KRS Dam: ಪೂರ್ವ ಮುಂಗಾರು ಚುರುಕು: ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಏರಿಕೆ- ಇಲ್ಲಿದೆ ಸಂಪೂರ್ಣ ಮಾಹಿತಿ
ಮಂಡ್ಯ, ಮೇ 27: ಪೂರ್ವ ಮುಂಗಾರು ಚುರುಕಾಗಿರುವ ಕಾರಣ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಎರಡು ಅಡಿಗೂ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಿದ್ದು, ರೈತರು ಸಂತಸಗೊಂಡಿದ್ದಾರೆ.
ಕಳೆದ ಮೇ 14ರಲ್ಲಿ ಕೇವಲ 150 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಇಂದು ಜಲಾಶಯಕ್ಕೆ 3405 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇದರಿಂದಾಗಿ ಕೃಷ್ಣರಾಜಸಾಗರ ಜಲಾಶಯದಲ್ಲಿ 80 ಅಡಿ ಸಂಗ್ರಹವಾಗಿದ್ದ ನೀರಿನ ಮಟ್ಟ ಇದೀಗ 82.80 ಅಡಿಗೆ ಏರಿಕೆಯಾಗಿದೆ.

ಕಳೆದ ವರ್ಷ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಳೆಯಾಗದ ಕಾರಣ ಕೃಷ್ಣರಾಜಸಾಗರ ಸಾಗರ ಜಲಾಶಯ ಭರ್ತಿಯಾಗಲಿಲ್ಲ. ಈ ಮಧ್ಯೆ ಸಂಗ್ರಹವಾಗಿದ್ದ ಕಡಿಮೆ ಪ್ರಮಾಣ ನೀರನ್ನು ತಮಿಳುನಾಡಿಗೇ ಹರಿಸುವಂತಾಗಿತ್ತು. ಜೊತೆಗೆ ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ಕಟ್ಟು ನೀರು ಪದ್ಧತಿ ಅನುಸಾರ ಬೆಳೆಗಳಿಗೆ ನೀರು ಕೊಟ್ಟು ಇರುವ ಬೆಳೆಯನ್ನು ರಕ್ಷಣೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಬರದ ಭೀಕರತೆ ತುಂಬಾ ಜೋರಾಗಿಯೇ ಇತ್ತು.
ಸಾಮಾನ್ಯವಾಗಿ ಮೇ ಕೊನೇ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಮಳೆ ಬೀಳುವ ಸಾಧ್ಯತೆಗಳಿದ್ದು, ಈ ಬಾರಿ ಮೇ ಮಧ್ಯದಲ್ಲೇ ಪೂರ್ವ ಮುಂಗಾರು ಬೀಳುತ್ತಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.
ಕಾವೇರಿ ಜಲಾನಯನ ವ್ಯಾಪ್ತಿಯ ನಾಲ್ಕೂ ಜಲಾಶಯಗಳಲ್ಲೂ ನೀರಿನ ಸಂಗ್ರಹ ತೀವ್ರ ಕುಸಿತ ಕಂಡುಬಂದಿತ್ತು. ಹೀಗಾಗಿ ಜಲಾಶಯಗಳಲ್ಲಿ ಸಂಗ್ರಹವಾಗಿದ್ದ ನೀರನ್ನು ಕೇವಲ ಕುಡಿಯುವ ನೀರಿನ ಆಧ್ಯತೆಗೆ ಮಾತ್ರ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿ ರೈತರಿಗೆ ಯಾವುದೇ ಬೆಳೆ ಬೆಳೆಯದಂತೆ ಸೂಚನೆ ನೀಡಿತ್ತು. ಪರಿಣಾಮ ಭೂಮಿ ನೀರಿಲ್ಲದೆ ಬಣಗುಡುವಂತಾಗಿತ್ತು.
ಕಾವೇರಿ ಜಲಾನಯನ ವ್ಯಾಪ್ತಿಯ ಕೇರಳದ ವೈನಾಡು, ಕೊಡಗು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಚುರುಕಾಗಿರುವ ಕಾರಣ ಜಲಾಶಯಗಳಿಗೆ ಸ್ವಲ್ಪ ಮಟ್ಟಿನ ನೀರು ಹರಿದುಬರುವಂತಾಗಿದೆ. ಇದರಿಂದಾಗಿ ನೀರಿನ ಸಂಗ್ರಹದಲ್ಲಿ ನಿಧಾನವಾಗಿ ಏರಿಕೆಯಾಗಿರುವುದು ತುಸು ಸಮಾಧಾನ ತರಿಸಿದೆ.
