Minister DK Shivakumar: ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧ; ಸಂಪುಟ ಸಭೆಯಲ್ಲಿ ಚರ್ಚೆ: ಡಿ ಕೆ ಶಿವಕುಮಾರ್
ಬೆಂಗಳೂರು, ಮೇ 31: ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧರಾಗಿದ್ದೇವೆ. ಅಧಿಕಾರಿಗಳು ತಮ್ಮ ಅಭಿಪ್ರಾಯ, ಸಲಹೆ ತಿಳಿಸಿದ್ದಾರೆ. ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ನಮ್ಮ ಪ್ರಣಾಳಿಕೆ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಅಧಿಕಾರಿಗಳು ಸಚಿವರುಗಳಿಗೆ ಮಾಹಿತಿ ನೀಡಿ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಧಿಕಾರಿಗಳು ರಾಜ್ಯದ ಆರ್ಥಿಕತೆ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅನೇಕ ಆಯ್ಕೆಗಳನ್ನು ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧರಾಗಿದ್ದೇವೆ. ಅಧಿಕಾರಿಗಳು ತಮ್ಮ ಅಭಿಪ್ರಾಯ, ಸಲಹೆ ತಿಳಿಸಿದ್ದಾರೆ. ಗುರುವಾರದ ಬದಲು ಶುಕ್ರವಾರ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ಮಾಡಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ. ಯಾರು ಕೂಡ ಊಹಾಪೋಹಗಳಿಗೆ ಅವಕಾಶ ನೀಡಬೇಡಿ. ಆ ಬಗ್ಗೆ ಹೆಚ್ಚಿನ ಗಮನ ನೀಡಬೇಡಿ. ನಾವು ನಮ್ಮ ಪ್ರಣಾಳಿಕೆ, ಕೊಟ್ಟಿರುವ ಮಾತಿನ ಬಗ್ಗೆ ಅರಿವಿದೆ. ಈ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಕ್ಕೆ ತರುವುದು ನಮ್ಮ ಆದ್ಯತೆ ಎಂದರು.
ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಅವರು ಏನಾದರೂ ಹೇಳಿಕೊಳ್ಳಲಿ. ಸಲಹೆಯಾದರೂ ನೀಡಲಿ, ಒತ್ತಡ ಬೇಕಾದರೂ ಹಾಕಲಿ, ಹೋರಾಟ ಬೇಕಾದರೂ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವವರನ್ನು ತಡೆಯಲು ಸಾಧ್ಯವಿಲ್ಲ. ಬಿಜೆಪಿ ಈ ಹಿಂದೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಆಗ ಮಾತನಾಡಲಿಲ್ಲ.

ರೈತರಿಗೆ 10 ಗಂಟೆ ವಿದ್ಯುತ್ ಉಚಿತ ನೀಡುವುದಾಗಿ ಹೇಳಿದ್ದರು ಆಬಗ್ಗೆಯೂ ಮಾತನಾಡಲಿಲ್ಲ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳ ಪೈಕಿ ಕೇವಲ 50 ಭರವಸೆ ಈಡೇರಿಸಿದ್ದಾರೆ. ಆಗಲೂ ಮಾತನಾಡಲಿಲ್ಲ. ನಾವು ನಮ್ಮ ಯಾಜನೆಗಳನ್ನು ಕ್ರಮಬದ್ಧವಾಗಿ, ನ್ಯಾಯಬದ್ಧವಾಗಿ ಜಾರಿ ಮಾಡಿ ನ್ಯಾಯ ಒದಗಿಸಬೇಕು. ರಾಜ್ಯ ಹಾಗೂ ಮತದಾರ ಉಳಿಯಬೇಕು ಅದು ನಮ್ಮ ಗುರಿ" ಎಂದು ತಿಳಿಸಿದರು.
ಈ ಯೋಜನೆಗೆ ಕಂಡೀಷನ್ ಇರುತ್ತದೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಇಲ್ಲಿ ಕಂಡೀಷನ್ ಗಿಂತ ಒಂದು ವ್ಯವಸ್ಥಿತವಾಗಿ ಜಾರಿ ಮಾಡುವುದು ಮುಖ್ಯ. ಉಚಿತ ಬಸ್ ಪ್ರಯಾಣ ವಿಚಾರದಲ್ಲಿ ಯಾರಿಗೆ, ಯಾವ ಬಸ್, ಎಂಬ ವ್ಯವಸ್ಥಿತ ರೂಪದಲ್ಲಿ ಯೋಜನೆ ಜಾರಿ ಆಗಬೇಕಿದೆ. ನಿರುದ್ಯೋಗ ಭತ್ಯೆ ವಿಚಾರದಲ್ಲಿ ಪದವೀಧರ ಮನೆಯಲ್ಲಿದ್ದಾನಾ ಅಥವಾ ಖಾಸಗಿ ಕೆಲಸದಲ್ಲಿ ಇದ್ದಾನಾ? ಖಾಸಗಿಯಲ್ಲಿ ಆತನ ಪರಿಸ್ಥಿತಿ ಏನು? ಎಂಬ ಲೆಕ್ಕಾಚಾರ ಮಾಡಬೇಕು. ನಾವು ವಿರೋಧ ಪಕ್ಷಗಳಾಗಲಿ ಅಥವಾ ಬೇರೆಯವರ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ತಿಳಿಸಿದರು.
ನಿಮ್ಮ ಯೋಜನೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಆರ್ಥಿಕ ಇಲಾಖೆ ಅಧಿಕಾರಿಗಳು ಅವರ ಸಲಹೆ ನೀಡಿದ್ದಾರೆ. ಅನೇಕ ಆಯ್ಕೆ ನೀಡಿದ್ದಾರೆ. ನಾವು ಅದನ್ನು ಅಧ್ಯಯನ ಮಾಡಿ, ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.












Click it and Unblock the Notifications