ಗುಂಡ್ಲುಪೇಟೆಯಲ್ಲಿ ಹುಲಿ ದಾಳಿಗೆ ರೈತ ಬಲಿ
ಚಾಮರಾಜನಗರ, ಡಿ. 27 : ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ನಾಲ್ವರನ್ನು ಬಲಿ ಪಡೆದ ಹುಲಿಯನ್ನು ಸೆರೆ ಹಿಡಿದ ಘಟನೆ ನೆನಪಿನಲ್ಲಿರುವಾಗಲೇ, ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿ ಹುಲಿಯೊಂದು ದನ ಕಾಯುತ್ತಿದ್ದ ವ್ಯಕ್ತಿಯನ್ನು ಕೊಂದು ಹಾಕಿದೆ. ಮತ್ತೊಬ್ಬರು ಹುಲಿ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮದ್ದೂರು ಕಾಲೋನಿಯ ಅರಣ್ಯದಂಚಿನಲ್ಲಿ ದನ ಮೇಯಿಸುತ್ತಿದ್ದ ಜವರಯ್ಯ (60) ಎಂಬುವವರ ಮೇಲೆ ಹುಲಿ ದಾಳಿ ಮಾಡಿದ್ದು, ಅವರನ್ನು ಸಂಪೂರ್ಣವಾಗಿ ತಿಂದು ಹಾಕಿದೆ. ಜವರಯ್ಯ ಅವರ ಕಾಲುಗಳು ಮಾತ್ರ ಉಳಿದಿದ್ದು, ಉಳಿದ ಭಾಗವನ್ನು ಹುಲಿ ತಿಂದು ಹಾಕಿದೆ.

ಶುಕ್ರವಾರ ಬೆಳಗ್ಗೆ ಜವರಯ್ಯ ಮತ್ತು ಗ್ರಾಮದ ಮತ್ತೊಬ್ಬರು ದನ ಕಾಯುತ್ತಿದ್ದ ವೇಳೆ ಹುಲಿ ದಾಳಿ ಮಾಡಿದೆ. ಮತ್ತೊಬ್ಬರು ಹುಲಿ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆದರೆ, ಜವರಯ್ಯ ಅವರನ್ನು ಹುಲಿ ಹಿಡಿದು ತಿಂದಿದೆ. ಹುಲಿ ದಾಳಿಯಿಂದ ತಪ್ಪಿಸಿಕೊಂಡ ವ್ಯಕ್ತಿ ಗ್ರಾಮಕ್ಕೆ ಬಂದು ಮಾಹಿತಿ ನೀಡಿದ್ದು, ನಂತರ ಅರಣ್ಯದ ಅಂಚಿನಲ್ಲಿ ಜವರಯ್ಯ ಕಾಲುಗಳು ಮಾತ್ರ ಪತ್ತೆಯಾಗಿದೆ. [ನರಭಕ್ಷಕ ವ್ಯಾಘ್ರನ ಬಗ್ಗೆ ಮತ್ತೊಂದಿಷ್ಟು ಮಾಹಿತಿ]
ಗ್ರಾಮಸ್ಥರು ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಜವರಯ್ಯನ ಮೃತದೇಹಕ್ಕಾಗಿ ಹುಡುಕಾಟ ಆರಂಭವಾಗಿದೆ. ಗ್ರಾಮಸ್ಥರಿಗೆ ಅಧಿಕಾರಿಗಳು ಕಾಡಿಗೆ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ.
ಡಿ.5ರಂದು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ನಾಲ್ವರನ್ನು ತಿಂದು ತೇಗಿದ್ದ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಸದ್ಯ ಆ ಹುಲಿ ಮೈಸೂರು ಮೃಗಾಲಯದಲ್ಲಿದೆ. ಈ ಘಟನೆ ನೆನಪಿನಲ್ಲಿರುವಾಗಲೇ ಮತ್ತೊಬ್ಬರು ಹುಲಿದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.


Click it and Unblock the Notifications
