ಅಪರಾಧ ಸುದ್ದಿ: ತೀರ್ಥಹಳ್ಳಿ: ಪ್ರೀತಿಗೆ ನಿರಾಕರಣೆ; ಯುವತಿಗೆ ಚಾಕು ಇರಿತ, ನರಸಿಂಹರಾಜಪುರದಲ್ಲಿ ಆನೆ ದಾಳಿಗೆ 8 ಜನ ಬಲಿ
ತೀರ್ಥಹಳ್ಳಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯ ಮೇಲೆ ಬಿಯರ್ ಬಾಟಲಿಯಿಂದ ಚುಚ್ಚಿ, ಹಲ್ಲೆ ಮಾಡಿದ ಘಟನೆ ತೀರ್ಥಹಳ್ಳಿ ಭಾಗದಲ್ಲಿ ನಡೆದಿದೆ. ತೂದೂರು ಗ್ರಾಮದ ನಿವಾಸಿಯಾದ ಸ್ವರೂಪ್ ಕಳೆದ ಆರು ತಿಂಗಳಿನಿಂದ ಅಪೂರ್ವ ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಗೂ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಪ್ರೀತಿ ಮಾಡಲು ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಕೂಡ ಈ ಹಿಂದೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈಚೆಗೆ ಸ್ವರೂಪ್ ಇದ್ದಕ್ಕಿದ್ದಂತೆ ಅಪೂರ್ವಳ ಮನೆಗೆ ಬಂದಿದ್ದಾನೆ. ಇದಕ್ಕೆ ಅಪೂರ್ವ ಅವರ ತಾಯಿ ವಿರೋಧ ವ್ಯಕ್ತಪಡಿಸಿದ್ದರಿಂದ, ಸ್ವರೂಪ್ ಅಪೂರ್ವ ಅವರ ತಾಯಿಯನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ಮನೆಯ ಒಳಗಡೆ ಅಪೂರ್ವಳನ್ನು ಉಳಿಸಿಕೊಂಡು, ಬಾಗಿಲನ್ನು ಭದ್ರಪಡಿಸಿ ತಾನು ತಂದಿದ್ದ ಬಿಯರ್ ಬಾಟಲಿಯಿಂದ ಅಪೂರ್ವಳ ಕತ್ತಿನ ಭಾಗ, ಹೊಟ್ಟೆ, ಬೆನ್ನು ಭಾಗಕ್ಕೆ ಮನಸೋಇಚ್ಛೆ ಚುಚ್ಚಿ, ಆಕೆಯನ್ನು ಗಾಯಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಅಪೂರ್ವ ಅವರ ತಂದೆ ಸುಧಾಕರ್ ಅವರು ಬಾಗಿಲನ್ನು ಒಡೆದುಕೊಂಡು, ಮನೆಯೊಳಗೆ ಬಂದು ಅಪೂರ್ವಳ ರಕ್ಷಣೆ ಮಾಡಿದ್ದು, ಸ್ವರೂಪ್ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಅಪೂರ್ವಳನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸ್ವರೂಪ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ನರಸಿಂಹರಾಜಪುರ: ಆನೆ ದಾಳಿಗೆ ಎಂಟು ಜನ ಬಲಿ!
ನರಸಿಂಹರಾಜಪುರ: ಕೊಪ್ಪ ಅರಣ್ಯ ವಿಭಾಗ ವ್ಯಾಪ್ತಿಯ ಹುಣಸೆಹಳ್ಳಿ - ಮಲ್ಲಿಗೆಖಾನ್ ಎನ್ನುವ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಹಾವೇರಿ ಮೂಲದ ಎಂಟು ಜನ ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ವರ್ಷವೇ ಜಿಲ್ಲೆಯಲ್ಲಿ 8 ಜನ ಬಲಿ ಆಗಿದ್ದಾರೆ.
ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಸುಧಾಕರ್ ಎಸ್ ಶೆಟ್ಟಿ ಅವರು, ಅರಣ್ಯ ಇಲಾಖೆಗಳಿಗೂ ಆನೆಗಳ ಓಡಾಟ, ಅವುಗಳ ತಾಣಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿದ್ದರೂ ಕೂಡ ನಿರ್ಲಕ್ಷ್ಯ ವಹಿಸುತ್ತಿರುವುದು ದುರಂತ. ಕೇವಲ 20ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿ ಸುಮ್ಮನಿರುವುದು ಸರಿಯಲ್ಲ. ಸಾವಿಗೀಡಾದ ರೈತರಿಗೆ ಹಾಗೂ ಕಾರ್ಮಿಕ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂಪಾಯಿಗಳ ಪರಿಹಾರವನ್ನಾದರೂ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.












Click it and Unblock the Notifications