ಶೀಘ್ರ ರೈಲ್ವೆ ಪ್ರಯಾಣ ದರ ಹೆಚ್ಚಳ : ಖರ್ಗೆ

ಗುಲ್ಬರ್ಗದಲ್ಲಿ ಮಂಗಳವಾರ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಸರಕು ಸಾಗಣೆದರ ಹೆಚ್ಚಿಸುವ ಜೊತೆಗೆ, ಸೂಪರ್ ಫಾಸ್ಟ್, ಎಸಿ ಮತ್ತು ಇತರೆ ಪ್ರಯಾಣದರಗಳನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಡೀಸೆಲ್ ದರ ಹೆಚ್ಚಳ ಮತ್ತು ನಿರ್ವಣಾ ವೆಚ್ಚ ಹೆಚ್ಚಾಗಿರುವ ಕಾರಣ ಇಲಾಖೆಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಖರ್ಗೆ ವಿವರಿಸಿದರು. ಆದರೆ, ಜನ ಸಾಮಾನ್ಯರಿಗೆ ಪ್ರಯಾಣ ದರ ಬಿಸಿ ತಟ್ಟದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಶತಾಬ್ದಿ, ತುರಂತ್, ಜಯಂತಿ, ರಾಜಧಾನಿ ಮೊದಲಾದ ರೈಲುಗಳ ಜತೆಗೆ ಎಸಿ ಪ್ರಯಾಣ ದರವನ್ನು ಹೆಚ್ಚಿಸಲಾಗುವುದು. ಆದರೆ, ಪ್ರಯಾಣದರ ಎಷ್ಟು ಹೆಚ್ಚಳ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ ಎಂದು ಖರ್ಗೆ ಹೇಳಿದರು.
ಜನಸಾಮಾನ್ಯರು ಓಡಾಡುವ ಪ್ಯಾಸೆಂಜರ್ ರೈಲಿನ ದರವನ್ನು ಹೆಚ್ಚಳ ಮಾಡುವುದಿಲ್ಲ. ಸರಕು ಸಾಗಣೆ ದರವನ್ನು ಮಾತ್ರ ಏರಿಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಮುಂದಿನ ವಾರ ನವದೆಹಲಿಯಲ್ಲಿ ನಡೆಯಲಿರುವ ಇಲಾಖೆಯ ಸಭೆಯಲ್ಲಿ ದರ ಹೆಚ್ಚಳದ ಕುರಿತು ಚರ್ಚಿಸಲಾಗುವುದು ಎಂದರು.
ಕರ್ನಾಟಕಕ್ಕೆ ನಾಲ್ಕು ಹೊಸ ರೈಲು : ಬೆಂಗಳೂರು-ಅಜ್ಮೀರ್ ಹಾಗೂ ಬೆಂಗಳೂರು-ವೈಷ್ಣೋದೇವಿ ಸೇರಿದಂತೆ ನಾಲ್ಕು ಹೊಸ ರೈಲುಗಳ ಸೇವೆಯನ್ನು ಕರ್ನಾಟಕದಲ್ಲಿ ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬೆಂಗಳೂರು-ಗುಲ್ಬರ್ಗ-ನಾಗಪುರ-ವೈಷ್ಣೋದೇವಿ (ಜಮ್ಮು-ಕಾಶ್ಮೀರ) ಮತ್ತು ಬೆಂಗಳೂರು-ಗುಲ್ಬರ್ಗ- ಅಜ್ಮೀರ್ (ರಾಜಸ್ಥಾನ) ನಡುವೆ ಹೊಸ ರೈಲುಗಳನ್ನು ಆರಂಭಿಸಲು ರೈಲ್ವೆ ಮಂಡಳಿ ಸಹಮತ ವ್ಯಕ್ತಪಡಿಸಿದೆ ಎಂದು ಅವರು ಮಾಹಿತಿ ನೀಡಿದರು.
ಸೊಲ್ಲಾಪುರ-ಯಶವಂತಪುರ ನಿತ್ಯ ಓಡುವ ರೈಲು ಅಲ್ಲದೆ, ಗುಲ್ಬರ್ಗದಿಂದ ಬೆಂಗಳೂರಿನವರೆಗೂ ಹೊಸ ರೈಲು ಓಡಿಸುವ ಉದ್ದೇಶ ಇದೆ. ಗುಲ್ಬರ್ಗದಿಂದ ಅಜ್ಮೀರ್‌ಗೆ ನೇರ ರೈಲು ಸಂಪರ್ಕ ಕಲ್ಪಿಸುವ ಬಹುದಿನದ ಬೇಡಿಕೆಯೂ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.












Click it and Unblock the Notifications