Lorry Strike in Karnataka : ಮಾರ್ಚ್ 17ರಿಂದ ಲಾರಿ ಮುಷ್ಕರ, ಅಗತ್ಯ ವಸ್ತುಗಳ ಸರಬರಾಜು ಬಂದ್
ಅಗತ್ಯ ವಸ್ತುಗಳ ಪೈರೂಕೆ ಸ್ಥಗಿತೊಗಳಿಸಿ, ಲಾರಿಗಳನ್ನು ನಿಲ್ಲಿಸಿ ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಮಾರ್ಚ್ 17ರಿಂದ ಮುಷ್ಕರಕ್ಕೆ ಕರೆ ನೀಡಿದೆ.
ಬೆಂಗಳೂರು, ಮಾರ್ಚ್ 14; ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಮಾರ್ಚ್ 17ರಿಂದ ಮುಷ್ಕರಕ್ಕೆ ಕರೆ ನೀಡಿದೆ. ಲಾರಿಗಳ ಸಂಚಾರ ನಿಲ್ಲಿಸಿ, ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಒಕ್ಕೂಟ ಹೇಳಿದೆ. ಇದರಿಂದಾಗಿ ಹಾಲು, ತರಕಾರಿ, ದಿನಸಿ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅನೇಕ ವಸ್ತುಗಳ ಕೊರತೆ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕುವ ನಿರೀಕ್ಷೆ ಇದೆ.
ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜಿ. ಆರ್. ಷಣ್ಮುಗಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ಸರಕು ಸಾಗಣೆ ವಾಹನಗಳ ಪ್ರವೇಶ ರದ್ದು ಪಡಿಸಿರುವುದನ್ನು ಖಂಡಿಸಿ ಮಾರ್ಚ್ 17ರ ಮಧ್ಯರಾತ್ರಿಯಿಂದ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ವಾಣಿಜ್ಯ ವಾಹನಗಳ ಎಫ್‌ಸಿ ನವೀಕರಣಕ್ಕೆ ಕ್ಯೂ ಆರ್ ಕೋಡ್ ಇರುವ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಿಕೊಂಡು ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ. ಮಾರುಕಟ್ಟೆಯಲ್ಲಿ 1 ಮೀಟರ್ ರೆಟ್ರೋ ರಿಫ್ಲೆಕ್ಟರ್ ಟೇಪುಗಳಿಗೆ 60 ರಿಂದ 70 ರೂ. ತನಕ ದರವಿದೆ. ಆದರೆ 1 ಮೀ. ಕ್ಯೂಆರ್ ಕೋಡ್ ಟೇಪ್‌ಗೆ 120 ರೂ. ದರ ನಿಗದಿ ಮಾಡಲಾಗಿದೆ. ಟೇಪ್ ಅಳವಡಿಕೆ ಮಾಡಲು 4 ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಒಕ್ಕೂಟ ಆರೋಪ ಮಾಡಿದೆ.
ಸರ್ಕಾರ ವಾಹನದ ಮಾಲೀಕರನ್ನು ಸುಳಿಗೆ ಮಾಡಲು ಹೊರಟಿದೆ. ಸರ್ಕಾರ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಒತ್ತಾಯಿಸಿದೆ. ಸರ್ಕಾರ ತನ್ನ ಆದೇಶ ವಾಪಸ್ ಪಡೆಯದಿದ್ದರೆ ಅಗತ್ಯ ವಸ್ತುಗಳ ಪೂರೈಕೆ ಬಂದ್ ಮಾಡಿ, ಲಾರಿ ನಿಲ್ಲಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ. ವಾಹನಗಳಿಗೆ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಿಕೊಂಡು ಬರುವಂತೆ ಮಾಡಿರುವ ಆದೇಶವನ್ನು ಪಾಲಿಸಲು ನಾವು ಸಿದ್ಧರಿದ್ದೇವೆ. ಆದರೆ ಕ್ಯೂ ಆರ್ ಕೋಡ್ ಆಧಾರಿತ ರಿಫ್ಲೆಕ್ಟರ್ ಟೇಪ್ ಅಳವಡಿಕೆಗೆ ವಿರೋಧವಿದೆ ಎಂದು ಲಾರಿ ಮಾಲೀಕರು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಸಮಯವೆಂದು ದಿನದ 10 ಗಂಟೆಯ ಕಾಲ 6 ಚಕ್ರದ ವಾಹನಗಳಿಗೆ ಸಂಚಾರ ನಡೆಸಲು ಅವಕಾಶ ನೀಡುತ್ತಿಲ್ಲ. ಇದನ್ನು ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಖಂಡಿಸುತ್ತದೆ. ಕೂಡಲೇ ಸರ್ಕಾರವು ಆರು ಚಕ್ರದ ವಾಹನಗಳಿಗೆ ವಿಧಿಸಿರುವ ಈ ನಿಯಮವನ್ನು ರದ್ದುಪಡಿಸಬೇಕು ಎಂದು ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದೆ.
ಬೆಂಗಳೂರು-ಮೈಸೂರು ರಸ್ತೆ; ಜಿ. ಆರ್. ಷಣ್ಮುಗಪ್ಪ ಮಾತನಾಡಿ, "ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ರಸ್ತೆ ಅಪಘಾತದಲ್ಲಿ 82 ಜನರು ಸಾವನ್ನಪ್ಪಿದ್ದಾರೆ. ಆದ್ದರಿಂದ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ನಿಧಾನವಾಗಿ ಚಲಿಸುವ ಟ್ರಾಕ್ಟರ್, ಆಟೋಗಳ ಸಂಚಾರಕ್ಕೆ ಅನುಮತಿ ನೀಡಬಾರದು. ಈ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಓಡಾಡುವ ನಿಯಮ ತಂದು ಅದನ್ನು ಕಡ್ಡಾಯಗೊಳಿಸಬೇಕು" ಎಂದು ಒತ್ತಾಯಿಸಿದರು.
"ನಗರದ ರಿಂಗ್ ರಸ್ತೆಯಲ್ಲಿ ಸುಮಾರು 10 ವರ್ಷಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇದು ಈಗಾಗಲೇ ರಸ್ತೆ ನಿರ್ಮಾಣಕ್ಕೆ ಮಾಡಿದ ವೆಚ್ಚಕ್ಕಿಂತ ಹೆಚ್ಚಾಗಿದೆ. ಆದರೂ ಸಹ ಟೋಲ್ ದರವನ್ನು ಹೆಚ್ಚಳ ಮಾಡಿ ಹಗಲು ದರೋಡೆ ಮಾಡಲಾಗುತ್ತಿದೆ. ಆರು ತಿಂಗಳಿನಿಂದ ತುಮಕೂರು ರಸ್ತೆ-ಹೊಸೂರು ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ. ವಾಹನಗಳ ಸಂಚಾರ ಏಕಮುಖವಾಗಿದೆ. ಆದರೂ ಸಹ ಟೋಲ್ ಸಂಗ್ರಹ ಮಾಡಲಾಗುತ್ತಿದೆ" ಎಂದು ಜಿ. ಆರ್. ಷಣ್ಮುಗಪ್ಪ ಆರೋಪಿಸಿದರು.












Click it and Unblock the Notifications