ಅಂದು ಡಿ ಕೆ ಶಿವಕುಮಾರ್ ; ಇಂದು ಡಾ.ಕೆ ಸುಧಾಕರ್ ಗಡ್ಡ ಬಿಟ್ಟಿರೋ ಹಿಂದಿನ ಮರ್ಮವೇನು?
ಬೆಂಗಳೂರು, ಅಕ್ಟೋಬರ್ 10: ಈ ಹಿಂದೆ ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಿಂದ ಹೊರ ಬಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಮ್ಮ ಮೊದಲಿನ ಗೆಟ್ಟಪ್ ಬಿಟ್ಟು ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ರು, ಅದು ಅಲ್ಲದೇ ಡಿ ಕೆ ಶಿವಕುಮಾರ್ ಯಾಕೆ ಗಡ್ಡ ಬಿಟ್ಟಿದ್ದಾರೆ ಎನ್ನುವ ಚರ್ಚೆಯೂ ಸಹ ಶುರುವಾಗಿತ್ತು.
ಹೌದು, ತಿಹಾರ್ ಜೈಲಿನಿಂದ ಬಂದ ಬಳಿಕ ಡಿ ಕೆ ಶಿವಕುಮಾರ್ ಗಡ್ಡಧಾರಿಯಾಗಿದ್ರು, ಈ ಗಡ್ಡ ತಗಿಯಲು ಸಮಯ ಬರ್ಬೇಕು ಎಂದು ಆಪ್ತರ ಬಳಿಯೂ ಸಹ ಡಿ ಕೆ ಶಿವಕುಮಾರ್ ಹೇಳಿಕೊಂಡಿದ್ರು. ಅಲ್ಲದೇ ಗಡ್ಡ ಬಿಟ್ಟಿರುವುದರ ಹಿಂದೆ ಒಂದು ಶಪಥವನ್ನು ಸಹ ಡಿ ಕೆ ಶಿವಕುಮಾರ್ ಕೈಗೊಂಡಿದ್ರು. ಅದರಂತೆ 2023 ರ ಚುನಾವಣೆಯಲ್ಲಿ ಸೋಲು ಕಂಡ ಮಾಜಿ ಸಚಿವ ಡಾ. ಕೆ ಸುಧಾಕರ್ ಸಹ ಗಡ್ಡ ಬಿಟ್ಟಿರುವುದರ ಹಿಂದೆ ಏನಾದರೂ ಶಪಥ ಅಡಗಿದೆಯೇ ಎಂಬ ಚರ್ಚೆ ಜೋರಾಗಿದೆ.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಕೆ ಸುಧಾಕರ್ ಅವರು, ಮೊದಲು ನೀಟಾಗಿ ಸೇವ್ ಮಾಡುತ್ತಿದ್ರು. ಆದರೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕುರಿತು ಆತ್ಮವಿಶ್ವಾಸವನ್ನ ಹೊಂದಿದ್ದ ಡಾ. ಕೆ ಸುಧಾಕರ್ ಅವರು, ಕಾಂಗ್ರೆಸ್ ಅಭ್ಯರ್ಥಿಯಾದ ಪ್ರದೀಪ್ ಈಶ್ವರ್ ವಿರುದ್ಧ ಹೀನಾಯವಾಗಿ ಸೋಲು ಕಾಣುತ್ತಾರೆ. ಇನ್ನೂ ಸೋಲಿನ ಬಳಿಕ ಸುಧಾಕರ್ ಗಡ್ಡಬಿಟ್ಟು ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಲೋಕಸಭಾ ಸಮರಕ್ಕೆ ಸಜ್ಜು!
2023 ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಸುಧಾಕರ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಸುದ್ದಿಯೂ ಹರಿದಾಡುತ್ತಿದೆ. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಡಾ ಕೆ ಸುಧಾಕರ್ ಶ್ರಮಿಸುತ್ತಿದ್ದಾರೆ.
ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆಗೆ ವೇದಿಕೆ ಸಜ್ಜು!
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಡಾ. ಕೆ ಸುಧಾಕರ್ ಇಷ್ಟು ದಿನ ಸೈಲೆಂಟಾಗಿದ್ದು, ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡ ಬಳಿಕ ಡಾ. ಸುಧಾಕರ್ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆಗೆ ವೇದಿಕೆ ಸಜ್ಜುಗೊಳಿಸಿದ್ದಾರೆ.
ಇನ್ನೂ ರಾಜ್ಯ ಸರ್ಕಾರದ ವಿರುದ್ದ ಅಕ್ಟೋಬರ್ 11ರಂದು ಕಾಂಗ್ರೆಸ್ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ರೈತರ ಹೋರಾಟ ಆಯೋಜಿಸಿದ್ದಾರೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಜ್ಯ ಸರಕಾರಕ್ಕೆ ಸ್ವಲ್ಪ ಸಮಯ ಕೊಡಬೇಕು. ಹೀಗಾಗಿ ಈಗಲೇ ಸರಕಾರದ ವಿರುದ್ಧ ಏನೂ ಹೇಳಲ್ಲಎಂದು ಹೇಳುತ್ತಿದ್ದ ಸುಧಾಕರ್, ಸರಕಾರ 100 ದಿನಗಳನ್ನು ಪೂರೈಸಿದ ನಂತರ ವೈಫಲ್ಯಗಳ ಪಟ್ಟಿ ಮಾಡಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.












Click it and Unblock the Notifications