Janata Darshana: ಕೆಲಸ ಕೊಡಿಸಿ ಸ್ವಾಮಿ.. ಕೆಲಸ ಕೊಡಿಸಿ!
'ಜನತಾ ದರ್ಶನ' ಕಾರ್ಯಕ್ರಮದ ಮೂಲಕ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ. ಕನ್ನಡಿಗರ ಈ ಕಾರ್ಯಕ್ರಮವನ್ನು ದೇಶದ ಹಲವು ರಾಜ್ಯಗಳು ಅಳವಡಿಸಿಕೊಂಡಿವೆ. ಹೀಗೆ ನಮ್ಮದೇ ರಾಜ್ಯದ ಕಾರ್ಯಕ್ರಮವನ್ನ ಮರೆಯಲು ಸಾಧ್ಯವಾ? ಇಲ್ಲ, ಹೀಗಾಗಿಯೇ ಇಂದು ಹಾಲಿ ಸಿಎಂ ಸಿದ್ದರಾಮಯ್ಯ ಅವರು 'ಜನತಾ ದರ್ಶನ' ನಡೆಸಿದ್ರು. ಹೀಗೆ ಸಿಎಂ ನಡೆಸಿದ ಜನತಾ ದರ್ಶನದಲ್ಲಿ ಅತಿಹೆಚ್ಚು ಜನರ ಬೇಡಿಕೆ ಏನಾಗಿತ್ತು ಗೊತ್ತಾ?
'ಕೊರೊನಾ' ಕಂಟಕ ಇಡೀ ಜಗತ್ತನ್ನ ಕಾಡಿದ್ದು, ಭಾರತೀಯರು ಕೂಡ ಈ ಮಹಾಮಾರಿ ಕಾಟಕ್ಕೆ ಬೆಚ್ಚಿಬಿದ್ದಿದ್ದರು. ಹೀಗಾಗಿಯೇ ಲಕ್ಷಾಂತರ ಜನರು ಕೆಲಸ ಕಳೆದುಕೊಂಡರು. ಹೀಗೆ ಹಲವರ ಬದುಕು ಬೀದಿಗೆ ಬಿದ್ದಿದೆ. ಹೀಗಿದ್ದಾಗ ಉದ್ಯೋಗ ಬೇಕು ಎನ್ನುವವರ ಸಂಖ್ಯೆಯು ಹೆಚ್ಚಾಗಿದೆ. ಈಗ ಇಂದು ಸಿಎಂ ಸಿದ್ದರಾಮಯ್ಯ ಅವರು, ರಾಜಧಾನಿ ಬೆಂಗಳೂರಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿರುವ 'ಜನತಾ ದರ್ಶನ' ಕಾರ್ಯಕ್ರಮದಲ್ಲೂ ಕೂಡ ಕೆಲಸ ಕೇಳಿ ಮನವಿ ಸಲ್ಲಿಸಿದವರ ಸಂಖ್ಯೆಯೇ ಹೆಚ್ಚಾಗಿತ್ತಂತೆ.

ಜನರ ವಿಶ್ವಾಸ ಉಳಿಸಿಕೊಳ್ಳುತ್ತೇವೆ!
'ಜನತಾ ದರ್ಶನ' ಕಾರ್ಯಕ್ರಮದ ನಂತರ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಜನಸ್ಪಂದನ ಕಾರ್ಯಕ್ರಮಕ್ಕೆ 4-5 ಸಾವಿರ ಜನ ತಮ್ಮ ಅಹವಾಲುಗಳ ಜೊತೆಗೆ ಆಗಮಿಸಿದ್ರು. ಜನರು ನಮ್ಮ ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತೆ. ಹೀಗಾಗಿ ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಜನಸ್ಪಂದನೆ ಕಾರ್ಯಕ್ರಮಕ್ಕೆ ನಿರೀಕ್ಷೆಗೆ ಮೀರಿ ಜನ ಆಗಮಿಸಿದ್ದರು ಎಂದರು. ಸುಮಾರು 3500 ಮನವಿ ಸ್ವೀಕೃತವಾಗಿದೆ. ಬೆಳಿಗ್ಗೆಯಿಂದಲೇ ಜನರ ಬಳಿಗೆ ತೆರಳಿ ಖುದ್ದಾಗಿ ಕುಂದು ಕೊರತೆ ಆಲಿಸಿದ್ದೆ. ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳ ಬಗ್ಗೆ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆಂದು ಸಿಎಂ ಇದೇ ವೇಳೆ ತಿಳಿಸಿದ್ದಾರೆ.
ಉದ್ಯೋಗಕ್ಕೆ ಭರ್ಜರಿ ಡಿಮ್ಯಾಂಡ್!
ಇಂದಿನ ಜನಸ್ಪಂದನಕ್ಕೆ ಉದ್ಯೋಗ ಬೇಡಿಕೆಯೊಂದಿಗೆ, ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಆಗಮಿಸಿದ್ದರು. ಸಾಧ್ಯವಾದ ಕಡೆಗಳಲ್ಲಿ ಉದ್ಯೋಗ ಹಾಗೂ ಮಾಸಾಶನ ಒದಗಿಸಲು ಸೂಚನೆ ನೀಡಲಾಗಿದೆ. ಜಿಲ್ಲಾ ಮಂತ್ರಿಗಳು ಜಿಲ್ಲಾಧಿಕಾರಿಗಳು ಸ್ಥಳೀಯವಾಗಿ ಜನರ ಸಮಸ್ಯೆ ಬಗೆಹರಿಸಿ ಎಂದು ಸೂಚನೆ ನೀಡಲಾಗಿದೆ. 3 ತಿಂಗಳ ನಂತರ ಮತ್ತೆ ಜನಸ್ಪಂದನ ನಡೆಸಲಾಗುತ್ತೆ, ಆಗ ಈ ಪ್ರಮಾಣದಲ್ಲಿ ಜನರು ತಮ್ಮ ಸಮಸ್ಯೆಗಳೊಂದಿಗೆ ಬರದಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ನೋಡಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ಸಿಎಂ ನೀಡಿದರು. ಈ ಎಚ್ಚರಿಕೆ ಮೂಲಕ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲಿ ಎಂದು ಸೂಚಿಸಿದ್ರು ಸಿಎಂ.

