2023ರ ಚುನಾವಣೆ; ಮುಂದೆ ಕಾದಿದೆಯಾ ರಾಜ್ಯ ಕಾಂಗ್ರೆಸ್‌ಗೆ ಸಂಕಷ್ಟ?
ಬೆಂಗಳೂರು, ಜೂನ್ 02; ಮುಂದಿನ 2023ರ ವಿಧಾನಸಭಾ ಚುನಾವಣೆ ವೇಳೆಗೆ ರಾಜ್ಯ ಕಾಂಗ್ರೆಸ್ ಸಂಘಟನೆಗೊಂಡು ಬಿಜೆಪಿ ನಾಯಕರ ಬೆವರಿಳಿಸಬಹುದೆಂದು ಜನ ನಂಬಿದ್ದರು. ಆದರೀಗ ಅದು ನಾಯಕರ ನಡುವಿನ ತಿಕ್ಕಾಟ ಮತ್ತು ಎರಡು ಬಣಗಳ ಕಿತ್ತಾಟದಿಂದ ನಲುಗಿ ಹೋಗುತ್ತಿದೆ.
ಇದೆಲ್ಲದರ ಪರಿಣಾಮ ಪಕ್ಷದಲ್ಲಿದ್ದರೆ ತಮಗೆ ಉಳಿಗಾಲವಿಲ್ಲವೆಂದು ಕೆಲವು ನಾಯಕರು ಬೇರೆ ಪಕ್ಷಗಳತ್ತ ಮುಖ ಮಾಡಲು ಆರಂಭಿಸಿದ್ದಾರೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸುವುದರೊಂದಿಗೆ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಚುರುಕು ಮೂಡಿಸಿದ್ದರು.
ಡಿ. ಕೆ. ಶಿವಕುಮಾರ್ ಮುಖಂಡರಿಗೆ ಅವರು ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಟಿಕೆಟ್ ಕೇಳುವ ಮುನ್ನ ನಿಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿ ತೋರಿಸಿ, ಪಕ್ಷ ಸಂಘಟಿಸಿ ಆಗ ನಾವೇ ನಿಮಗೆ ಟಿಕೆಟ್ ನೀಡುತ್ತೇವೆ ಎಂಬಂತಹ ಖಡಕ್ ಮಾತುಗಳನ್ನು ಆಡಿದ್ದರು.
ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತಿದೆ ಎಂಬ ಚಿತ್ರಣ ಕಂಡುಬರುತ್ತಿದೆ. ಆಡಳಿತಾರೂಢ ಬಿಜೆಪಿ ಚುನಾವಣೆ ತಯಾರಿಯನ್ನು ಚುರುಕುಗೊಳಿಸಿದೆ. ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿನ ನಾಯಕರ ಪ್ರತಿಷ್ಠೆಗಳು ಮುಂದೆ ಪಕ್ಷದ ನಾಯಕರಿಗೆ ಸಂಕಷ್ಟ ತರಲಿದೆಯೇ? ಎಂದು ಕಾದು ನೋಡಬೇಕು.

ರಾಜ್ಯದಲ್ಲಿ ಅಧಿಕಾರ ಹಿಡಿಯುವ ರಣವೀಳ್ಯ
ಕೆಪಿಸಿಸಿಗೆ ಡಜನ್ ಗಟ್ಟಲೆ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ನಾಯಕರಿಗೆ ಅಸಮಾಧಾನವಾಗದಂತೆ ನೋಡಿಕೊಂಡ ಡಿ. ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಎಂ. ಬಿ. ಪಾಟೀಲ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕಾರ್ಯಕರ್ತರು ಮತ್ತು ಮುಖಂಡರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸುವ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸಿದರಲ್ಲದೆ, ಆ ಮೂಲಕ ಹೈಕಮಾಂಡ್ ಮೆಚ್ಚುಗೆ ಪಡೆಯುವ ಪ್ರಯತ್ನ ಮಾಡಿದ್ದರು.

