲಾಬಿಗಾಗಿ ಜಿಲ್ಲೆಗಳ ಮೂಲ ಹೆಸರು ಹಾಗೂ ಪರಂಪರೆಯನ್ನು ಬಲಿಕೊಡಲಾಗುತ್ತಿದೆ ಎಂಬುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ.
ಕರ್ನಾಟಕ ರಾಜ್ಯವನ್ನೇ "ಬೆಂಗಳೂರು ರಾಜ್ಯ" ಎಂದು ಘೋಷಣೆ ಮಾಡಿ. ಆಗಾದರೂ ರಾಜಕಾರಣಿಗಳಿಗೆ ಸಮಾಧಾನವಾಗಬಹುದು.
— Varun Rao (@varungrao) May 19, 2026
ರಾಜ್ಯದ ಪ್ರತಿಯೊಂದು ಜಿಲ್ಲೆಗೂ ತನ್ನದೇ ಆದ ಅಸ್ತಿತ್ವ ಮತ್ತು ವೈಶಿಷ್ಟ್ಯ ಇದೆ. ಈ ಅಸ್ತಿತ್ವವನ್ನು ಅಳಿಸಿ ಹಾಕುವ ಹುನ್ನಾರ ನಡೆಯುತ್ತಿದೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಾಯಿತು. ಬೆಂಗಳೂರು ಗ್ರಾಮಾಂತರ… https://t.co/6JfvpQepfO












Click it and Unblock the Notifications