ಆರೋಗ್ಯ ಸಮಸ್ಯೆಯ ನೋವುಗಳು
ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಸಮಸ್ಯೆ ಸೇರಿ ಆರೋಗ್ಯ ಸಮಸ್ಯೆಯಿಂದ ವೈದ್ಯಕೀಯ ವೆಚ್ಚ ಭರಿಸುವ ಮನವಿ ಹೆಚ್ಚು ಸ್ವೀಕೃತವಾಗಿವೆ. ನಾನು ಮುಖ್ಯಮಂತ್ರಿಯಾದ ನಂತರ ಜನರ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಸುಮಾರು 25 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆಯು ಲಭಿಸುತ್ತದೆ ಎಂಬ ನಂಬಿಕೆಯಿಂದ ಜನ ಸರ್ಕಾರಿ ಆಸ್ಪತ್ರೆ ಬಿಟ್ಟು, ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವ ಕಾರಣ, ಅವರ ವೈದ್ಯಕೀಯ ವೆಚ್ಚಗಳೂ ಹೆಚ್ಚಾಗುತ್ತವೆ. ಆ ವೆಚ್ಚದಲ್ಲಿ ಸಣ್ಣ ಪ್ರಮಾಣವನ್ನ ಸರ್ಕಾರ ಈ ರೀತಿ ಭರಿಸಲು ಪ್ರಯತ್ನಿಸುತ್ತದೆ ಎಂದಿದ್ದಾರೆ ಸಿಎಂ.
ಮಕ್ಕಳ ಪೌಷ್ಟಿಕಾಂಶ ಸಮಸ್ಯೆ ಬಗ್ಗೆ ಅಹವಾಲುಗಳು ಬಂದಿದ್ದು, ಮಕ್ಕಳ ಪೌಷ್ಠಿಕತೆ ವೃದ್ಧಿಸುವ ಸರ್ಕಾರದ ವಿವಿಧ ಕಾರ್ಯಕ್ರಮಕ್ಕೆ 185 ಕೋಟಿ ರೂಪಾಯಿ ನಿಗದಿಯಾಗಿದೆ. 'ಅನೀಮಿಯಾ' ಇರುವ ಮಕ್ಕಳಿಗೆ ಔಷಧಿ, ಶಾಲಾ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ಪ್ರತಿದಿನವು ಹಾಲು, ಬಿಸಿಯೂಟ ನೀಡಲಾಗ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ರು. ಹಾಗೆ ಶಕ್ತಿ ಯೋಜನೆ ಅಭೂತಪೂರ್ವ ಯಶಸ್ವಿಯಾದರೂ, ಕೆಲವೆಡೆ ಬಸ್ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ 971 ಬಸ್ಸು ಖರೀದಗೆ ಅನುಮತಿ ನೀಡಲಾಗಿದ್ದು, ಅಗತ್ಯತೆ ಇರುವ ಕಡೆ ಹೆಚ್ಚು ಬಸ್ ಓಡಿಸಲು ತಿಳಿಸಲಾಗಿದೆ ಎಂದು ತಿಳಿಸಿದ್ರು ಸಿಎಂ ಸಿದ್ದರಾಮಯ್ಯ.












Click it and Unblock the Notifications