ತಾವು ತಪ್ಪು ಮಾಡಿರೋದಾಗಿ ರಾಜ್ಯಪಾಲರಿಗೆ ಭಯವಾಗಿದೆ- ಸಚಿವ ಜಮೀರ್ ಅಹ್ಮದ್
ಮೈಸೂರು, ಸೆಪ್ಟೆಂಬರ್ 02: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ( ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಪ್ರಕರಣದಲ್ಲಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿದೆ.
ಈ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿದ್ದು, ಸಿದ್ದರಾಮಯ್ಯ ವಿರುದ್ಧ ನಾನು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲಾ ಎಂದು ರಾಜ್ಯಪಾಲರೇ ಹೇಳಿದ್ದಾರೆ. ತಾವು ತಪ್ಪು ಮಾಡಿರೋದಾಗಿ ರಾಜ್ಯಪಾಲರಿಗೆ ಭಯವಾಗಿದೆ. ರಾಜಭವನ ಚಲೋ ಹೋರಾಟ ಮಾಡಿದಾಗ ರಾಜ್ಯಪಾಲರು ಮಾತನಾಡಿದರು. ಈ ವೇಳೆ ನಾನು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ. ವಿಚಾರಣೆ ಮಾಡಲಷ್ಟೇ ಸೂಚಿಸಿದ್ದೇನೆ ಅಂತಾ ಶಾಸಕರ ಎದುರೇ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.

ಇನ್ನು ರಾಜ್ಯಪಾಲರಿಗೂ ಸತ್ಯ ಗೊತ್ತಿದೆ. ಬಿಜೆಪಿ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ. ನಾನು ತಪ್ಪು ಮಾಡಿಬಿಟ್ಟೆ ಅಂತಾ ರಾಜ್ಯಪಾಲರಿಗೆ ಭಯ ಬಂದಿದೆ. ತಮಗೆ ಕಳಂಕ ಬರುತ್ತದೆ ಎನ್ನುವ ಆತಂಕ ಬಂದಿದೆ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆ ಅಂತ ನಮಗೂ ಅನಿಸುತ್ತಿದೆ. ಪ್ರಾಸಿಕ್ಯೂಷನ್‌ಗೆ ಕೊಟ್ಟ ಬಗ್ಗೆ ನಮ್ಮದೇನೂ ತಕರಾರಿಲ್ಲ. ಆದರೆ ನಿಯಮಗಳನ್ನು ಪಾಲಿಸಬೇಕಲ್ಲವೆ..? ಎಂದು ಪ್ರಶ್ನಿಸಿದರು.
ಜುಲೈ ತಿಂಗಳಲ್ಲಿ ಒಂದೇ ಗಂಟೆಯಲ್ಲಿ ಪ್ರಾಸಿಕ್ಯೂಷನ್‌ಗೆ ಕೊಡುತ್ತಾರೆ. ಕುಮಾರಸ್ವಾಮಿಗೆ 8 ತಿಂಗಳಿಂದ ಪ್ರಾಸಿಕ್ಯೂಷನ್‌ಗೆ ಲೋಕಾಯುಕ್ತರು ಕೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಎನ್ನುತ್ತಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಖಾಸಗಿ ವ್ಯಕ್ತಿ ಕೇಳಿದರೆ ಕೊಟ್ಟುಬಿಡುತ್ತಾರೆ. ಬಿಜೆಪಿ ಅವರಿಗೆ ಸಿದ್ದರಾಮಯ್ಯ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಕಾಂಗ್ರೆಸ್, ಸಿಎಂ, ಭಾಗ್ಯಗಳಿಗೆ ತೊಂದರೆ ಮಾಡಲು ಹೀಗೆ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಸಿದ್ದರಾಮಯ್ಯಗೆ ಗೆಲುವು ಸಿಗಲಿದೆ. ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸವಿದೆ. ಕೇವಲ ಐದು ವರ್ಷ ಅಲ್ಲ, ಮುಂದಿನ 10 ವರ್ಷಗಳೂ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಭರವಸೆ ವ್ಯಕ್ತಪಡಿಸಿದರು.












Click it and Unblock the Notifications