ಕುರ್ಚಿ ಕಾಳಗ; ಸಿದ್ದರಾಮಯ್ಯ ಜೊತೆಗೆ ಒಪ್ಪಂದ ಆಗಿದ್ದು, ನಿಜ: ಅಚ್ಚರಿ ಸತ್ಯ ಬಿಚ್ಚಿಟ್ಟ ಡಿ ಕೆ ಶಿವಕುಮಾರ್
ಗೋಕರ್ಣ, ಡಿಸೆಂಬರ್ 19: ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಒಂದು ಒಪ್ಪಂದವಾಗಿದೆ. ಹೈಕಮಾಂಡ್ ಒಂದು ಒಪ್ಪಂದಕ್ಕೆ ತಂದಿದೆ. ಆ ಪ್ರಕಾರ ನಾವಿಬ್ಬರೂ ನಡೆದುಕೊಂಡು ಹೋಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ನಮ್ಮ ಮಧ್ಯೆ ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ ಎಂಬ ಸಿಎಂ ಹೇಳಿಕೆ ಕುರಿತು ಗೋಕರ್ಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು, ಅವರು ಐದು ವರ್ಷ ಇರಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ಹೈಕಮಾಂಡ್ ಅವರ ಪರ ಇಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರ ಇರುವುದಕ್ಕೆ ಅವರು ರಾಜ್ಯದ ಸಿಎಂ ಆಗಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದರು. ಸಿಎಂ ಬದಲಾವಣೆ ಆಗುವುದಿಲ್ಲವೇ ಎಂಬ ಬಗ್ಗೆ ಮಾತನಾಡಿ, ನೀವು ಆ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ. ನಮ್ಮಲ್ಲಿ ಅದು ಇಲ್ಲ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ ಎಂದರು.

ಕಳೆದ ಬಾರಿ ಬಂದಾಗ ನಿಮ್ಮ ಇಷ್ಟಾರ್ಥ ಸಿದ್ಧಿಯಾಗಿತ್ತು ಎಂದು ಹೇಳಿದ್ದೀರಿ, ಈ ಬಾರಿಯೂ ಆಗುವುದೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲವನ್ನು ನಾನು ಹೇಳುವುದಿಲ್ಲ. ಇದು ನನ್ನ ಹಾಗೂ ಆ ತಾಯಿ ಮಧ್ಯೆ ಇರುವ ವಿಚಾರ. ಭಕ್ತ ಹಾಗೂ ಭಗವಂತನ ನಡುವಣ ವಿಚಾರ.ವಿಘ್ನ ನಿವಾರಕ ವಿಘ್ನೇಶ್ವರನ ದರ್ಶನ ಪಡೆದಿದ್ದೇನೆ. ಮಹಾಬಲೇಶ್ವರನಿಗೆ ಪೂಜೆ ಮಾಡಿದ್ದೇನೆ, ಗಂಗಾಧರೇಶ್ವರನಿಗೆ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಇಂದು ಗೋಕರ್ಣಕ್ಕೆ ಬಂದಿದ್ದು ದೇವರ ದರ್ಶನ ಭಾಗ್ಯ ನನಗೆ ಸಿಕ್ಕಿದೆ. ಐದು ವರ್ಷಗಳ ಹಿಂದೆ ಆಂದ್ಲೆ ಜಗದೇಶ್ವರಿ ತಾಯಿಯ ಬಳಿಗೆ ಬಂದು, ನಮ್ಮ ಕುಟುಂಬದ ವಿಚಾರವಾಗಿ ಪ್ರಾರ್ಥನೆ ಮಾಡಿದ್ದೆ. ಮತ್ತೆ ಇಲ್ಲಿಗೆ ಬರುವುದಾಗಿ ಪ್ರಾರ್ಥಿಸಿದ್ದೆ. ಅದರಂತೆ ಬಂದು ಜಗದೇಶ್ವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಮಾಡು ತಾಯಿ ಎಂದು ಪ್ರಾರ್ಥನೆ ಮಾಡಿರುವೆ. ನನಗೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವೆ. ಹಸನ್ಮುಖಿಯಾಗಿ ಇಲ್ಲಿಂದ ತೆರಳುತ್ತಿದ್ದೇನೆ ಎಂದು ತಿಳಿಸಿದರು.
ನಿಮ್ಮನ್ನು ಭ್ರಷ್ಟಾಚಾರದ ಪಿತಾಮಹ ಎಂದು ವಿಜಯೇಂದ್ರ ಕರೆದಿರುವ ಬಗ್ಗೆ ಕೇಳಿದಾಗ, ವಿಜಯೇಂದ್ರ ಅವರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡೋಣ. ಹೈಕಮಾಂಡ್ ಗೆ ನಾವು ಎಟಿಎಂ ಎಂದು ವಿಜಯೇಂದ್ರ ಹೇಳಿದ್ದಾರೆ. ಇದನ್ನು ಅವರು ಸಾಬೀತು ಮಾಡಬೇಕು. ಯಾವ ಲೆಕ್ಕಾಚಾರದ ಮೇಲೆ ಅವರು ಆರೋಪ ಮಾಡಿದ್ದಾರೆ. ಇಲ್ಲಿ ಸರಕಾರನಾ ನಾವು ದಿವಾಳಿ ಮಾಡಿ ದುಡ್ಡು ತೆಗೆದುಕೊಂಡು ಹೋಗಿ ಹೈಕಮಾಂಡ್ ಗೆ ಕೊಡುತ್ತಿದ್ದೇವೆ, ನಾವು ಹೈ ಕಮಾಂಡ್ ಗೆ ಎಟಿಎಂ ಎಂದು ಹೇಳಿದ್ದಾರೆ. ಈಗ ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಉಳಿದ ಉತ್ತರಕ್ಕೆ ಸಮಯ ಬರುತ್ತದೆ, ಕಾಲವೇ ಉತ್ತರ ನೀಡುತ್ತದೆ. ಅವರಿಗೆ ಏನು ಬೇಕೋ ಆ ಉತ್ತರ ಈಗಾಗಲೇ ನೀಡಿದ್ದೇನೆ ಎಂದರು.












Click it and Unblock the Notifications