ರೌಡಿ ಬೆದರಿಕೆ ಹಿನ್ನೆಲೆ: ಯುವತಿ ಮದುವೆಗೆ ಪೊಲೀಸ್ ಭದ್ರತೆಗೆ ಆದೇಶ
ಬೆಂಗಳೂರು, ಮೇ 08; ರೌಡಿ ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಮೇ 9 ಮತ್ತು 10ರಂದು ನಡೆಯುಲಿರುವ ಯುವತಿಯೊಬ್ಬಳ ಮದುವೆಗೆ ಭದ್ರತೆ ಕಲ್ಪಿಸುವಂತೆ ಕರ್ನಾಟಕ ಹೈಕೋರ್ಟ್ ಕೆಂಗೇರಿ ಪೊಲೀಸರಿಗೆ ನಿರ್ದೇಶಿಸಿದೆ. ಯುವತಿಯೊಬ್ಬರು ತನ್ನ ಮದುವೆಗೆ ಭದ್ರತೆ ಕಲ್ಪಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಎಸ್. ಸಂಜಯ ಗೌಡ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರೆಯ ಮದುವೆ ನಗರದ ಹೋಟೆಲ್‌ವೊಂದರಲ್ಲಿ ಮೇ 9 ಮತ್ತು 10ರಂದು ನಡೆಯಲಿದೆ. ತಂದೆಯ ವ್ಯಾಪಾರದಲ್ಲಿ ಪಾಲುದಾರನಾದ ಕೆ. ಶಿವರಾಜ್ ಗೌಡ, ಹಣಕಾಸು ವಿವಾದವನ್ನು ಮುಂದಿಟ್ಟುಕೊಂಡು ತನ್ನ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೂ ಮದುವೆ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯ ಕೆಂಗೇರಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ನಿರ್ದೆಶನ ನೀಡಿತು. ಅಲ್ಲದೆ, ಇನ್ಸ್‌ಪೆಕ್ಟರ್ ತಮ್ಮ ಭರವಸೆಗೆ ಬದ್ಧವಾಗಿರಬೇಕು ಎಂದು ಸೂಚಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿದೆ.

ಅರ್ಜಿದಾರರ ವಾದ; ಅರ್ಜಿದಾರೆಯ ಪರ ವಕೀಲರು, ಶಿವರಾಜ್‌ಗೌಡ 2014ರಿಂದ ಅರ್ಜಿದಾರೆಯ ತಂದೆ ಜೊತೆಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಹಣಕಾಸು ವಿಚಾರವಾಗಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಶಿವರಾಜ್‌ಗೌಡ, ಅರ್ಜಿದಾರೆಯ ಮನೆಗೆ ಬಂದು ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಅರ್ಜಿದಾರೆಯ ನಕಲಿ ಪೋಟೋಗಳನ್ನು ವರನ ಕಡೆಯವರಿಗೆ ತೋರಿಸಿ ಮದುವೆ ನಿಲ್ಲಿಸಲಾಗುವುದು ಮತ್ತು ಕಲ್ಯಾಣ ಮಂಟಪದಿಂದಲೇ ಅರ್ಜಿದಾರೆಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಾದಿಸಿದರು.
ಅಲ್ಲದೆ, ಶಿವರಾಜ್‌ಗೌಡ ಉದ್ದೇಶವನ್ನು ತಿಳಿದು ಅರ್ಜಿದಾರೆಯು ಮೇ 9 ಮತ್ತು 10ರಂದು ಮದುವೆ ನಡೆಯುವಾಗ ಭದ್ರೆತೆ ಕಲ್ಪಿಸುವಂತೆ ಕೋರಿ ಮೇ 1ರಂದು ಕೆಂಗೇರಿ ಠಾಣಾ ಪೊಲೀಸರಿಗೆ ಕೋರಿದ್ದಾರೆ. ಆ ಮನವಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಸರಕಾರಿ ವಕೀಲರು, ಪ್ರಕರಣದ ಕುರಿತು ಕೆಂಗೇರಿ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಮೇ 4ರಂದು ಬರೆದ ಪತ್ರವನ್ನು ಕೋರ್ಟ್‌ಗೆ ಹಾಜರುಪಡಿಸಿ, ಮೇ 9 ಮತ್ತು 10ರಂದು ಠಾಣಾ ವ್ಯಾಪ್ತಿಯಲ್ಲಿಎರಡು ಹೊಯ್ಸಳ ವಾಹನವನ್ನು ಗಸ್ತಿಗೆ ನಿಯೋಜಿಸಲಾಗಿರುತ್ತದೆ. ಒಂದು ವೇಳೆ ವಿವಾಹ ನಡೆಯುವಾಗ ಯಾವುದೇ ವ್ಯಕ್ತಿಯಿಂದ ತೊಂದರೆಯಾದರೆ ತಕ್ಷಣವೇ 112ಗೆ ಕರೆ ಮಾಡಬಹುದು. ಆಗ ಹೊಯ್ಸಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಸೂಕ್ತ ಕ್ರಮ ಜರುಗಿಸುತ್ತಾರೆ ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications