ಯಾವುದು ನಿಮ್ಮ ಶಿಷ್ಟಾಚಾರ?; ಆರ್ ಅಶೋಕ್, ನನಗೂ ಸರ್ಕಾರ ಮನೆ ಕೊಟ್ಟಿಲ್ಲ: ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ
ಬೆಂಗಳೂರು, ಜುಲೈ 17: ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ನೂರಾರು ಪತ್ರ ಬರೆದಿದ್ದೇವೆ. ಒಂದಕ್ಕೂ ಉತ್ತರ ಕೊಟ್ಟಿಲ್ಲ. ಶಿವಮೊಗ್ಗದಲ್ಲಿ ಸಭೆಗೆ ಕರೆಯದೆ ಶಿಷ್ಟಾಚಾರ ಉಲ್ಲಂಘಿಸಿದ ಮಾತನಾಡುತ್ತಾರೆ. ನೀವು ಯಾವ ಶಿಷ್ಟಾಚಾರವನ್ನು ಗೌರವಿಸುತ್ತೀರಿ ಮುಖ್ಯಮಂತ್ರಿಗಳೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದರು. ನಾನು ವಿಪಕ್ಷ ನಾಯಕನಾಗಿ ಎರಡು ವರ್ಷವಾಗಿದೆ. ನನಗೆ ಸರಕಾರದ ಮನೆ ಕೊಟ್ಟಿಲ್ಲ ಎಂದು ಆರ್.ಅಶೋಕ್ ಅವರು ಕೇಳಿದ್ದಾರೆ. ನನಗೂ ಕೊಟ್ಟಿಲ್ಲ. ಆದರೆ, ನಾನು ನಿಮ್ಮನ್ನು ಕೇಳುತ್ತಿಲ್ಲ. ನನಗೊಂದು ಮನೆ ಕೊಡಬೇಕೆಂದು ನಿಮಗೆ ಅನಿಸುವುದಿಲ್ಲ. ನೀವು ಮೊದಲು ಶಿಷ್ಟಾಚಾರ ಪಾಲಿಸಿ, ಆಗ ಬೇರೆಯವರನ್ನು ಪ್ರಶ್ನಿಸುವ ಅವಕಾಶ ನಿಮಗೂ ಇರುತ್ತದೆ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ದಲಿತ ಅಧಿಕಾರಿಗಳಿಗೆ ಬಡ್ತಿ ಮೀಸಲಾತಿಯನ್ನು ಕೂಡಲೇ ಕೊಡಬೇಕೆಂದು ಆಗ್ರಹಿಸಿದರು. ದಲಿತರ ಬಗ್ಗೆ ಕೇವಲ ಮಾತಿನಲ್ಲಿ ಕಾಳಜಿ ತೋರದಿರಿ. ಕೆಲಸದಲ್ಲಿ ತೋರಿಸಿ ಎಂದು ಒತ್ತಾಯಿಸಿದರು. ದಲಿತ ಸಮುದಾಯಗಳ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ತಮಗೆ ಬಡ್ತಿಯಲ್ಲಿ ಮೀಸಲಾತಿ ಕೊಡುತ್ತಿಲ್ಲ ಎಂದಿದ್ದಾರೆ. ಜಾತಿ ಜನಗಣತಿಗೂ ಬಡ್ತಿಗೂ ಏನು ಸಂಬಂಧ ಇದೆ ಎಂದು ಪ್ರಶ್ನೆ ಮಾಡಿದರು.

ಬಡ್ತಿಯಲ್ಲಿ ಮೀಸಲಾತಿ ತಡೆದುದೇಕೆ ಎಂದು ಮಲ್ಲಿಕಾರ್ಜುನ ಖರ್ಗೆಯವರೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅದನ್ನು ನೀಡುವಂತೆ ತಿಳಿಸಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆಯವರು ಈಗಲಾದರೂ ದಲಿತರ ಪರವಾಗಿ ಮಾತನಾಡಿದ್ದಾರೆ. ಇದು ಸಂತೋಷದ ವಿಷಯ. ನರಿ ಮಾತು ಗಿರಿ ಕೇಳಲ್ಲ ಎಂಬಂತೆ ನಾವೆಷ್ಟೇ ಹೇಳಿದರೂ ಸರಕಾರ ಕೇಳುತ್ತಿರಲಿಲ್ಲ. ಇವತ್ತು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ ಮೇಲೆ ಸದ್ದು ಕೇಳುವಂತಾಗಿದೆ ಎಂದು ಹೇಳಿದರು.
ಇದೇ ಜುಲೈ 9ರಂದು ಸಿಎಂಗೆ ಇನ್ನೊಂದು ಪತ್ರ ಬರೆದಿದ್ದೇನೆ. ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲ್ಲೂಕು ಬಿದರಳ್ಳಿ ಹೋಬಳಿಯ ಕಾಡುಗೋಡಿ ಗ್ರಾಮದ ಸರ್ವೇ ನಂಬರ್ 1ರ 711 ಎಕರೆ ಭೂಮಿಯನ್ನು 1950ರಲ್ಲೇ ಕಾಡುಗೋಡಿ ಸಾಮೂಹಿಕ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನೀಡಿದ್ದರು. ಆಗ ಅದು ಅರಣ್ಯ ಭೂಮಿ ಆಗಿದ್ದು, ಅದನ್ನು ಸರಕಾರಕ್ಕೆ ಹಸ್ತಾಂತರ ಮಾಡಿದ್ದು, ಸರಕಾರದಿಂದ ಈ ಸಂಘದ ಮೂಲಕ ದಲಿತರಿಗೆ ಹಂಚಿಕೆ ಮಾಡಿದ್ದರು. 3 ಎಕರೆ, 4 ಎಕರೆ, 5 ಎಕರೆ ಹೀಗೆ ಕೊಡಲಾಗಿತ್ತು. ಅಲ್ಲಿ ಗ್ರಾಮವೂ ಇರಲಿಲ್ಲ. ಈಗ ದಿನ್ನೂರು ಗ್ರಾಮವಿದ್ದು, ಅಲ್ಲಿ ಒಂದು ಮನೆಯೂ ಇರಲಿಲ್ಲ ಎಂದು ತಿಳಿಸಿದರು.












Click it and Unblock the Notifications