DK Shivakumar: ನಾಯಕತ್ವ ಬದಲಾವಣೆ; ಕಾಲವೇ ಉತ್ತರ ನೀಡುತ್ತದೆ: ಡಿ ಕೆ ಶಿವಕುಮಾರ್ ಮಾತಿನ ಮರ್ಮವೇನು?
ದೆಹಲಿ: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ತೀರ್ಮಾನದ ಚೆಂಡು ಸದ್ಯ ದೆಹಲಿಗೆ ಅಂಗಳದಲ್ಲಿದೆ. ಆದರೆ ಈವರೆಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾಡಿಲ್ಲ. ಬದಲಿಗೆ ನಮಗೆ ಬಿಡಿ ಎನ್ನುತ್ತಾ ಸಣ್ಣ ಗೆರೆಯನ್ನಷ್ಟೇ ಎಳೆದಿದ್ದಾರೆ. ಈ ಮಧ್ಯೆ ಸಿಎಂ ಪಟ್ಟಕ್ಕಾಗಿ ಕಾದುಕುಳಿತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ. ಹೈಕಮಾಂಡ್ ಮೇಲೆ ಡಿಕೆ ಶಿವಕುಮಾರ್ ಆತ್ಮವಿಶ್ವಾಸದ ಮಾತುಗಳನ್ನಾಡಿದ ಬೆನ್ನಲ್ಲೇ ಕಾಂಗ್ರೆಸ್ ಪಡಸಾಲೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಕಳೆದ ವಾರವಷ್ಟೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು, ಇದೀಗ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿರುವ ಡಿ ಕೆ ಶಿವಕುಮಾರ್ ಪ್ರತಿಯೊಂದಕ್ಕೂ ಸಮಯವೇ ಉತ್ತರಿಸುತ್ತದೆ ಎಂಬ ಹೇಳಿಕೆ ಸಹಜವಾಗಿ ಕುತೂಹಲ ಕೆರಳುವಂತೆ ಮಾಡಿದೆ.

ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಕಾಲವೇ ಉತ್ತರ ನೀಡುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸಮಯವೇ ಪ್ರತಿಯೊಂದಕ್ಕೂ ಉತ್ತರಿಸುತ್ತದೆ. ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ನಾನು ಅದನ್ನು ಏಕೆ ಬಹಿರಂಗಗೊಳಿಸಬೇಕು. ನಾವು ಇಲ್ಲಿಗೆ ಬರುವುದೇ ಸರ್ಕಾರದ ಕೆಲಸಕ್ಕೆ ಪಕ್ಷದ ಕೆಲಸಕ್ಕೆ, ನಮ್ಮ ರಾಜಕೀಯಕ್ಕೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಇದ್ದಾರೆ ಎಂದರೆ ಹೈಕಮಾಂಡ್ ಭೇಟಿ ಚರ್ಚೆ ರಾಜ್ಯದಲ್ಲಿ ನಡೆಯುತ್ತಿದೆ ಎನ್ನುವ ಕುರಿತು ಮಾತನಾಡಿ, ನಾವು ರಾಜಕಾರಣಿಗಳು. ರಾಜಕಾರಣಿಗಳು ಏನು ರಾಜಕಾರಣ ಮಾಡಬೇಕೋ ಅದನ್ನು ಎಲ್ಲಾ ರಾಜಕಾರಣಿಗಳು ಮಾಡುತ್ತಾರೆ. ಇದರಲ್ಲಿ ಏನೂ ತಪ್ಪಿಲ್ಲ. ನಾವುಗಳು ನಮ್ಮ ಅನುಕೂಲಕ್ಕೆ ಯಾರನ್ನು ಭೇಟಿ ಮಾಡುಬೇಕೋ ಅವರನ್ನು ಕೇಳಿರುತ್ತೇವೆ, ಭೇಟಿ ಮಾಡುತ್ತೇವೆ. ನೀವು (ಮಾಧ್ಯಮಗಳು) ಏಕೆ ಇದನ್ನು ದೊಡ್ಡದು ಮಾಡುತ್ತೀರಿ ಎಂದರು.
ನರೇಗಾ ವಿಚಾರವಾಗಿ ನಡೆದ ಸಭೆಯ ಬಗ್ಗೆ ಮಾತನಾಡಿ, ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಪ್ರತಿ ಕ್ಷೇತ್ರದಲ್ಲಿಯೂ ಐದು ಕಿ.ಮೀ. ಪಾದಯಾತ್ರೆ ನಡೆಸಲಾಗುವುದು. ಪಂಚಾಯತಿ ಮಟ್ಟದಲ್ಲಿ ರೆಸಲ್ಯೂಷನ್ ಹೊರಡಿಸಲಾಗುವುದು. ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಎಲ್ಲಾ ಪಿಸಿಸಿ ಅಧ್ಯಕ್ಷರುಗಳ ಸಭೆ ಕರೆಯಲಾಗಿತ್ತು. ನಾನು ಸಹ ಸಭೆಯಲ್ಲಿ ಪಾಲ್ಗೊಂಡಿದ್ದೆ. ಸಚಿವರಾದ ಪ್ರಿಯಾಂಕ್ ಖರ್ಗೆ ಅವರೂ ಭಾಗವಹಿಸಿದ್ದರು. ಪಾದಯಾತ್ರೆ ವಿಚಾರ ಹಾಗೂ ಹೋರಾಟ ಮಾದರಿ ಬಗ್ಗೆ ಈ ಮೊದಲೇ ತಿಳಿಸಲಾಗಿತ್ತು. ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಸಭೆಯಲ್ಲಿ ನೀಡಿದ ಆದೇಶಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ನಾವು ಹೋರಾಟ ಮಾಡುತ್ತೇವೆ. ಈಗಾಗಲೇ ಪಂಚಾಯತಿ ಸದಸ್ಯರುಗಳ ಸಭೆ ನಡೆಸಲಾಗಿದೆ. ಶಾಸಕರ, ವಿಧಾನಪರಿಷತ್ ಸದಸ್ಯರ, ಪಕ್ಷದ ಪದಾಧಿಕಾರಿಗಳ, ಸಂಸದರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಲಾಗಿದೆ. ಸಂಘಟನಾ ಕಾರ್ಯದರ್ಶಿಯವರು, ಉಸ್ತುವಾರಿಗಳು ರಾಜ್ಯಕ್ಕೆ ಭೇಟಿ ನೀಡುವ ಸೂಚನೆ ನೀಡಿದ್ದಾರೆ ಎಂದರು.












Click it and Unblock the Notifications