'ಸಿದ್ದರಾಮಯ್ಯ ರಾಜೀನಾಮೆ ಸನ್ನಿಹಿತ, ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಸೇರಿದಂತೆ ಹಲವರ ಪೈಪೋಟಿ'
ಹುಬ್ಬಳ್ಳಿ, ಜನವರಿ 16: ಕಾಂಗ್ರೆಸ್ಸಿನ ಒಳಜಗಳ ಯಾವುದೇ ಪ್ಯಾಚಪ್ ಆಗಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ. ಅವರು ಏನೇ ಪ್ರಯತ್ನ ಮಾಡಿದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಡಿಸಿಎಂ ಅಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ ಜನಪರ ಸರ್ಕಾರವಲ್ಲ ಇದು ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ಬಿವೈ ವಿಜಯೇಂದ್ರ ವಾಗಿ ನಡೆಸಿದರು. ಒಂದು ಕಡೆ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಿ ಎಂದು ಹೇಳಿಕೆ ನೀಡಿದ್ದರೆ, ಇನ್ನೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಸಿಎಂ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಿಳಿಸಿದರು.

ಮೈಸೂರಿನ ಮುಡಾ ಹಗರಣದಡಿ ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಮುಖ್ಯಮಂತ್ರಿಗಳ ಕುಟುಂಬ ಅಕ್ರಮವಾಗಿ ಪಡೆದುಕೊಂಡಿತ್ತು. ನಿವೇಶನಗಳನ್ನು ಹಿಂತಿರುಗಿಸಿದರೂ ತಪ್ಪು ತಪ್ಪೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಅಪರಾಧ ಅಪರಾಧವೇ, ನಿವೇಶನ ಹಿಂತಿರುಗಿಸಿದ ಮಾತ್ರಕ್ಕೆ ಕಳಂಕದಿಂದ ಹೊರಕ್ಕೆ ಬರಲು ಸಾಧ್ಯವಿಲ್ಲ. ಇವತ್ತು ಸ್ನೇಹಮಯಿ ಕೃಷ್ಣರ ಮೇಲೆ ಬೆದರಿಕೆ ಹಾಕಿ ಕೇಸುಗಳನ್ನು ಹಾಕುತ್ತಿದ್ದಾರೆ. ಇವೆಲ್ಲ ಷಡ್ಯಂತ್ರ, ಪಿತೂರಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.
ಸ್ನೇಹಮಯಿ ಕೃಷ್ಣ ನ್ಯಾಯಪರ ಹೋರಾಟ ಕೈಬಿಟ್ಟಿಲ್ಲ; ಅವರನ್ನು ಅಭಿನಂದಿಸುವೆ ಎಂದ ಅವರು, ಸ್ನೇಹಮಯಿ ಕೃಷ್ಣ ಅವರ ಕೋರಿಕೆಯಂತೆ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವುದೆಂಬ ವಿಶ್ವಾಸ ಇರುವುದಾಗಿ ಹೇಳಿದರು. 14 ನಿವೇಶನವಷ್ಟೇ ಅಲ್ಲ. ಇದರಲ್ಲಿ ಸುಮಾರು 5 ಸಾವಿರ ಕೋಟಿಗೂ ಹೆಚ್ಚಿನ ಹಗರಣ ನಡೆದಿದೆ. ಸಿದ್ದರಾಮಯ್ಯನವರು, ಕಾಂಗ್ರೆಸ್ ಸರಕಾರ ಬಂದಾಗಿನಿಂದ ಸಾವಿರಾರು ನಿವೇಶನಗಳನ್ನು ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಮಾರಿಕೊಂಡಿದ್ದಾರೆ ಎಂದು ಹೇಳಿದರು.
ಮುಡಾ ಹಗರಣ ವಿಷಯದಲ್ಲಿ ಬಿಜೆಪಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಯನ್ನೂ ನಾವು ಮಾಡಿದ್ದೆವು ಎಂದು ವಿವರಿಸಿದರು. ಅಕ್ರಮವೇ ನಡೆದಿಲ್ಲ ಎಂದಿದ್ದ ಸಿದ್ದರಾಮಯ್ಯನವರು, ಪರಿಹಾರ ಕೊಟ್ಟರೆ ನಿವೇಶನ ವಾಪಸ್ ಕೊಡುವುದಾಗಿ ಹೇಳಿದ್ದರು. ಬಳಿಕ ಯಾವುದೇ ಪರಿಹಾರವನ್ನೂ ಅಪೇಕ್ಷಿಸದೆ 14 ನಿವೇಶನಗಳನ್ನು ಮುಡಾಗೆ ಬರೆದುಕೊಡುವ ಕೆಲಸ ಮಾಡಿದ್ದಾರೆ. ಅಕ್ರಮ ನಡೆದುದು ಮುಖ್ಯಮಂತ್ರಿ ಕುರ್ಚಿಗೆ ಕಂಟಕವಾಗಿದೆ ಎಂಬುದು ನಮ್ಮ ಹೋರಾಟದ ಪರಿಣಾಮವಾಗಿ ಸಿದ್ದರಾಮಯ್ಯನವರಿಗೆ ಅರ್ಥವಾಗಿದೆ. ಬಳಿಕ ಆ ನಿರ್ಧಾರವನ್ನು ಸಿದ್ದರಾಮಯ್ಯನವರು ಕೈಗೊಂಡರು ಎಂದು ತಿಳಿಸಿದರು.












Click it and Unblock the Notifications