ಬೆಂಗಳೂರಿನಲ್ಲಿ ಮೊದಲ ಸಂಚಾರಿ ಬಸ್ ನಿಲ್ದಾಣ : ಯಾವ್ಯಾವ ದಿನ ಎಲ್ಲೆಲ್ಲಿ ಇರಲಿದೆ ಈ ಬಸ್‌ಸ್ಟ್ಯಾಂಡ್..?
ಬೆಂಗಳೂರು, ಅಕ್ಟೋಬರ್ 09: ಶಕ್ತಿ ಯೋಜನೆ ಜಾರಿ ಬಳಿಕ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಯಥೇಚ್ಛವಾಗಿ ಹೆಚ್ಚಾಗಿದೆ. ಆದರೆ ಅದಕ್ಕೆ ತಕ್ಕಂತೆ ಪ್ರಯಾಣಿಕರಿಗೆ ಬೇಕಾದ ಮೂಲಸೌಕರ್ಯ ಇಲ್ಲ. ಹೀಗಾಗಿ ಇದರ ಕುರಿತಾಗಿ ಸರ್ಕಾರದ ಗಮನ ಸೆಳೆಯುವುದಕ್ಕೆ ಅಸಂಘಟಿತ ವಲಯದ ಮಹಿಳೆಯರು ಮುಂದಾಗಿದ್ದು, ಸಂಚಾರಿ ಬಸ್ ನಿಲ್ದಾಣ ಎಂಬ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ನಗರದಲ್ಲಿ ಮೊದಲ ಮೊಬೈಲ್ ಬಸ್ ಸ್ಟ್ಯಾಂಡ್ ಅಂದರೆ ಸಂಚಾರಿ ಬಸ್ ನಿಲ್ದಾಣ ಕಾರ್ಯನಿರ್ವಹಿಸುತ್ತಿದ್ದು, 'ಅಲ್ಲಿ ಸೇರೋಣ' ಎಂಬ ಮಹಿಳಾ ಉಪಕ್ರಮದ ಅಡಿಯಲ್ಲಿ ಈ ಚಲಿಸುವ ಬಸ್ ನಿಲ್ದಾಣ ಆರಂಭವಾಗಿದೆ. ಬೆಂಗಳೂರಿನ ಮೊದಲ ಮೊಬೈಲ್ ಬಸ್ ನಿಲ್ದಾಣ ಮೊಬಿಲಿಟಿಯ ಅಂತರವನ್ನು ನಿವಾರಿಸುವ ಉದ್ದೇಶ ಹೊಂದಿದ್ದು, ಅಸಂಘಟಿತ ವಲಯದ ಅಗತ್ಯಗಳನ್ನು ಹೇಗೆ ಪೂರೈಸಬಹುದು ಎಂಬ ನಿಟ್ಟಿನಲ್ಲಿ ಸಾರಿಗೆ ಇಲಾಖೆಯ ಗಮನ ಸೆಳೆಯಲು ಮುಂದಾಗಿದೆ.

ನಿನ್ನೇವರೆಗೂ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ಹಿಂಬದಿಯ ಹೊಸನಗರದಲ್ಲಿ ಸ್ಥಾಪನೆಯಾಗಿದ್ದ ಸಂಚಾರಿ ಬಸ್ ನಿಲ್ದಾಣ, ಅಲ್ಲಿಂದ ಅಕ್ಟೋಬರ್ 9 ಮತ್ತು 10 ರಂದು ಸೀಗೆಹಳ್ಳಿ ಮತ್ತು ಪ್ರಿಯಾಂಕ ನಗರ, ಅಕ್ಟೋಬರ್ 16 ರಿಂದ 18 ರಂದು ಗುರುವಾರ ಸಂತೆ ಪ್ರದೇಶ ಮತ್ತು ಅಕ್ಟೋಬರ್ 20 ರಿಂದ 21 ರಂದು ಬೈರಸಂದ್ರದಲ್ಲಿ ಇರಲಿದೆ ಎಂದು ಅಲ್ಲಿ ಸೇರೋಣ ಸಂಸ್ಥೆಯ ಸದಸ್ಯರು ಮಾಹಿತಿ ನೀಡಿದ್ದಾರೆ.

ಇನ್ನು ಇದರಲ್ಲಿ ನೋಂದಣಿ ವ್ಯವಸ್ಥೆ ಸಹ ಇದ್ದು, ಬಸ್ ಆಗಮನ, ಮತ್ತು ನಿರ್ಗಮನ ಕುರಿತಾದ ಮಾಹಿತಿ ಸಹ ಇರಲಿದೆ. ಇದಾದ ನಂತರ ಟಿವಿ ವ್ಯವಸ್ಥೆಯೊಂದಿಗೆ ಪ್ರಯಾಣಿಕರಿಗೆ ಹಲವು ಸೌಲಭ್ಯ ನೀಡಲಿದೆ. ಈ ಕಾನ್ಸೆಪ್ಟ್ ಗೆ ಬೆಂಬಲ ಸೂಚಿಸಲು ಕುರ್ಚಿ ಮೇಲೆ ಕುಳಿತರೆ ಕೌಂಟ್ ಆಗಲಿದ್ದು, ಸುಮಾರು 300ಕ್ಕೂ ಹೆಚ್ಚು ಮಂದಿ ಸಹಮತ ಸೂಚಿಸಿದ್ದಾರೆ.

ಒಟ್ಟಾರೆ ಬಹುತೇಕ ಮಹಿಳಾ ಮಣಿಯರೆ ಸೇರಿಕೊಂಡು ಮಾಡಿರುವ ಅಲ್ಲಿ ಸೇರೋಣ ಎಂಬ ಸಂಸ್ಥೆಯ ಮೂಲಕ ಸ್ಥಾಪಿಸಿರುವ ಈ ಸಂಚಾರಿ ಬಸ್ ನಿಲ್ದಾಣ ಅಸಂಘಟಿತ ವಲಯದ ಮಹಿಳೆಯರ ಗಮನ ಸೆಳೆಯುತ್ತಿದೆ. ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾಕಷ್ಟು ಮಂದಿ ಪ್ರಯಾಣಿಕರಿಗೆ ಯಾವ ರೀತಿ ಬಸ್ ನಿಲ್ದಾಣ ಇರಬೇಕು ಎಂಬ ಬಗ್ಗೆ ಇದು ಕೆಲಸ ಮಾಡುತ್ತಿದ್ದು, ಸಾರಿಗೆ ಇಲಾಖೆ ಸಹ ಇವರ ಧ್ಯೇಯೋದ್ದೇಶಗಳ ಗಮನ ಹರಿಸಲಿ ಎನ್ನುವುದು ಎಲ್ಲರ ಆಶಯ.











Click it and Unblock the Notifications