ರಾಷ್ಟ್ರಮಟ್ಟದ ಬೆಳವಣಿಗೆಗಳು
ಇದೆಲ್ಲದರ ನಡುವೆ ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ಕಾಲ ನಡೆದ ಚಿಂತನಾ ಶಿಬಿರದಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಮುಂದೆ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಪಡೆದು ಅಧಿಕಾರ ಹಿಡಿಯುವ ರಣವೀಳ್ಯ ಪಡೆದು ರಾಜ್ಯ ನಾಯಕರು ಬಂದಿದ್ದರು. ಆದರೆ ಇದೀಗ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಭಾರೀ ಸಂಕಷ್ಟಗಳನ್ನು ಎದುರಿಸುವ ಲಕ್ಷಣಗಳು ಕಂಡು ಬರುತ್ತಿದೆ.

ಕಾಂಗ್ರೆಸ್ ನಿಂದ ಗುಳೆ ಹೊರಟ ನಾಯಕರು
ರಾಜ್ಯದಲ್ಲಿ ಇದೀಗ ಘೋಷಣೆಯಾಗಿರುವ ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗಳು ಕಾಂಗ್ರೆಸ್ ಪಾಲಿಗೆ ಕಂಟಕವಾಗಿದೆ. ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡುವಲ್ಲಿ ವಿಫಲವಾಗಿದೆ. ರಾಜ್ಯಸಭೆಯ ಕಥೆಯೂ ಭಿನ್ನವಾಗಿಲ್ಲ. ಈಗಾಗಲೇ ಅಸಮಾಧಾನ ಭುಗಿಲೆದ್ದಿದ್ದು ಒಂದಷ್ಟು ನಾಯಕರು ತಮ್ಮ ಆಕ್ರೋಶವನ್ನು ಸಾರ್ವಜನಿಕವಾಗಿಯೇ ಹೊರಹಾಕಲು ಆರಂಭಿಸಿದ್ದಾರೆ. ಇದು ಪಕ್ಷಕ್ಕೆ ಆಗುತ್ತಿರುವ ಅವಮಾನ ಎಂದರೆ ತಪ್ಪಾಗಲಾರದು.
ಇದುವರೆಗೆ ಕೇಂದ್ರ ಹಾಗೂ ರಾಜ್ಯ ಸೇರಿದಂತೆ ಹಿರಿಯರು ಮತ್ತು ಅನುಭವಿಗಳಾದ ಕಪಿಲ್ ಸಿಬಲ್, ಆರ್ ಪಿಎನ್ ಸಿಂಗ್, ಅಶ್ವಿನಿ ಕುಮಾರ್, ಹಾರ್ದಿಕ್ ಪಟೇಲ್, ಸಿ. ಎಂ. ಇಬ್ರಾಹಿಂ, ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಜತೆಜತೆಯಲ್ಲಿಯೇ ಎಸ್. ಆರ್. ಪಾಟೀಲ್, ಕವಿತಾ ರೆಡ್ಡಿ, ಸುದರ್ಶನ್, ಲಕ್ಷ್ಮಿ ನಾರಾಯಣ್ ಸೇರಿದಂತೆ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಈ ಅಸಮಾಧಾನಗಳು ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಇನ್ನಷ್ಟು ಜಾಸ್ತಿಯಾದರೆ ಅಚ್ಚರಿಪಡಬೇಕಾಗಿಲ್ಲ.