ಕಳೆದ ಮೇ. 15ರಂದು ಕೃಷ್ಣರಾಜಸಾಗರ ಜಲಾಶಯದಲ್ಲಿ 79.70 ಅಡಿ ನೀರು ಸಂಗ್ರಹವಾಗಿದ್ದು, ಕೇವಲ 903 ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿತ್ತು. ಮೇ 16ರಂದು 1771 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದಲ್ಲಿ 80.00 ಅಡಿ ನೀರು ಸಂಗ್ರಹವಾಗಿತ್ತು. ಮೇ 17ರಂದು 1560 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದಲ್ಲಿ 80.25 ಅಡಿ ನೀರು ಸಂಗ್ರಹವಾಗಿತ್ತು. ಮೇ 18ರಂದು ಒಳ ಹರಿವು 1153 ಕ್ಯೂಸೆಕ್‌ಗೆ ಇಳಿಕೆಯಾಗಿದ್ದು, ಜಲಾಶಯದಲ್ಲಿ 80.40 ಅಡಿಗೆ ಏರಿಕೆಯಾಗಿತ್ತು. ಮೇ. 19ರಂದು ಜಲಾಶಯದಲ್ಲಿ 80.52 ಅಡಿ ನೀರು ಸಂಗ್ರಹವಾಗಿದ್ದು, 1 ಸಾವಿರ ಕ್ಯೂಸೆಕ್ಸ್‌ಗೆ ಒಳ ಹರಿವು ಇಳಿಕೆಯಾಗಿತ್ತು.
ಸೋಮವಾರದಿಂದ ಮತ್ತೆ ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ 1416 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದಲ್ಲಿ 80.72 ಅಡಿ ನೀರು ಸಂಗ್ರಹವಾಗಿತ್ತು. ಮಂಗಳವಾರ 81 ಅಡಿಗೆ ಏರಿಕೆಯಾಗಿದ್ದು, ಜಲಾಶಯಕ್ಕೆ 1823 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಬುಧವಾರದಂದು ಜಲಾಶಯಕ್ಕೆ 1456 ಕ್ಯೂಸೆಕ್ ಒಳ ಹರಿವಿದ್ದು, 81.20 ಅಡಿ ನೀರು ಸಂಗ್ರಹವಾಗಿತ್ತು.
ಮೇ. 23ರ ಗುರುವಾರ ಜಲಾಶಯದಲ್ಲಿ 81.45 ಅಡಿ ನೀರು ಸಂಗ್ರಹವಾಗಿದ್ದು, 1971 ಕ್ಯೂಸೆಕ್ ಒಳ ಹರಿವಿತ್ತು. ಮೇ 24ರಂದು 81.80 ಅಡಿಗೆ ಏರಿಕೆಯಾಗಿದ್ದು, 2509 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಮೇ. 25ರಂದು ಜಲಾಶಯದಲ್ಲಿ 82.30 ಅಡಿ ನೀರು ಸಂಗ್ರಹವಾಗಿದ್ದು, 3365 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಇಂದು ಜಲಾಶಯದ ನೀರಿನ ಮಟ್ಟ 82.80 ಅಡಿ ದಾಖಲಾಗಿದ್ದು, 3405 ಕ್ಯೂಸೆಕ್ ಒಳ ಹರಿವಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲೊಂದಾದ ಕೃಷ್ಣರಾಜಸಾಗರ ಮತ್ತು ಕಾವೇರಿ ಜಲಾನಯನ ವ್ಯಾಪ್ತಿಯ ಎಲ್ಲ ಜಲಾಶಯಗಳಲ್ಲೂ ನೀರಿನ ಸಂಗ್ರಹ ಹೆಚ್ಚುತ್ತಿರುವುದು ರೈತರಿಗೆ ಸಂತಸ ಮೂಡಿಸಿದ್ದರೆ, ಸರ್ಕಾರಕ್ಕೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ವಾರದೊಳಗೆ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ಯಾವುದೇ ತೊಂದರೆಯಾಗದೆ ಕೆ.ಆರ್.ಎಸ್. ಮತ್ತು ಇತರೆ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.












Click it and Unblock the Notifications