ಫಲ ಕಾಣದ ಡಿಕೆಶಿಯ ಒಗ್ಗಟ್ಟಿನ ಮಂತ್ರ
ಹಲವು ಸಂದರ್ಭಗಳಲ್ಲಿ ಎಲ್ಲ ನಾಯಕರುನ್ನು ಒಂದೇ ವೇದಿಕೆಗೆ ತಂದು ಆಗಾಗ್ಗೆ ನಾವು ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರ್ಪಡಿಸುವ ಪ್ರಯತ್ನಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾಡುತ್ತಿದ್ದರೂ ಸಿಎಂ ಅಭ್ಯರ್ಥಿ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದ್ದು, ಆಗಾಗ್ಗೆ ಬೆಂಬಲಿಗರು ಅದನ್ನು ಸಾರ್ವಜನಿಕವಾಗಿ ಘೋಷಿಸುತ್ತಿದ್ದಾರೆ. ಈ ನಡುವೆ ಎರಡು ಬಣಗಳ ನಡುವೆ ಸಿಕ್ಕಿ ಹಾಕಿಕೊಂಡಿರುವ ಕಾರ್ಯಕರ್ತರಿಗೆ ದಿಕ್ಕು ಕಾಣದಂತಾಗಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ಶೀತಲ ಸಮರ ಹೀಗೆಯೇ ಮುಂದುವರೆದರೆ ಅದರ ಪರಿಣಾಮ ಪಕ್ಷದ ಮೇಲಾಗುತ್ತದೆ. ಲಾಭ ಬಿಜೆಪಿಗೆ ಆಗುತ್ತದೆ ಎಂಬುದಂತು ಸತ್ಯ.
ಇನ್ನು ಮುಖ್ಯವಾಗಿ ಗಮನಿಸಬೇಕಾದ ಮುಖ್ಯ ವಿಚಾರ ಏನೆಂದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ ಜೆಡಿಎಸ್ ಅಪಾಯಕಾರಿಯಾಗಿದೆ. ಜೆಡಿಎಸ್ ಮುಖಂಡರು ಕಾಂಗ್ರೆಸ್ ಅನ್ನು ಟೀಕಿಸುತ್ತಾ, ಆರೋಪಿಸುತ್ತಾ ಅಡ್ಡಗಾಲು ಹಾಕುತ್ತಾ ಹೋದರೆ ಅದರ ಲಾಭ ಬಿಜೆಪಿಗೆ ಆಗುತ್ತದೆ. ಈಗಾಗಲೇ ಎಚ್. ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳು ಕಾಂಗ್ರೆಸ್ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಮುಂದಿನ ಚುನಾವಣೆ ಹೊತ್ತಿಗೆ ಜೆಡಿಎಸ್ ಮೆದುಧೋರಣೆ ತಾಳುವಂತೆ ಮಾಡಲು ಕಾಂಗ್ರೆಸ್‌ಗೆ ಅವಕಾಶವಿತ್ತು.

ಕಾಂಗ್ರೆಸ್ ಗೆ ಬಿಜೆಪಿಗಿಂತ ಜೆಡಿಎಸ್ ಅಪಾಯಕಾರಿ
ಈ ಸಂಬಂಧವಾಗಿ ಡಿ. ಕೆ. ಶಿವಕುಮಾರ್ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ಬೆಂಬಲಿಸುವ ತೀರ್ಮಾನಕ್ಕೂ ಬಂದಿದ್ದರು. ಆದರೆ ಕೊನೆಯ ದಾಳ ಉರುಳಿಸಿದ ಸಿದ್ದರಾಮಯ್ಯ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಡಿಕೆಶಿ ಮತ್ತು ಜೆಡಿಎಸ್‌ಗೆ ಟಕ್ಕರ್ ನೀಡಿದ್ದಾರೆ. ಆ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದು ಗೆಲುವಿನ ನಗು ಬೀರಿದ್ದಾರೆ. ಆದರೆ ಇದರ ಪರಿಣಾಮಗಳು ಮುಂದೆ ಗೊತ್ತಾಗಲಿದೆ.
ಒಟ್ಟಾರೆ ಹೇಳಬೇಕೆಂದರೆ ರಾಜ್ಯ ಕಾಂಗ್ರೆಸ್ ನ ಪರಿಸ್ಥಿತಿ ನೆಟ್ಟಗಿರುವಂತೆ ಕಂಡು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ವಿರೋಧದ ನಡುವೆ ಪಕ್ಷದೊಳಗಿನ ಅಸಮಾಧಾನ ಹತ್ತಿಕ್ಕುವ ಮೂಲಕ ಚುನಾವಣೆಗೆ ಹೇಗೆ ತಯಾರಾಗುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.












Click it and Unblock the Notifications